ಕೆಂಡಸಂಪಿಗೆಯಲ್ಲಿ ಇತ್ತೀಚಿಗೊಬ್ಬರು ಲೇಖನದ ಮೇಲೆ ಕಾಮೆಂಟು ಮಾಡುತ್ತ ಅಂದರು: ಅನಾಮಿಕತೆ ನನ್ನ ಜನ್ಮ ಸಿದ್ಧ ಹಕ್ಕು, ಇದನ್ನು ಕಾಪಾಡಲು ನಾನು ಹೋರಾಡುವುದಕ್ಕು ಸಿದ್ಧ. ಯೋಚಿಸ ಹತ್ತಿದೆ. ಹೌದಾ? ಹೀಗಾಗಲು ಸಾಧ್ಯವೇ? ಹೀಗಾದಲ್ಲಿ, ಇದಕ್ಕೊಂದು ಪರಿದಿಯ ಗೆರೆ ಇಲ್ಲದಲ್ಲಿ, ನಾವು ಏನೂ ಮಾಡಬಹುದು! ಚಿಕ್ಕವಳಿದ್ದಾಗ ನೋಡಿದ ಒಂದು ಚಲನಚಿತ್ರ ನೆನಪಾಯಿತು! ಅದರಲ್ಲಿ ಹೀರೋ ಏನೋ ಕುಡಿದ ತಕ್ಷಣ (ಅಥವ ಏನನ್ನೋ ಧರಿಸಿದಾಗ...ಮರೆತು ಹೋಗಿದೆ ವಿವರ) ಆತ ಯಾರಿಗೂ ಕಾಣಿಸುವುದಿಲ್ಲ..ಆತನ ಕ್ರತ್ಯಗಳು ಮಾತ್ರ ಅವನ ಇರುವಿಕೆಯ ಸಾಕ್ಷಿ. ನನಗೂ ಹಾಗಾಗ ಬೇಕೆಂದು ತುಂಬಾ ಆಶೆಯಿತ್ತು. ಹಾಗಾಗುವ ಸಾಧ್ಯವಿದ್ದಲ್ಲಿ?
ಮೊತ್ತ ಮೊದಲಿಗೆ, ಹಾಗಂತ ಬರೆದವರಿಗೆ ಅವ್ಯಾಚವಾಗಿ, ಅಶ್ಲೀಲವಾಗಿ, ಹಿಂದಿಲ್ಲ, ಮುಂದಿಲ್ಲದಂತೆ ಹೀನಾಮಾನವಾಗಿ ಬೈದು ಅನಾಮಿಕತೆಯ ಮುಸುಕೊಳಗಿಂದ ರಿಪ್ಲೈ ಮಾಡೋಣವೇ ಅಂತಾ ಒಂದು ಅತೀವ ಆಶೆ ಉಂಟಾಯಿತು, ಹ್ಯಾಗಿದ್ದರೂ ನಾನ್ಯಾರೂ ಅಂತಾ ಅವರಿಗೆ ಗೊತ್ತೇ ಆಗದಲ್ಲಾ! ಆಮೇಲೆ, ಅವರದಕ್ಕೆ ಇನ್ನೂ ಕೆಟ್ಟದಾಗಿ ಉತ್ತರ ಬರೆಯುತ್ತಾರೆ...ನಾನೇನು ಬಿಡುತ್ತೇನೋ...ನಾನು ಯಾರು ಅಂತಾ ಯಾರಿಗೂ ಗೊತ್ತಿಲ್ಲ..ನನ್ನ ಉಳಿದೆಲ್ಲದರ ಕೋಪ ಹೊರಹಾಕಲು ಇದೇ ಚಾನ್ಸ್. ಹೀಗೆಯೆ ಮುಂದುವರಿದಾಗ, ಕೆಂಡಸಂಪಿಗೆಯ "ಕೆಂಡ" ಮಾತ್ರ ಉಳಿಯುತ್ತದೆ! ಸಂಪಿಗೆ ಬಾಡಿ ಹೋಗಿ ಬಿದ್ದು ಬಿಡುತ್ತದೆ! ಹೇ...ನನಗೇನಂತೆ?
ಆದರೆ, ಹೀಗಾಗಲು ಸಾಧ್ಯವಿಲ್ಲ. ಅಂತರ್ಜಾಲದಲ್ಲಿ ಅನಾಮಿಕತೆಯ ಮುಸುಕು ಕೇವಲ ಭ್ರಮೆ! ಅಂತರ್ಜಾಲದಲ್ಲಿ ಮಾತು ನಡೆಯುವುದು ಪ್ಯಾಕೆಟು ಗಳ ಮೂಲಕ. ಬರೆದ ಪ್ರತಿ ಒಂದು ಅಕ್ಷರವೂ ಯುಗಲ ಅಂಕೆಯ ಸೊನ್ನೆ, ಒಂದು ಆಗಿ ಬದಲಾಗಿ, ಅವುಗಳನ್ನು ಸಣ್ಣ ಸಣ್ಣ ಪ್ಯಾಕೇಟುಗಳಲ್ಲಿ ತುಂಬಿ ಕಳುಹಲಾಗುತ್ತದೆ. ಪ್ರತಿಯೊಂದೂ ಪ್ಯಾಕೆಟಿನಲ್ಲೂ ಕಳಿಸಿದವರ ಮತ್ತು ಸ್ವೀಕರಿಸುವವರ ಐಪಿ ವಿಳಾಸ (IP Address) ವಿರುತ್ತದೆ ಅಂಚೆ ಪತ್ರದಂತೆ. ಪ್ರತಿಯೊಬ್ಬ ವಿಹಾರಿಯೂ ಆತನ ಐಪಿ ವಿಳಾಸವನ್ನು ಅವನ ಇಂಗುತಾಣಗಳಲ್ಲೆಲ್ಲ ಬಿಟ್ಟಿರುತ್ತಾನೆ! ಇದು ಹ್ಯಾಗಂದರೆ, ನಾವು ಹೊಸಬರೊಬ್ಬರೊಡನೆ ಪರಿಚಯ ಮಾಡಿಕ್ಕೊಳ್ಳುವಾಗ ಮೊದಲಿಗೆ ಹೆಸರು ಹಾಗೂ ಉಳಿದ ಮಾಹಿತಿ ಕೊಟ್ಟು ಪರಿಚಯ ಮಾಡಿಕೊಳ್ಳುವ ತರಹ ಅನ್ನ ಬಹುದು. ನಾವೇನೋ ಹೆಸರೂ ಕೇಳದೆ ಮಾತು ಶುರು ಮಾಡ ಬಹುದು. ಆದರೆ, ಅಂತರ್ಜಾಲ ವ್ಯವಹಾರ ಕ್ರಮ (protocol) ಮಾತ್ರ ಅನಾಮಿಕ ಪ್ಯಾಕೆಟುಗಳನ್ನು ಸ್ವೀಕರಿಸುವುದಿಲ್ಲ.
ಈ ಮಾಹಿತಿಯನ್ನ, ಬೇಕಿದ್ದಲ್ಲಿ, ಯಾವುದೇ ಅಂತರ್ಜಾಲ ಸರ್ವಿಸ್ ಕೊಡುವವರೂ ಪಡೆಯ ಬಹುದು. ಹಾಗೂ, ಅಷ್ಟಕ್ಕೆ ಬಂದಲ್ಲಿ ನ್ಯಾಯಾಲಯಕ್ಕೆ ಎಳೆಯಲೂ ಬಹುದು. ಇವಕ್ಕಂತಲೇ ಹೊಸ ಹೊಸ ಅಂತರ್ಜಾಲ ಕಾಯಿದೆಗಳ ದಿನಾ ಸೇರಿಕೆಯಾಗುತ್ತಿವೆ. ಇವುಗಳಲ್ಲಿ cyber bully, harassment, stalking ಗಳೂ ಸೇರಿವೆ. ಇದಕ್ಕೆ ಉದಾಹರಣೆ ಇತ್ತೀಚಿಗೆ ಲಾಸ್ ಏಂಜಲೇಸ್ ಕೋರ್ಟಿನಲ್ಲಿ ನಡೆದ ಹದಿಮೂರು ವಯಸ್ಸಿನ ಮೇಗನ್ ಳ ಒಂದು ಕೇಸು. ಮಕ್ಕಳ ಜಗಳದಲ್ಲಿ ಸೇರಿಕೊಂದು, ಆಕೆಯ ನೆರೆಮನೆಯ ಸಹಪಾಟಿಯ ತಾಯಿ ಒಬ್ಬ ಹುಡುಗನ ಸೋಗಿನಲ್ಲಿ ಅಂತರ್ಜಾಲದಲ್ಲಿ ಮುಸುಕು ಹಾಕಿ ಆಕೆಯ ಗೆಳೆತನ ಮಾಡಿ, ಕೊನೆಗೆ ಅವಳನ್ನು ದೂರ ಮಾಡಿದಂತೆ ನಾಟಕ ಮಾಡಿ, 'ನಿನ್ನಂತಹರು ಬದುಕ ಬಾರದ" ಅಂತಾ ಮೆಸ್ಸೇಜ್ ಕಳಿಸಿದಳು. ಆ ಹದಿಮೂರರ ಹೆರೆಯದ ಮನಸ್ಸು ಅದನ್ನು ತಡೆಯುವ ಶಕ್ತಿಯಿಲ್ಲದೆ ಆತ್ಮಹತ್ಯೆ ಮಾಡಿಕೊಂಡಿತು. ವಿಷಯ ಹೊರಗೆ ಬಂದಾಗ ಕೇಸು ಕ್ರಿಮಿನಲ್ ಕೋರ್ಟಿಗೆ ಹೋಯಿತು.
ಭೂಮಿ ಮೇಲೆ ಹುಟ್ಟಿದಾಗಲೇ ನಾವು ಅನಾಮಿಕತೆಯನ್ನು ಕಳಕೊಂಡಿದ್ದೆವೆ. ಆದರೂ, ನಾವು ಅನಾಮಿಕರಾಗಿ ವಾಸಿಸಲು ಸಾದ್ಯವಿದೆ. ಇತರರ ಪಾಡಿಗೆ ಹೋಗದೆ, ಹೊಸ ತೆರೆಗಳನ್ನೆಬಿಸದೆ, ತಲೆತಗ್ಗಿಸಿ ಎಲ್ಲದಕ್ಕೂ 'ಹೌದು' ಅನ್ನುತ್ತಾ, ನಮ್ಮ ನೋವು, ನಮ್ಮ ನಲಿವು ನಮ್ಮಲ್ಲೇ ಇಟ್ಟುಕೊಂಡು ಹೋದಲ್ಲಿ ಬಹುಶಃ ನಾವು ಅನಾಮಿಕರಾಗಿ ಬದುಕಿ, ಅನಾಮಿಕರಾಗಿ ಸಾಯ ಬಹುದೇನೊ, ಆದರೆ ಸಾಮಾನ್ಯವಾಗಿ ಹಾಗೆ ಬದುಕಲು ಇಷ್ಟ ಪಡುವುದಿಲ್ಲ.
ಆದರೆ ಇತರರ ಬಗ್ಯೆ ನಾವು ಏನೂ ಮಾತಾಡುವ, ಮಾಡುವ ಸ್ವಾತಂತ್ರ್ಯ ನಮಗೆ ಅನಾಮಿಕತೆಯ ಮುಸುಕಿನೊಳಗೆ ಬೇಕು ಎಂದಲ್ಲಿ ಅದು ಹ್ಯಾಗೆ ಸಾಧ್ಯ? ನ್ಯೂಟನನ ಮೂರು ನಿಯಮಗಳು ಎಲ್ಲಾ ಕಡೆಗೂ ಅನ್ವಯವಲ್ಲವೇನು?
