Tuesday, June 16, 2009

ನನ್ನ ಆತ್ಮಾವಲೋಕನ

ಕೆಂಡಸಂಪಿಗೆಯ ವೇದಿಕೆಗಳಲ್ಲಿ ಮತ್ತೆ ಮತ್ತೆ ನಮ್ಮಗಳ, ಅಂದರೆ ಅನಿವಾಸಿಗಳ, ತಲೆಗೆ ’ಆತ್ಮಾವಲೋಕ” ಎಂಬ ಪದವನ್ನು ಹ್ಯಾಮರ್ ನಿಂದ ಹೊಡೆದ ಹಾಗೆ ಹೊಡೆದದ್ದರಿಂದ ಇರಬೇಕು, ನನಗೆ ಈಗ ಈ ಪದ ಬಂದಾಗಲೆಲ್ಲಾ ಏನೂ ಅನ್ನಿಸುವುದಿಲ್ಲ: ಒಂದು ತರಹ ಇಮ್ಮ್ಯೂನಿಟಿ ಬಂದು ಬಿಟ್ಟಿದೆ. ಇಲ್ಲಾ, ಇಂಗ್ಲಿಷ್ ಪದ್ದತಿಯ ಪ್ರಕಾರ ನನ್ನ ನಕ್ಷತ್ರ ಜೆಮಿನಿಯಾಗಿರುವುದರಿಂದಲೂ ಇರಬಹುದು! ನಾನೇನು ಅಸ್ಟ್ರೋಲಜಿ ನಂಬದಿದ್ದರೂ, ಆ ತಿಂಗಳಲ್ಲಿ ಹುಟ್ಟಿದವರ ಗುಣಗಳನ್ನು ಓದಿದಾಗ ಇವೆರೇನು ನನ್ನ ಪರಿಚಯದವರೇನೋ ಎಂಬಂತೆ ನನ್ನ ಗುಣಗಳನ್ನೆ ಕೊಡಬೇಕಾದರೆ, ಇದ್ದರೂ ಇರಬಹುದು ಇವರು ಹೇಳುವುದೆಲ್ಲ ಸರಿ, ಎಂದೊಂಬ ಸಂಶಯ ಬರುತ್ತದೆ! ಅಥವಾ, ನನ್ನ ಮಗ ಹೇಳುವಂತೆ, ನನಗೆ ಎ.ಡಿ.ಡಿ. ("Attention Deficit Disorder" ) ಇದ್ದರೂ ಇರಬಹುದು! ಅಷ್ಟಕ್ಕೂ, ಈ ವೇದಿಕೆಯ ಕೆಲಜನರ ಒತ್ತಾಯ ನೋಡುವಾಗ, ನಮಗೇ ನಮ್ಮ ಬಗ್ಯೆ ಬ್ರೈನ್ ವಾಶ್ ಮಾಡಲು ಹೊರಟವರಂತೆ ಕಾಣುತ್ತದೆ...ಇವರೆಲ್ಲಾ ಸ್ಟ್ರಿಪ್ ಕ್ಲಬ್ ನ ರಸಿಕರಂತೆ ಅನ್ನಿಸುತ್ತದೆ. ಇನ್ನೂ ಬೆತ್ತಲಾಗಿ, ಇನ್ನೂ ಬೆತ್ತಲಾಗಿ....ನಿಮ್ಮಲ್ಲಿ ಇನ್ನೂ ಇದೆ ಏನೋ ಕುಂದು...ಏನೋ ಅಳಲು...ನೀವೆಲ್ಲ ಅದನ್ನ ಮುಚ್ಚಿಟ್ಟಿದ್ದೀರಾ...ನಾವು ನೋಡುತ್ತೇವೆ ನಿಮ್ಮೊಳ! ನೀವೆಲ್ಲಾ ದೇವರಾಣೆಯಾಗಿಯೂ ಸಂತೋಷವಾಗಿಲ್ಲಾ... ಏನೇ ಇರಲಿ, ಈ ಪದದ ಮೇಲಿನ ನನ್ನ ಆಸಕ್ತಿ ಪೂರ್ಣ ಹೋಗುವ ಮೊದಲೇ ಇದರ ಮೇಲೆ ಒಂದು ಲೇಖನ ಬರೆಯೋಣ ಅಂತ.

ಮೆಕಾನಿಕಲ್ ಇಂಜಿನೀಯರಿಂಗ್ ಓದುವ ನನ್ನ ಮಗ ಮಧುರ್, ನನ್ನೀ ಸುಂಟರ ಗಾಳಿಯಂತೆ ಸುಳಿದು ಬೇಗನೇ ಕಾಣೆಯಾಗುವ, ಬದಲಾಗುವ ಆಸಕ್ತಿಗಳನ್ನ ಗಮನಿಸಿ, ನನಗೆ ಈ ಎ. ಡಿ. ಡಿ. ತೊಂದರೆ ಇರಬಹುದಾಗಿ ಒಂದು ದೊಡ್ಡ ಡಯಾಗ್ನೋಸಿಸ್ ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ಅವನ ಗೆಳೆಯ, ಗೆಳತಿಯರೆಲ್ಲರ ಬಳಿಯೂ ಹೆಮ್ಮೆಯಿಂದ ಹೇಳಿಕೊಂಡು ಬಂದಿದ್ದಾನೆ, "ನಮ್ಮಮ್ಮನಿಗೆ ಎ.ಡಿ.ಡಿ. ಇದ್ದಾಗ್ಯೂ ಆಕೆ ಪಿ.ಎಚ್.ಡಿ. ಮಾಡಿದ್ದಾಳೆ!" ಈಗಾಗಲೇ ಹಲವು ಸಲ ಭೂಮಿಯ ಸುತ್ತಿ, ೭-೮ ದೇಶಗಳನ್ನ ಸಂದರ್ಶಿಸಿ ದಿನವೂ ನನ್ನೀ ಮನಸು ಇನ್ನೂ ವಿಶಾಲವಾಗುವಂತೆ ಮಾರ್ಗದರ್ಶನ ನೀಡುವ, ಇನ್ನೂ ಇಪ್ಪತ್ತೆರಡರ ಅವನಿಗೇನೋ ನಾನಂದರೆ ಬಹಳ ಹೆಮ್ಮೆ. ಪಿ.ಎಚ್.ಡಿ. ಮಾಡಿದ್ದಾಳೆ, ಸಾಮಾನ್ಯರಿಂದ ಭಿನ್ನಾಭಿಪ್ರಾಯ ಹೊಂದಿ, ಗೊಡ್ಡು ನಂಬಿಕೆಗಳಿಂದ ದೂರವಾಗಿ, ಮೂಗಿನ ನೇರಕ್ಕೆ ಮಾತಾಡಿಕೊಂಡು, (ಹೆಚ್ಚಾಗಿ ಅದರಿಂದಲೇ ಬರುವ) ತುಂಬಾ ತೊಂದರೆಗಳನ್ನು ಎದುರಿಸಿದರೂ, ಇನ್ನೂ ತುಂಬಾ ಸೆನ್ಸ್ ಆಫ಼ ಹ್ಯೂಮರ್ ಇಟ್ಟುಕೊಂಡಿದ್ದಾಳೆ ಅಂತ. ಅವನು ಐದು ವರ್ಷವಾಗುವ ವರೆಗೂ ನಾನು ಅವನ ಜತೆಯೆ ಮನೆಯಲ್ಲಿದ್ದೆ. ಅವನೊಡನೆಯೆ ಅವನು ನೋಡುವ ಎಲ್ಲಾ ಕಾರ್ಟೂನ್ ಗಳನ್ನ ನೋಡಿ, ಪುನಃ ಅದನ್ನೇ ನೋಡಿ, ತಿರುಗಿ ಅದನ್ನೇ ನೋಡಿ, ಎಲ್ಲ ಮಕ್ಕಳ ಪುಸ್ತಕಗಳನ್ನ ಓದಿ, ತಮಾಶೆಯಾಗಿ ತುಂಬಾ ಸಿಲ್ಲಿ ಸಿಲ್ಲಿ ಮಾತಾಡಿ ಕೊಂಡು, ತಾಯಿ-ಮಗ ಬೆಸುಗೆ ಪ್ರಾಸೆಸ್ ನಲ್ಲಿ ನಿರತಳಾಗಿದ್ದೆ. ಎರಡು ವರ್ಷದ ವರೆಗೆ ಶುದ್ಧ ಕನ್ನಡವನ್ನೇ (ಅಂಗಡಿಯಲ್ಲಿ ಸಿಕ್ಕಿದ ಎಲ್ಲಾ ಭಾಷೆಯ ಮಕ್ಕಳೊಡನೆಯೂ) ಮಾತಾಡಿದ ಮಗು, ಸ್ವಲ್ಪ ಮಕ್ಕಳೊಡನೆ ಬೆರೆಯಲಿ, ಇಂಗ್ಲಿಷ್ ಕೂಡ ಕಲಿಯಲಿ ಶಾಲೆಗೆ ಹೋಗುವ ಮುನ್ನ, ಎಂದು ಮನೆ ಪಕ್ಕದ ಮಾಂಟೆಸ್ಸಾರಿ ಶಾಲೆಗೆ ಬೆಳಗಿನ ಜಾವ ಮಾತ್ರಕ್ಕೆಂದು ಸೇರಿಸಿದ್ದಾಯಿತು. ಆಗ ತಾನೆ ಇಂಗ್ಲಿಷ್ ಕಲಿಯಲು ಶುರು ಮಾಡಿದ್ದನಷ್ಟೆ. ಒಂದು ದಿನ ನಾನು ಅವನನ್ನ ಮನೆಗೆ ಕರಕೊಂಡು ಬರಲು ಹೋದಾಗ, ಇನ್ನೊಂದು ಪುಟ್ಟ ಹುಡುಗಿ ’ನಿನ್ನಮ್ಮ ಸಿಲ್ಲಿಯಾಗಿ ಕಾಣುತ್ತಾಳೆ” ಎಂದುದನ್ನ ನನ್ನ ಮಗ ಬಹಳ ಸಂತೋಶವಾಗಿ ಸ್ವೀಕರಿಸಿ, "ಹೌದಲ್ಲಾ, ನನ್ನಮ್ಮ ತುಂಬಾ ಸಿಲ್ಲಿ. ಅದಕ್ಕೇ ನಂಗೆ ತುಂಬಾ ಇಷ್ಟ ಆಕೆ" ಎಂದು ಅಂದನಂತೆ! ಅದು ಅಮ್ಮನ ಬಗ್ಯೆ ಅವನ ಅವಲೋಕನ!

ಇನ್ನು ನನ್ನ ಜೀವನವನ್ನು ರೂಪಿಸುವಲ್ಲಿ ಮುಖ್ಯ ಪಾತ್ರವಹಿಸಿದ ನನ್ನ ಅಪ್ಪ ಮತ್ತು ಅಮ್ಮನ ಅವಲೋಕನ ನನ್ನ ಬಗ್ಯೆ ಹೇಗಿರಬಹುದು ಅಂತಾ ಯೋಚಿಸಿದೆ. ಲೇಟ್ ಆಗಿ ಮದುವೆಯಾದ ನಮ್ಮಪ್ಪ, ನಾನು ಹುಟ್ಟಿದಾಗ, ಇಡೀ ದಿನ ನನ್ನನ್ನೇ ನೋಡಿ ಕೊಂಡು ಕುಳಿತಿದ್ದರಂತೆ, ಏನೋ ಅದ್ಭುತ ಅವತರಿಸಿದಂತೆ! ಆ ಮೇಲೆ ನನ್ನನ್ನು ಅವರು ಹೋದಲ್ಲೆಲ್ಲ, ರಥಬೀದಿಯ ತಾಜಮಹಲ್ ಗೆ ಇಡ್ಲಿ ಸಾಂಬಾರ್, ತುಪ್ಪ/ಮಸಾಲೆ ದೋಸೆ ತಿನ್ನಲು, ಎಷ್ಟೊ ಸಲ ಕೆಲಸಕ್ಕೂ, ಪ್ರತಿ ಆದಿತ್ಯವಾರ ಬಾವಟೆ ಗುಡ್ಡೆ, ನೆಹರು ಮೈದಾನಕ್ಕೂ, ಕರಕೊಂಡು ಹೊಗುತ್ತಿದ್ದರು. ನಂತರ ಐದು ಮಕ್ಕಳಾದರೂ, ಅವರ ಕೊನೆಯ ವರೆಗೆ, ನಾನು ಅವರ ಅತ್ಯಂತ ಮುದ್ದಿನ ಮಗಳೆ ಆಗಿ ಉಳಿದೆ. ಲೆಖ್ಖದಲ್ಲಿ ನಾನಿಂದು ಮುಂದಿದ್ದಲ್ಲಿ ಅವರಂದು ಹಾಕಿದ ಬುನಾದಿಯೇ ಅದಕ್ಕೆ ಕಾರಣ. ಡ್ರಾಯಿಂಗ್, ಪೈಂಟಿಂಗ್, ಆರ್ಟ್ಸ್ ನಲ್ಲಿ ಆಸಕ್ತಿಯಿದ್ದರೆ ಅದಕ್ಕೆ ಕಾರಣ ನಮ್ಮಮ್ಮ. ಶಾಲೆಯಲ್ಲಿ ಎಲ್ಲಾ ಡ್ರಾಯಿಂಗ್, ಕ್ರಾಫ್ಟ್ಸ್ ನಲ್ಲೂ ನಾನೆ ಪ್ರಥಮ. ಯಾಕಂದ್ರೆ, ನಾನು ಶಾಲೆಯಲ್ಲಿ ಅದು ಹ್ಯಾಗೆ ಮಾಡುವುದು ಅಂತಾ ಕಲಿತು ಅಮ್ಮನಿಗೆ ಶುರು ಮಾಡಲು ಹೇಳಿ ಕೊಟ್ಟರೆ ಸರಿ, ಅವಳದನ್ನು ಇನ್ನೂ ಇಂಪ್ರೂವ್ ಮಾಡಿ, ಬಹಳ ಸುಂದರವಾಗಿ ಮಾಡಿ ಮುಗಿಸಿ ಕೊಡುತ್ತಿದ್ದಳು.

ನಮ್ಮಮ್ಮ ಮತ್ತು ಅಪ್ಪ (೧೯೯೯)

ನಾನಿಂದು ಜೀವನದ ಪ್ರತಿಯೊಂದು ಮುಖವನ್ನ ಅರಿಯ ಬೇಕು, ಪ್ರತಿಯೊಂದನ್ನು ಅನುಭವಿಸ ಬೇಕೆಂಬ ಕುತೂಹಲವಿದ್ದರೆ, ಅದು ಅವರ ಉತ್ಸಾಹಿ ಹಾಗೂ ಕುತೂಹಲ ಪೂರಿತ ಪ್ರವೃತ್ತಿಯಿಂದ. ಸ್ವಂತ ಯೋಚನೆ ಮಾಡುವಂತೆ ಪ್ರೋತ್ಸಾಹಿಸಿದ, ನನ್ನ ತೀರ್ಮಾನಗಳಿಗೆ ತುಂಬಾ ಬೆಲೆ ಕೊಟ್ಟ, ಅವರಿಬ್ಬರೂ ಯಾವುದೇ ಸಂಪ್ರದಾಯಗಳ ಗೊಡ್ಡು ನಂಬಿಕೆಯನ್ನ ನಮ್ಮ ಮೇಲೆ ಹೇರಿದ್ದು ನೆನಪಿಲ್ಲ. ಮಂಗಳೂರಿನ ರಥಬೀದಿಯ ರಸ್ತೆಯಲ್ಲಿ ಬಹುಶಃ ಪ್ರಥಮವಾಗಿ ಒಂದು ಹುಡುಗಿ ಸೈಕಲ್ ಬಿಡಲು ಕಲಿತಿದ್ದರೆ ಅದು ನಾನೆ ಅನ್ನಬಹುದು! ಅದೂ ನನ್ನ ಅಪ್ಪನೇ ಕಲಿಸಿಲು ಶುರುಮಾಡಿದ್ದು, ಅದೂ ಅಕ್ಕ ಪಕ್ಕದ ಹುಡುಗರೊಡನೆ! ನಾನೂ ಅಪ್ಪನೂ ಕಚ್ಚಾಡಿ ಚರ್ಚೆ ಮಾಡುವಾಗ, ಪಾಪ ಅಂತಾ ಅವರ ಸಹಾಯಕ್ಕೆ ನನ್ನ ತಮ್ಮನೊ ತಂಗಿಯೋ ಬಂದರೆ ಅವರನ್ನು ಗದರಿ ಇದು ನಮ್ಮ ನಮ್ಮ ಚರ್ಚೆ ನೀವು ತಲೆ ಹಾಕುವ ಅವಶ್ಯಕತೆ ಇಲ್ಲಾ ಅಂತಾ ಅವರನ್ನು ಸುಮ್ಮಗಾಗಿಸುತ್ತಿದ್ದರು. ಮಂಗಳೂರಲ್ಲಿ ಹುಡುಗಿಯರಿನ್ನೂ ಇಂಜಿನೀಯರಿಂಗ್ ಗೆ ಹೋಗಲು ಶುರುವಾಗದಿದ್ದ ಆ ಕಾಲದಲ್ಲಿ, ನನ್ನ ಪಿ.ಯು.ಸಿ. ಮುಗಿದ ತಕ್ಷಣ ’ಸುರತ್ಕಲ್ ಗೆ ಹೋಗಿ ಅಪ್ಪ್ಲಿಕೇಶನ್ ತರಲಾ ಇಂಜಿನೀಯರಿಂಗ್ ಗೆ” ಅಂತಾ ಕೇಳಿದ್ದರು. ನಾನಾಗ ಮೇರಿ ಕ್ಯೂರಿಯ ಪುಸ್ತಕದಿಂದ ಪ್ರಭಾವಿತಳಾಗಿದ್ದು, ಇಲ್ಲಾ ನಾನು ಭೌತ ಶಾಸ್ತ್ರ ಮುಂದೆ ಓದಬೇಕು ಅಂತಾ ಅದನ್ನು ತಳ್ಳಿ ಹಾಕಿದ್ದೆ. ಮುಂದೆ ನಾನು ಸುರತ್ಕಲ್ ನಲ್ಲಿ ಭೌತ ಶಾಸ್ತ್ರ ಸ್ನಾತಕ್ಕೊತ್ತರ ಪದವಿ ಮಾಡುತ್ತಿದ್ದಾಗ, ದಿನಾ ನನ್ನನ್ನು ಹಂಪನಕಟ್ಟೆಯಲ್ಲಿ ಬಸ್ಸು ಹತ್ತಿಸಿ ಹೋಗುತ್ತಿದ್ದರು.

ನಾನಂದರೆ ಅಷ್ಟು ಪ್ರೀತಿಯಿಂದ ನೋಡಿದ, ಅತ್ಯಂತ ಸುಂದರ ಬಾಲ್ಯವನ್ನು ನಮ್ಮೊದಗಿಸಿದ, ಅಷ್ಟು ಹೆಮ್ಮೆಯಿಂದಿದ್ದ ಅವರಿಬ್ಬರೂ ಇಂದಿಲ್ಲ, ಅವರ ನನ್ನ ಬಗ್ಯೆಯ ಅವಲೋಕನ ಕೇಳಲು! ನಮ್ಮಪ್ಪ, ಬಸವನಬೈಲ್ ರಾಮ ರಾಯರು, ಇಂದಿರುತ್ತಿದ್ದರೆ, ಈ ವರ್ಷ ಶತಮಾನದ ಭೇರಿ ಬಾರಿಸುತ್ತಿದ್ದರು. ೯೪ ನೇ ವಯಸ್ಸಿನಲ್ಲೂ ಅತೀ ಉತ್ಸಾಹಿಯಾಗಿ ದಿನಕ್ಕೆರಡು ಸಲ ವಾಕಿಂಗ್ ಗೆ ಒಬ್ಬರೆ ಹೋಗುತ್ತಿದ್ದ ಅವರು, ಬಹುಶಃ ಇರುತ್ತಿದ್ದರೆ ಹೇಳುತ್ತಿದ್ದರೋ ಏನೋ, ’ನನ್ನ ಮಗಳು ಭಾರತಿಯಷ್ಟು ಬುದ್ದಿವಂತೆ ಲೋಕದಲ್ಲಿ ಬೇರೆ ಯಾರೂ ಇಲ್ಲ”! ನಮ್ಮನ್ನಂತೂ ಮೌನವಾಗಿಯೇ ಮುಗುಳ್ನಗುತ್ತಾ ಅದನ್ನು ಅನುಮೋದಿಸುತ್ತಿದ್ದಳು. ಆದ್ದರಿಂದ ಇಲ್ಲಿಯ ಓದುಗರಿಗೆ ಅಲ್ಲಿಯೂ ನಿಷ್ಪಕ್ಷಪಾತದ ಅವಲೋಕನ ಸಿಗುವುದಿಲ್ಲ!

ಇನ್ನು ನನ್ನ ಆತ್ಮಾವಲೋಕನಕ್ಕೆ ಬರೋಣ. ಹಾಗೆ ನೋಡಿದರೆ ನನಗಿನ್ನೂ ಇದರ ಸ್ಪಷ್ಟ ಅರ್ಥ ಆಗಿಲ್ಲ. ಹಾಗಂದರೆ ನನ್ನ ಆತ್ಮವನ್ನು ಅವಲೋಕಿಸುವುದೆ? ಅದು ಹ್ಯಾಗೆ? ಮೊದಲಾಗಿ, ನನಗೆ ಆತ್ಮ ಎಂಬುದೊಂದು ಇದೆ ಎನ್ನುವುದೇ ಒಂದು ಅನುಮಾನದ ವಿಚಾರ. ನನ್ನ (ಅಹಂಕಾರ ರಹಿತ) ವೈಜ್ನಾನಿಕ ಮನೋಭಾವಕ್ಕೆ, ಈ ಆತ್ಮ ಎಂಬುದೊಂದಿದ್ದಲ್ಲಿ, ಭೂಮಿಯ ಮೇಲೆ ತಡವರಿಸದೇ ಹೆಚ್ಚುತ್ತಿರುವ ಜನ ಸಂಖ್ಯೆಗೆ ಆತ್ಮವನ್ನು ಎಲ್ಲಿಂದ ಹಾಗೂ ಯಾರು ಸಪ್ಪ್ಲೈ ಮಾಡುತ್ತಾರೆ, ಎಂಬ ಯೋಚನೆ ಧುತ್ತೆಂದು ಬರುತ್ತದೆ ನನಗೆ! ಈ ಭೂಮಿಯ ಕೆಲಸ ಮುಗಿದ ಮೇಲೆ, ಈ ಆತ್ಮಗಳೆಲ್ಲಾ ಇನ್ನೊಂದೆಡೆ (ಎಲ್ಲಿ?) ಪಾಪ್ಯುಲೇಶನ್ ಪ್ರಾಬ್ಲೆಮ್ ಉಂಟು ಮಾಡಬಹುದೇ ಎಂಬ ಇನ್ನೊಂದು ಸಂದೇಹವೂ ಬರುತ್ತದೆ! ಇದಕ್ಕೆ ಕಂಸರ್ವೇಶನ್ ನಿಯಮಗಳು ಅನ್ವಯವಾಗುವುದಿಲ್ಲವೆ? ಇದನ್ನೆಲ್ಲಾ ನೋಡಿದ್ದು ಯಾರು? ಅದರ ಅತೆಂಟಿಸಿಟಿ ಪರಿಶೀಲಿಸಿದ್ದು ಯಾರು? ಹೀಗೆಲ್ಲಾ ಹುಚ್ಚು ಪ್ರಶ್ನೆಗಳೇಳುತ್ತವೆ!

ಇನ್ನು, ನನ್ನ ಬಳಿ ಇದ್ದ ಮೂರು ನಿಘಂಟುಗಳಲ್ಲೂ ಈ ಪದ ಇಲ್ಲ! ಕನ್ನಡ ಕಸ್ತೂರಿ ಡಾಟ್ ಕಾಮ್ ನಲ್ಲೂ ಇಲ್ಲ! ಅದಕ್ಕೊಸ್ಕರ ನಾನು ಒಂದು ಕಡೆ ಕೂತು ಕೊಂಡು ನನ್ನ ಒಳಗೆಯೇನಿದೆ ಅಂತಾ ನೋಡಬೇಕೆ? ನಾನ್ಯಾಕೆ ಈ ಭೂಮಿ ಮೇಲೆ ಇದ್ದೇನೆ ಅಥವ ಅಮೆರಿಕಾದಲ್ಲಿದ್ದೇನೆ ಎಂದು ಗಹನವಾಗಿ ಯೋಚಿಸ ಬೇಕೆ? ಇಲ್ಲಾ ನನ್ನನ್ನು ನಾನೆ ಪ್ರತಿ ನಿಮಿಷವೂ ವಿಶ್ಲೇಶಿಸುತ್ತಾ ಸಮಯ ಹಾಳು ಮಾಡಬೇಕೆ? ಹಾಗೆ ಮಾಡಿದ್ದಲ್ಲಿ, ಆ ಒಬ್ಬ ಸೃಷ್ಟಿಕರ್ತ ಎಂಬೊಂದು ಎಂಟಿಟೀ ಇದ್ದಲ್ಲಿ, ಅವನಿಗೆ ಖಂಡಿತವಾಗಿಯೂ ಕೋಪ ಬರುವುದಿಲ್ಲವೆ? ಉದಾಹರಣೆಗೆ, ನೀವೊಂದು ಆಟಿಗೆ ಕಾರು ದುಡ್ಡು ಕೊಟ್ಟು ತಂದು, ಕೀ ಕೊಟ್ಟು ಮುಂದೆ ಹೋಗಲಿ ಅಂತಾ ಬಿಟ್ಟಲ್ಲಿ ಅದು ಹಾಗೆ ಮಾಡುವ ಬದಲಾಗಿ, ನಾನ್ಯಾಕೆ ಮುಂದೆ ಹೋಗ ಬೇಕು, ನನಗ್ಯಾಕಿದೆ ಈ ಕೀ, ನನಗ್ಯಾಕಿದೆ ನಾಲ್ಕು ಚಕ್ರ, ನನ್ನ ಕೀ ಯಾಕೆ ಮುಗಿದು ಹೋಗುತ್ತದೆ, ನಾನು ನೀನು ಹೇಳಿದಲ್ಲೇ ಯಾಕೆ ಹೋಗ ಬೇಕು...ನೀನ್ಯಾರು,....ಅಂತಾ ಅದರ ಕೆಲಸ ಮಾಡದೆ, ನಿಮ್ಮನ್ನೆ ಪ್ರಶ್ನಿಸಿದರೆ, ಅಥವಾ ನಿಂತಲ್ಲೆ ನಿಂತು ನಿಮ್ಮನ್ನೆ ಪೂಜಿಸುತ್ತಾ ಕುಳಿತರೆ, ನಿಮಗೆ ಕೋಪ ಬರುತ್ತೊ ಇಲ್ವೋ? ಇನ್ನು ಸೃಷ್ಟಿಕರ್ತ, ನಾವಂದುಕೊಂಡಂತೆ, ಉಪ್ಪು ಖಾರ ತಿಂದ ಮನುಷ್ಯನ ತರವಾಗಿದ್ದಲ್ಲಿ ಅವನಿಗೆ ಮಹಾ ಭಯಂಕರ ಕೋಪ ಬಂದೇ ಬರುತ್ತದೆ, ನನ್ನ ಕೇಳಿದರೆ!

ಸೃಷ್ಟಿಕರ್ತ ಎಂದು ಹೇಳುವಾಗ ನಾವು ಹೈಸ್ಕೂಲ್ ನಲ್ಲಿ ಓದಿದ ಒಂದು ಇಂಗ್ಲಿಷ್ ಪದ್ಯದ ನೆನಪಾಗುತ್ತದೆ. ಕವಿಯು ಬೆಳಗಿನ ಜಾವ ವಾಕಿಂಗ್ ಗೆ ಹೊರಟಿದ್ದಾಗ ನೋಡಿದ ದೃಶ್ಯವದು. ಪ್ರತಿಯೊಂದು ಜೀವಿಯೂ ಅದರಂತೆ ದೊಡ್ಡದೊಂದು ಮೂರ್ತಿ ಮಾಡಿ ಅದನ್ನೆ ದೇವರು ಎಂದು ಪೂಜೆ ಮಾಡುತ್ತಿದ್ದುವಂತೆ. ಕೆಂಡ ಸಂಪಿಗೆಯ ಕಾಮೆಂಟುಗಳನ್ನು ಉಪಯೋಗಿಸಬಹುದಾದಲ್ಲಿ, ಕಪ್ಪೆಯೊಂದು ಮಳೆಗಾಲದಲ್ಲಿ ಗದ್ದೆ ಬದಿಯಲ್ಲಿ ವಟರುವ ದೊಡ್ಡ ಗೋಂಕುರು ಕಪ್ಪೆಯ ಮೂರ್ತಿಯಿಟ್ಟು ಪೂಜಿಸುತ್ತದೆ....ಹುಳುವೊಂದು ದೊಡ್ದ ಕಂಬಳಿ ಹುಳವ ಪೂಜಿಸುತ್ತದೆ...ಇನ್ನು ನಾವು ಮನುಷ್ಯರು, ಸ್ವಲ್ಪ ಬುದ್ದಿ ಜಾಸ್ತಿ ಇದ್ದದ್ದರಿಂದಲೋ ಏನೋ (ಹಾಗಂತ ನಾವು ತಿಳಕೊಂಡಿದ್ದೇವೆ), ಮನುಶ್ಯನ ಆಕಾರ/ವಿಕಾರ/ವಿಚಾರದ, ಅಥವಾ ಮನುಷ್ಯ +ಪ್ರಾಣಿ ಕಾಂಬಿನೇಶನ್ ನ ದೇವರನ್ನು ಪೂಜೆ ಮಾಡುವುದಲ್ಲದೆ, ಪ್ರತಿಯೊಂದು ಪ್ರಕೃತಿಯ ಕ್ರಿಯೆಗೂ ಒಂದೊಂದು ದೇವರ ಮಾಡಿ, ದೇವರ ಬಗ್ಯೆ ದೊಡ್ಡ ದೊಡ್ಡ ಕತೆ ಕಟ್ಟಿ, ದಂತ ಪುರಾಣ ಪುಸ್ತಕ ಬರೆದು, ಟಿ.ವಿ. ಯಲ್ಲಿ ತೋರಿಸಿ, ಕೆಂಡಸಂಪಿಗೆಯಲ್ಲಿ ಚರ್ಚಿಸುವುದಲ್ಲದೆ, ಮತ್ತೆ ಅದರಲ್ಲೂ ಪಂಗಡಗಳಾಗಿ, ಆ ಪಂಗಡಗಳೊಳಗೆ, ದೇವರೇ ನಮಗೆ ಬಂದು ಹೇಳಿದ ಹಾಗೆ, ರೂಲ್ಸ್ ಸೃಷ್ಟಿಸಿ (ಅದರಲ್ಲೂ ಹೆಂಗಸರಿಗೆ ಜಾಸ್ತಿಯಾಗಿ), ನನ್ನ ದೇವರು ನಿನ್ನ ದೇವರಿಗಿಂತ ಮೇಲು, ನನ್ನ ನಂಬಿಕೆ ನಿನ್ನ ನಂಬಿಕೆಯಿಂದ ಮೇಲು... (ಚಿಕ್ಕ ಮಕ್ಕಳು ನನ್ನಾಟಿಗೆ ನಿನ್ನಾಟಿಗೆಕಿಂತ ಬೆಟರ್, ನನ್ನ ಎಕ್ಸ್-ಬಾಕ್ಸ್ ನ ಆಟ ನಿನ್ನ ಎಕ್ಸ್-ಬಾಕ್ಸ್ ನ ಆಟಕ್ಕಿಂತ ಬೆಟರ್, ಅಂತಾ ಹೇಳುವ ತರಹ) ಅಂತೆಲ್ಲ ಜಗಳ ಮಾಡಿ, ಒಬ್ಬರನ್ನೊಬ್ಬರು ಸಾಯಿಸಿ ಕೊಂಡು, ಆ ಮೇಲೆ ಆ ಅಜ್ನಾನವನ್ನೇ ಉಪ್ಪು ಖಾರ ಹಾಕಿ ಇನ್ನೂ ಬೆಳೆಸುತ್ತಾ, ತನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಮರಿಮಕ್ಕಳಿಗೆ ವಂಶಪಾರಂಪರ್ಯವಾಗಿ ಕ್ರೊಮೊಸೋಮ್, ಜೀನ್ಸ್ ನ ಜ್ಯೊತೆ ಅದನ್ನೂ ಬಳುವಳಿ ಕೊಟ್ಟು ಮುಂದುವರಿಯುತ್ತೇವೆ!

ಲೋಕದಲ್ಲಿ ನಮಗೆ ಇರುವ ಸಮಯ ಬಹಳೆ ಸ್ವಲ್ಪ. ನಾನು ಮನುಷ್ಯಳಾಗಿ ಹುಟ್ಟಿದ್ದೇನೆ. ಆದ್ದರಿಂದ ನಾನು ಖಂಡಿತ ತಪ್ಪು ಮಾಡುತ್ತಲೇ ಇರುತ್ತೇನೆ. ಅದು ನಾನು ಭಾರತದಲ್ಲಿದ್ದರೂ ಮಾಡುತ್ತಿದ್ದೆ. ಇಲ್ಲಿಯವರು ಹೇಳುವ ತರಹ: ಹಿಂದಿನದ್ದು ಯಾವಾಗಲೂ ೨೦/೨೦ ದೃಷ್ಟಿ (hind sight is always 20/20). ಆಗಿ ಹೋದ ಮೇಲೆ ಊಪ್ಸ್ ಹಾಗೆ ಮಾಡ ಬಾರದಿತ್ತು ನನಗೆ ಬುದ್ದಿಯಿಲ್ಲಾ...ಅಂತ ನಿಂತಲ್ಲೇ ನಿಂತರೆ ಬಹುಶಃ ನನ್ನ ಜೀವನದ ಉಳಿದ ದಿನಗಳೂ ಹಿಂದಿನದ್ದನ್ನು ಯೋಚಿಸಿಯೇ ಹಾಳಾಗಬಹುದು.

ನಾನು ನಮ್ಮ ದೇಶ ಬಿಟ್ಟು ಇಲ್ಲಿ ಬಂದದ್ದರಿಂದ ನನಗೆ ನಷ್ಟವಾಗಿದೆಯೇ? ಕೆಲವು ಸಲ ಹಾಗೆ ಅಂತ ಯೋಚಿಸುತ್ತೇನೆ. ನನ್ನ ಒಡಹುಟ್ಟಿದವರಿಂದ ದೂರ ಇದ್ದೇನೆ, ಅವರನ್ನು ಬೇಕೆಂದಾಗ ನೋಡುವ ಹಾಗಿಲ್ಲ....ಮತ್ತೆ ನೆನಪಾಗುತ್ತೆ. ಲಾಭವೂ ಆಗಿದೆ. ಕೆಲವು ಕಳಕೊಂಡೆ, ಕೆಲವು ಪಡಕೊಂಡೆ. ನನ್ನ ಅನುಭವದ ಪಾತ್ರೆ ತುಂಬಿ ಹರಿದಿದೆ. ಮನಸು ವಿಶಾಲವಾಗಿದೆ ಮೊದಲಿನಿಂದ. ಲೋಕದ ಎಲ್ಲಾ ಮೂಲೆಯ ಜನರೊಡನೆ ಬೆರೆಯುವ, ಅವರ ಸಂಸ್ಕೃತಿಯ ಬಗ್ಯೆ ಸ್ವಲ್ಪವಾದರೂ ತಿಳಿಯುವ ಚಾನ್ಸ್ ಯಾವುದೇ ಒಂದು ದೇಶದಲ್ಲಿ ಸಿಗುವಂತಿದ್ದರೆ ಅದು ಈ ದೇಶದಲ್ಲಿ ಮಾತ್ರ ಸಾಧ್ಯ. ಇಲ್ಲಿಯ ನೇಟಿವ್ ಅಮೇರಿಕನರ (ಅವರನ್ನು ಇಂಡಿಯನ್ ಎಂದು ಕರೆಯುತ್ತಾರೆ ಕೊಲಂಬಸ್ ಮಾಡಿದ ತಪ್ಪಿನಿಂದ) ಹೊರತು, ಉಳಿದ ಎಲ್ಲಾರೂ ನನ್ನಂತೆ ಬೇರೆ ದೇಶದಿಂದ ಬಂದವರೆ- ಕೊಲಂಬಸ್ ನ ಕಾಲದಿಂದ ಶುರುವಾಗಿ!

ನಮ್ಮ ಭಾರತದ ಸಂಸ್ಕೃತಿಯಲ್ಲದ ಇವರೊಡನೆಲ್ಲಾ ಹೊಂದಿ ಕೊಂಡು ಹೋಗಲು ಸಾಧ್ಯವೆ? ಯಾವುದು ಭಾರತೀಯ ಸಂಸ್ಕೃತಿ? ಧರ್ಮ ಪಂಥ ನೋಡದೆ ಎಲ್ಲರೊಡನೆ ತಾಳಿ ಸಹಬಾಳ್ವೆ ಮಾಡುವುದೆ? ಅಥವಾ ಜಿಡ್ಡು ಕಟ್ಟಿದ ಗೊಡ್ಡು ನಂಬಿಕೆಗಳನ್ನ, ಅದರ ಆಚಾರ ವಿಚಾರಗಳನ್ನ ಪ್ರಶ್ನಿಸದೆ ಪಾಲಿಸುವುದೇ? ಮೊದಲಿನದನು ಇಲ್ಲಿಯೂ ಮಾಡಲೇ ಬೇಕಾಗುತ್ತದೆ. ಎರಡನೇಯದು ನಾನು ಅಲ್ಲಿಯೂ ಮಾಡಿರಲಿಲ್ಲ. ಇಲ್ಲಿ ರೇಸಿಸ್ಮ್ ಇದೆಯೆ? ಖಂಡಿತವಾಗಿಯೂ. ಇಲ್ಲಿ ಲೋಕದಲ್ಲಿರಬಹುದಾದ ಎಲ್ಲ ತರಾವರಿ ರೇಸ್ ಗಳಿವೆ. ಆದ್ದರಿಂದ, ಇತರೇ ರೇಸ್ ನವರಿಗೆ ರೇಸಿಸ್ಮ್ ತೋರಿಸ ಬಹುದು, ಭಾರತಿಯರನ್ನು ಒಳಗೊಂಡು. ನಮ್ಮ ದೇಶದಲ್ಲೇ ಎಲ್ಲರೊಡನೆ ಹೊಂದಿಕೊಂಡು ಹೋಗಲು ಸಾಧ್ಯವೇ? ಈ ವೇದಿಕಗಳಲ್ಲೆ ನೋಡಿವುದಿಲ್ಲವೇ? ಓದುವುದಿಲ್ಲವೆ? ಎಡ ಪಂಥ, ಬಲ ಪಂಥ, ಮಧ್ಯ ಪಂಥ, ಓರೆ ಪಂಥ, ಕೋರೆ ಪಂಥ, ..., ಆ ಜಾತಿ, ಈ ಜಾತಿ...,ಸಿರಿವಂತ, ಬಡವ....ಆ ಭಾಷೆ, ಈ ಭಾಷೆ...ನಿವಾಸಿ, ಅನಿವಾಸಿ, ನಿಕೇತನಿ, ಅನಿಕೇತನ, ಬೌದ್ಧಿಕ, ಅನಾಗರೀಕ, ...ವಗೈರೆ ವಗೈರೆ.

ನಿಜ ಹೇಳುವುದಾದರೆ, ಟೆಕ್ಸಾಸ್ನಲ್ಲಿದ್ದಾಗ, ನನ್ನ ಆ ಒಂದು ಕತ್ತಲಿನ ತಿರುವಿನ ದಿನಗಳಲ್ಲಿ ನನ್ನ ಸಹಾಯಕ್ಕೆ ಬಂದವರು ಮಾತ್ರ ಹೆಚ್ಚಿನವರು ಬಿಳಿಯರಾಗಿದ್ದರು! ಅದರಲ್ಲೂ ನಮ್ಮ ನೆರೆಮನೆಯ ಬಿಳಿಯ ದಂಪತಿಗಳು, ಸ್ಟೀವ್ ಮತ್ತು ಮಾರ್ಶಾ, ನಾನು ಯಾಚಿಸದೆಯೆ ತಾವಾಗೇ ಮುಂದೆ ಬಂದು ಪ್ರತಿ ಹಂತದಲ್ಲೂ ನೆರವಾದರು. ನಾನು ಕೆಲಸಕ್ಕೆಂದು ಲಾಸ್ ಏಂಜಲೀಸ್ ಗೆ ಪ್ರಯಾಣ ಮಾಡುವ ದಿನಗಳಲ್ಲಿ, ನನ್ನ ಮಗನಿಗೆ ಲೀಗಲ್ ಗಾರ್ಡಿಯನ್ ಆಗಿ, ಮಧುರ್ ನ ಕ್ಲಾಸ್ಸಿನ ಅವರ ಮಗ ಡೇವಿಡ್ ನಂತೆ ಇವನನ್ನೂ ನೋಡಿಕೊಂಡು, ಇವನಿಗೋಸ್ಕರ ವಿಧ ವಿಧ ಸಸ್ಯಾಹಾರಿ ಆಹಾರ ಮಾಡುವುದನ್ನು ಇಂಟರ್ನೆಟ್ ನಲ್ಲಿ ಕಲಿತು ಕೊಂಡು, ಮಾಡಿದ ಸಹಾಯ ಬಹುಶಃ ಯಾವ ಭಾರತೀಯ ಅನಿವಾಸಿಯೂ ಮಾಡಿಲ್ಲ ನನಗೆ ನಾನಿಲ್ಲಿ ಇದ್ದ ೨೬ ವರ್ಷಗಳಲ್ಲಿ. ಬಹುಶಃ ಭಾರತದಲ್ಲಿದ್ದಾಗ್ಯೂ ಯಾರೂ ಮಾಡಿಲ್ಲ ನನಗೆ ಅಂತಹ ಸಹಾಯ. ಆವರೇ ನನ್ನ ಬಂಧುಗಳು.

ಮಾರ್ಶಾ ಮತ್ತು ಸ್ಟೀವ್ ಮಗ ಡೇವಿಡ್ ಜೊತೆ.

ಇಲ್ಲಿ ಗಂಡು ಹೆಣ್ಣು ಅಂತಾ ಡಿಸ್ಕ್ರಿಮಿನೇಶನ್ ಮಾಡುತ್ತಾರೆಯೆ ಕೆಲಸದಲ್ಲಿ. ಖಂಡಿತವಾಗಿಯೂ. ಭಾರತದಲ್ಲಿ ನಾನದನ್ನ ಅನುಭವಿಸಿದ್ದಿಲ್ಲವೆ? ಇಲ್ಲಿ ಬಂದ ಮೇಲೆ ನನ್ನ ಜೀವನದಲ್ಲಿ ಏರುಪೇರುಗಳಾಗಿವೆಯೆ? ಖಂಡಿತವಾಗಿಯೂ. ಅದು ಭಾರತಲ್ಲೂ ಆಗುವಂತದ್ದೆ. ಯಾರೋ ಹೇಳಿದಂತೆ ದೈನೇಶಿ (ಆ ಪದದ ಅರ್ಥ ಏನಂತಾ ಇನ್ನೂ ಗೊತ್ತಿಲ್ಲ) ಬಾಳು ಬಾಳುತ್ತಿದ್ದೇನೆಯೆ? ಈ ರಿಸೆಶನ್ ನಲ್ಲೂ, ನನ್ನ ಕೆಲಸ ಹೋದಾಗ್ಯೂ, ಇನ್ನೂ ಅಂತಹ ಹಲ್ಲು ಗಿಂಜಿ ಅಂಗಲಾಚಿ ಬೇಡುವ ದರಿದ್ರದ ಬದುಕು ಬಾಳುವ ಕಾಲ ಬಂದಿಲ್ಲ. ಬದಲು, ನನ್ನ ಕನ್ನಡ ಬರಹವನ್ನು ಪುನಹ ಶುರು ಮಾಡಲು ಇದು ಒಂದು ಸದವಕಾಶವಾಗಿದೆ.

ಯಾರೋ ಹೇಳಿದಂತೆ, ನಾನು ಜೀವ ಇರುವ ವರೆಗೆ ತಪ್ಪು ಮಾಡುವ ಅವಕಾಶವಿದೆ. ಬೀಳುವ ಅವಕಾಶವಿದೆ. ಹಾಗು ಏಳುವ ಅವಕಾಶವಿದೆ. ಹೊಸದನ್ನ ಕಲಿಯುವ ಅವಕಾಶವಿದೆ. ನಮ್ಮಮ್ಮ ಮತ್ತು ಅಪ್ಪ ಅಂತಹ ಬಡತನದಲ್ಲಿ ಅಷ್ಟು ಉತ್ಸಾಹಿಗಳಾಗಿ, ಮಕ್ಕಳಿಗೆಲ್ಲಾ ಏನೂ ತೊಂದರೆಯಾಗದ ಹಾಗೆ ಪ್ರೀತಿಯಿಂದ ನಾವು ಆರು ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಣಿವು ಮಾಡಿ ಕೊಟ್ಟು ದೊಡ್ಡದು ಮಾಡಿದ್ದಲ್ಲಿ, ನನಗೇನಾದರೂ ತೊಂದರೆಯಿದ್ದಲ್ಲಿ ಅದು ನಗಣ್ಯ ಅವರು ಎದುರಿಸಿದ ಕಷ್ಟದ ಎದುರು. ನನ್ನ ಅನುಭವದಂತೆ, ಬಾಳು ಒಂದು ಪ್ರವಾಹ. ನಮ್ಮನ್ನು ಮುಂದೆ ಅದಾಗೆ ಕೊಂಡೊಯ್ಯುತ್ತದೆ, ನಾವು ನಿಂತು ನಮ್ಮ ಅವಲೋಕನ ಮಾಡುತ್ತೇವೆಯೆಂದರೂ. ಹೊಸ ಹೊಸ ತಿರುವು ಬರುತ್ತದೆ. ಕೆಲವು ಸುಂದರ. ಕೆಲವು ಕಠಿಣ. ಇದರಲ್ಲಿ ನಾವೆಷ್ಟು ಪ್ಲಾನ್ ಮಾಡುತ್ತೇವೆ ಏಂದರೂ ನಮ್ಮ ಅಂಕೆಯಲ್ಲಿಯ ಅಂಶ ಬಹು ಕಡಿಮೆ. ಈ ಬಾಳಿನ ಪರ್ವತ ಹತ್ತುವಾಗ ಬಹುಶಃ ತುದಿಗಿಂತಲೂ, ಹಾದುಹೋಗುವ ಇಕ್ಕೆಲೆಗಳ ಸೌಂದರ್ಯವೇ ಜಾಸ್ತಿಯಿರಬಹುದು. ಹತ್ತಿದ ಮೇಲೆ ನಾವು ನೋಡುವುದಾದರೂ ಏನು? ದೂರದಿಂದ ಬಂದ ಹಾದಿಯನ್ನೇ ತಾನೆ? ಅದು ಬಹುಶಃ ಬಂದ ಹಾದಿಯ ಒಂದು ರೀಕ್ಯಾಪಿಚುಲೇಶನ್ ಅನ್ನ ಬಹುದು! ಇದು ನನ್ನ ಅವಲೋಕನ ನನ್ನ ಬಗ್ಯೆ!