Sunday, August 30, 2009

ಯಾರ ತಪ್ಪು? ಯಾರಿಗೆ ಶಿಕ್ಷೆ?

ಜೇಯ್ಸಿ ಲೀ ಡಗ್ಗಾರ್ಡ್ ನ ಕಥೆ ಓದುತ್ತಿದ್ದಂತೆ ಹೃದಯದಾಳದಲ್ಲೆಲ್ಲೋ ಅತೀವ ವೇದನೆಯಾಗುತ್ತದೆ. ೧೯೯೧ರಲ್ಲಿ ಹನ್ನೊಂದು ವರ್ಷದ ಹುಡುಗಿಯಾಗಿದ್ದಾಗ ಶಾಲೆಗೆ ಹೋಗುತ್ತಿದ್ದ ಈಕೆಯನ್ನು, ಅವಳ ಮಲ ತಂದೆಯ ಎದುರೇ, ಹಾರಿಸಿ ಕೊಂಡೊಯ್ದಿದ್ದ ಫಿಲ್ಲಿಪ್ ಗ್ಯಾರ್ರಿಡೊ. ಅಂದಿನಿಂದ ಇಂದು, ೧೮ ವರ್ಷಗಳ ನಂತರ, ಕೊನೆಗೂ ಸಿಕ್ಕು ಹಾಕಿಕೊಳ್ಳುವ ವರೆಗೆ, ಆ ಮಗುವನ್ನು ಹಿತ್ತಲಲ್ಲಿ ಒಂದು ಡೇರೆಯಲ್ಲಿ ಬಂಧಿಸಿ ಹಾಕಿ, ಅವನೂ ಅವನ ಪತ್ನಿಯೂ ಅತ್ಯಾಚಾರವೆಸಗಿದರು ಆ ಮಗುವಿನ ಮೇಲೆ. ಆ ಮಗು ಇಂದು ೨೯ ವರ್ಷದ ಯುವತಿ, ಎರಡು ಮಕ್ಕಳ ತಾಯಿ, ಮೊದಲನೇಯದು ೧೫ ವರ್ಷ, ಎರಡನೇಯದು ೧೧ ವರ್ಷ! ಈ ಮೂರು ಜನರ ವಾಸ ಹಿತ್ತಲ ಡೇರೆಯಲ್ಲಿ, ಹೊರಗಿನ ಸಂಪರ್ಕವಿಲ್ಲದೇ. ನಮ್ಮ ಕ್ಯಾಲಿಫೋರ್ನಿಯದಲ್ಲಿ ನಡೆದ ಈ ಕರುಣಾಮಯ ಘಟನೆ ಇನ್ನೂ ಪದರ ಬಿಚ್ಚುತ್ತಿದೆಯಷ್ಟೆ.

ಇಂದು ಫಿಲ್ಲಿಪ್ ಗ್ಯಾರ್ರಿಡೊ ಹಾಗೂ ಆತನ ಪತ್ನಿ ಪೋಲೀಸರ ವಶದಲ್ಲಿದ್ದಾರೆ, ತನಿಖೆ ಮುಂದುವರಿಯುತ್ತಿದೆ. ಈ ಮೊದಲು ಉಗ್ರ ಲೈಂಗಿಕ ಅತ್ಯಾಚಾರಕ್ಕೆ ಬಂಧಿಸಲ್ಪಟ್ಟು ಆ ಮೇಲೆ ಲೈಂಗಿಕ ಅತ್ಯಾಚಾರಿ ಎಂದು ಸರಕಾರದ ರಿಜಿಸ್ತ್ರಿಯಲ್ಲಿ ನೊಂದಾಣಿಸಲ್ಪಟ್ಟಿರುವ (ಹೀಗೆ ನೊಂದಾಣಿಸಲ್ಪಟ್ಟಿರುವವರ ಹೆಸರು ಹಾಗೂ ಎಲ್ಲಾ ಮಹಿತಿಗಳನ್ನು ಇಂಟರ್ನೆಟ್ ನಲ್ಲಿ ಹಾಕಿರುತ್ತಾರೆ), ಗ್ಯಾರ್ರಿಡೊನನ್ನು ಸರಕಾರದ ಕಾರ್ಯಕರ್ತ್ರರು ಆಗಾಗ ಆತನ ಮನೆಗೆ ಬಂದು ಪರಿಶೀಲಿಸುತ್ತಿದ್ದರು, ಈ ಮೂರೂ ಬಂಧಿತರು ಹಿತ್ತಲಲ್ಲಿದ್ದಾಗ್ಯೂ. ಮೂರು ವರ್ಷಗಳ ಕೆಳಗೆ ನೆರೆಮನೆಗೆ ಹೊಸದಾಗಿ ಬಂದಾಕೆ ಇವರ ಹಿತ್ತಲಲ್ಲಿರುವ ಡೇರೆಗಳು, ಹಾಗೂ ಅದರಲ್ಲಿ ನೆಲೆಸಿರುವ ಜನರನ್ನ ನೋಡಿ ಪೋಲೀಸರ ಕರೆದಿದ್ದಳು. ಪೋಲೀಸರು ಮನೆಯ ಒಳಗೆ ಮಾತ್ರ ಪರಿಶೀಲಿಸಿ ಹೋಗಿದ್ದರು.

ಅಮೇರಿಕಾದಲ್ಲಿ ಪ್ರತಿ ವರ್ಷ ಎಷ್ಟೊ ಮಕ್ಕಳು ಕಾಣೆಯಾಗುತ್ತವೆ. ಎಷ್ಟೊ ಮಕ್ಕಳ ಶವ ಆ ಮೇಲೆ ದೊರೆಯುತ್ತದೆ. ಸುಮಾರು ಹದಿನಾಲ್ಕು ವರ್ಷದ ಹಿಂದೆ, ತುಂಬಾ ಸುರಕ್ಷಿತ ಜಾಗವೆಂದು ಗಣಿಸಲಾದ, (ಟೆಕ್ಸಾಸಿನ) ಪ್ಲೇನೋದಲ್ಲಿ ಮನೆ ಪಕ್ಕದಲ್ಲೇ ಇರುವ ಪಾರ್ಕಲ್ಲಿ ಮಕ್ಕಳ ಸಾಕ್ಕರ್ ಆಟಕ್ಕೆ ಕುಟುಂಬಗಳೆಲ್ಲ ಸೇರಿದ್ದ ಜಾಗದಿಂದಲೇ, ಮಧ್ಯಾಹ್ನದ ಹೊತ್ತಿಗೆ, ೭ ವರ್ಷದ ಆಶ್ಲಿ ಎಂಬ ಚಿಕ್ಕ ಹುಡುಗಿಯನ್ನ ಅಪಹರಿಸಿ ಕೊಂಡೊಯ್ಯಲಾಗಿತ್ತು. ಅವಳ ಅಪ್ಪ ಅಮ್ಮ ಅಲ್ಲೇ ಪಕ್ಕದಲ್ಲಿದ್ದರು. ಈ ಮಗು ಆಟ ಆಡುತ್ತ ಕಣ್ಣೆದುರಿಂದ ಸ್ವಲ್ಪ ಆಚೆ ಹೋಗಿತ್ತು. ಕೂಡಲೇ ಪೋಲೀಸರು ಅನ್ವೇಶಣೆ ಶುರು ಮಾಡಿದ್ದರೂ, ಊರಿನ ಜನರೆಲ್ಲಾ ಸೇರಿ ಎಲ್ಲೆಲ್ಲೂ ಹುಡುಕಿದರೂ ಸಿಗದೆ, ಮರು ದಿನ ಆಕೆಯ ಶವ ಸಿಕ್ಕಿತ್ತು. ಅದನ್ನ ಸ್ವಲ್ಪ ದೂರದ ಜಾಗವೊಂದರಲ್ಲಿ ಎಸೆಯಲಾಗಿತ್ತು. ಮಗುವಿನ ಮೇಲೆ ಲೈಂಗಿಕ ಅತ್ಯಾಚಾರ ಎಸೆಯಲಾಗಿತ್ತು. ಇದು ಮುಂದೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ' Asley's Law" ಕ್ಕೆ ಕಾರಣವಾಯಿತು.

೧೯೮೧ರಲ್ಲಿ ಸಿಯರ್ಸ್ ಎಂಬ ಅಂಗಡಿಯಲ್ಲಿ ಕಾಣೆಯಾಗಿ ಕೊಲೆಯಾದ ೬ ವರ್ಷದ ಆಡಮ್ ವಾಲ್ಶ್ ನಿಂದಾಗಿ ಅತ್ಯಂತ ಜರ್ಜರಿತನಾದ ಅವನಪ್ಪ ಕೊನೆಗೆ ಇದರೆದುರು ಹೊಡೆದಾಡುವ ಛಲದಿಂದ ತನ್ನ ಜೀವನವನ್ನೆ ಇದಕ್ಕೆ ಮುಡುಪಾಗಿಟ್ಟು, ಟೆಲಿವಿಶನಿನಲ್ಲಿ ಇಂದೂ ನಡೆಯುತ್ತಿರುವ 'America's Most Wanted' ಕಾರ್ಯಕ್ರಮಕ್ಕೆ ಕಾರಣನಾದ.

ಹೀಗೆ ಕಾಣೆಯಾದ ಕೆಲವೇ ಕೆಲ ಮಕ್ಕಳು ಮಾತ್ರ ಸಜೀವವಾಗಿ ಸಿಗುತ್ತವೆ, ಕೆಲವು ಸಲ ಹಲವಾರು ವರ್ಷಗಳ ನಂತರ. ಹೀಗೆ ಸಿಕ್ಕಿದ ಮಕ್ಕಳಿಗೆ ಪುನಹ ಮೊದಲಿನ ಪರಿಸ್ಥಿಗೆ ತಿರುಗಲು ಹಲವು ವರ್ಷಗಳೆ ತಗಲುತ್ತವೆ. ಹೆಚ್ಚಿನ ಮಕ್ಕಳು ಈ ರೀತಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಮಾಸದ ನೆನಪ, ನೋವ ಹೊತ್ತಿರುತ್ತವೆ, ಸಮಾಜಕ್ಕೆ ಹೊಂದಲಾರದೆ ಬದುಕುತ್ತವೆ, ಬಹುಶಃ ಕೊನೆಯ ತನಕವೂ. ಇನ್ನು ಜೇಯ್ಸಿಯ ವಿಚಾರದಲ್ಲಿ ನೋಡಿದರೆ, ಆಕೆಯ ಜೀವನದ ಹಲವಾರು ಹಂತಗಳನ್ನೇ ದೋಚಲಾಗಿದೆ. ಟೀನೇಜ್, ಯೌವನ ಮುಂತಾದ ಅತ್ಯಂತ ಮುಖ್ಯ ಮನುಷ್ಯನ ನಿರ್ಮಾಪನ ಕಾಲವನ್ನೇ ಕಸಿದು ಕೊಳ್ಳಲಾಗಿದೆ. ಅವಳು ಮೊದಲಿನಂತೆ ಮುಂದುವರಿದಿದ್ದರೆ ಆಗುವ ವ್ಯಕ್ತಿತ್ವಕ್ಕೂ, ಇಂದು ಆಗಿರುವ ವ್ಯಕ್ತಿತ್ವಕ್ಕೂ ವ್ಯತ್ಯಾಸವಿಲ್ಲವೇ? ಬದುಕಿದ್ದಾಳೆ ಎಂದೊಂದು ಬಿಟ್ಟರೆ, ಮತ್ತೇನು ಉಳಿದಿದೆ? ಇದು ಯಾರ ತಪ್ಪು? ಇದಕ್ಕೆ ಯಾರಿಗೆ ಶಿಕ್ಷೆ ಕೊಡಬೇಕು? ಬರೇ ಇವಳ ಕಸಿದು ಕೊಂಡುಹೋಗಿ ಅವಳ ಮೇಲೆ ದೌರ್ಜನ್ಯ ಎಸಗಿದ ಆ ಮನೋರೋಗಿಗಳಿಗೋ? ಇಲ್ಲಾ ನಾಗರಿಕ ಸಮಾಜ ನಮ್ಮದು, ಇಲ್ಲಿ ಎಲ್ಲರಿಗೆ ಒಂದೇ ಹಕ್ಕಿದೆ ಎಂದುಕೊಳ್ಳುವ ನಮ್ಮೀ ಸಮಾಜಕ್ಕೋ? ಇಂತಹ ಅತ್ಯಾಚಾರಿಗಳನ್ನ ಸಮಾಜದ ಮಧ್ಯೆ, ಮುಗ್ಧ ಮಕ್ಕಳ ಮಧ್ಯೆ ಬಿಟ್ಟ ನಮ್ಮ ನ್ಯಾಯಾಲಕ್ಕೋ?

ನಾವೀಗ ಎಚ್ಚತ್ತು ಗ್ಯಾರ್ರಿಡೊನನ್ನು, ಆತನ ಪತ್ನಿಯನ್ನ ಪುನಹ ಬಂಧೀಖಾನೆಗೆ ಹಲವು ವರ್ಷಗಳ ಸಜೆ ಕೊಟ್ಟು ಕಳಿಸಬಹುದು. ಆದರೆ, ಇದರಿಂದ ಜೇಯ್ಸಿಗೆ ನ್ಯಾಯ ಸಿಗುವುದೇ? ಅವನ ಅತ್ಯಾಚಾರಿಗಳ ಶಿಕ್ಷೆ ಆಕೆಯು ಇಷ್ಟರವರೆಗೆ ಒಳಪಟ್ಟ ಶಿಕ್ಷೆಗೆ ಸರಿಸಾಟಿಯೆ? ಅದು ಆಕೆಯ ಮೊದಲಿನಂತೆ ಮಾಡುವುದೇ? ಇನ್ನು ಹೊರಗಿನ ಸಮಾಜದೊಡನೆ ಬೆರೆಯದೇ, ಶಾಲೆಗೇ ಹೋಗದೇ ದೊಡ್ಡದಾದ ಆಕೆಯ ಎರಡು ಮಕ್ಕಳ ಕಥೆಯೇನು? ಅವುಗಳು ಮಾಡಿದ ತಪ್ಪೇನು? ಇಷ್ಟರ ವರೆಗೆ ತನ್ನ ಮಗಳನ್ನು ಕಳಕೊಂಡು ಈಗ ತಾನೆ ೧೮ ವರ್ಷಗಳ ನಂತರ ಆಕೆಯ ಈ ರೀತಿಯ ಕಥೆಯ ಕೇಳಿದ ಜೇಯ್ಸಿಯ ಅಮ್ಮನ ಮನಸ್ಥಿತಿ ಹೇಗಿರಬಹುದು?

ನನಗಿನ್ನೂ ನೆನಪಿದೆ. ನಾನಾಗ ಬಹುಶಃ ಎಲಿಮೆಂಟರಿ ಶಾಲೆಯಲ್ಲಿದ್ದಿರ ಬೇಕು. ದಸರಾ ಸಮಯ. ಸಾಮಾನ್ಯವಾಗಿ ಯಾವಾಗಲೂ ಹೊರಗೇ ಅಕ್ಕಪಕ್ಕದ ಮಕ್ಕಳೊಡನೆ ಆಡಿಕೊಂಡಿದ್ದ ನಾನು, ಪಕ್ಕದ ಮನೆಯ ಹುಡುಗನೊಡನೆ ಹುಲಿವೇಶದ ಹಿಂದೆ ಹೊರಟು ಹೋಗಿದ್ದೆ, ವಾಪಾಸು ಹೇಗೆ ಬರುವುದೆಂದು ಯೋಚಿಸದೇ. ರಥಬೀದಿಯ ನಮ್ಮ ಮನೆಯ ಪಕ್ಕದಿಂದ ಹೊರಟ ಅದು ಮಂಗಳೂರೆಲ್ಲಾ ಸುತ್ತುತ್ತಾ ಹೋಗುತ್ತಿತ್ತು. ನಾವು ಅದರ ಹಿಂದೆ ಹೋಗುತ್ತಿದ್ದೆವು. ಮನೆಯಲ್ಲಿ ಯಾರಿಗೂ ಗೊತ್ತಿಲ್ಲಾ. ನಮ್ಮಮ್ಮ ಮಧ್ಯಾಹ್ನ ಊಟಕ್ಕೆ ನಾ ಬರದಿದ್ದದ್ದು ನೋಡಿ ಹೆದರಿ ಕಂಗಾಲಾಗಿ, ಅಕ್ಕಪಕ್ಕದ ಮನೆಯೆಲ್ಲಾ ವಿಚಾರಿಸಿ ಕೊನೆಗೆ ಗಣಪತಿ ದೇವಸ್ತಾನದ ಪಕ್ಕದಲ್ಲಿರುವ ಅಜ್ಜಿ ಮನೆಗೂ ಹೋಗಿ ನೋಡಿದಳು. ಈ ತನ್ಮಧ್ಯೆ ಹುಲಿವೇಶ ಒಂದು ಕಡೆ ನಿಂತಿದ್ದಾಗ, ಆ ಕಡೆಯಿಂದ ಹೋಗುತ್ತಿದ್ದ ನನ್ನ ಚಿಕ್ಕಪ್ಪನ ಮಗಳು ಎಲ್ಲಿ ಹೋಗ್ತಾ ಇದ್ದೀ, ಮನೆಗೆ ಬಾ, ಅಂತಾ ಕರಕೊಂಡು ಹೋದಳು. ಅದು ನಮ್ಮ ಅಜ್ಜಿ ಮನೆಗೆ ಪಕ್ಕ. ನಮ್ಮಜ್ಜಿಯೂ ಹೈರಾಣಾಗಿ ನಮ್ಮ ಚಿಕ್ಕಪ್ಪನ ಮನೆಗೆ ಹುಡುಕಿಕೊಂಡು ಬಂದು, ಅಲ್ಲಿಯೂ ಇನ್ನೊಂದು ಹುಲಿವೇಶ ನೋಡುತ್ತಾ ನಿಂತ ನನ್ನನ್ನು ಹಿಡಿದು ಚಡಿಕೊಟ್ಟು, ಕಾಲೆಲ್ಲಾ ತರಚಿ ಗಾಯವಾಗುವ ವರೆಗೆ ದರದರನೆ ಎಳಕೊಂಡು ಮನೆಗೆ ಕರಕೊಂಡು ಹೋದರು. ನಮ್ಮಮ್ಮ ನನಗೆ ಬೈದದ್ದಾಗಲೀ, ಹೊಡೆದದ್ದಾಗಲೀ ನನಗೆ ನೆನಪಿಲ್ಲ. ಆದರೆ. ಹೆಚ್ಚಾಗಿ ಸೆಕೆಗಾಲದ ರಜೆಗಳನ್ನು ಅಜ್ಜಿಮನೆಯಲ್ಲಿ ಕಳೆಯುತ್ತಿದ್ದ ನನಗೆ, ಅಜ್ಜಿ ಬೈದದ್ದು, ಹೊಡೆದದ್ದು (ಅದೊಂದು ಬಾರಿ ಮಾತ್ರ) ನೆನಪಿದೆ. ಕೊನೆಗೆ ಮನೆಗೆ ವಾಪಾಸಾದಾಗ ನಮ್ಮಮ್ಮನ ಹೌಹಾರಿದ ಮುಖ ಇನ್ನೂ ನೆನಪಿದೆ. ಇನ್ನು ಜೋಯ್ಸೀಯ ಕಥೆಯಂತೆ, ಕಾಣೆಯಾದ ಎಲ್ಲಾ ಮಕ್ಕಳ ಕಥೆಯಂತೆ ನನ್ನದಾಗಿದ್ದಲ್ಲಿ, ನಮ್ಮಮ್ಮ ನಮ್ಮಪ್ಪ ಬಹುಶಃ ಹೆಚ್ಚು ಕಾಲವಿರುತ್ತಿರಲಿಲ್ಲ. ಹೆದರುತ್ತೇನೆ ಯೋಚಿಸಲೂ ಸಹ: ನನ್ನ ಮಗನನ್ನು ಈ ರೀತಿ ಹಾರಿಸಿರುತ್ತಿದ್ದಲ್ಲಿ ನನ್ನ ಕಥೆಯೇನಾಗುತ್ತಿತ್ತು? ನಾನು ನಾನಾಗಿರುತ್ತಿರಲಿಲ್ಲ.

ಡಗ್ಗಾರ್ಡ್ ಕಥೆ ಓದುವಾಗ, ೨೦೦೨ರಲ್ಲಿ ಯೂಟಾಃದಲ್ಲಿ ನಡೆದ ಎಲಿಜಬೆತ್ ಸ್ಮಾರ್ಟ್ ಎಂಬ ೧೪ ವರ್ಷದ ಮಗುವಿನ ಕಥೆಯೂ ಜ್ನಾಪಕಕ್ಕೆ ಬರುತ್ತದೆ. ಆಕೆಯನ್ನು ಅವಳು ಮಲಗಿದಲ್ಲಿಂದ ಚೂರಿ ತೋರಿಸಿ ಎತ್ತಿಕೊಂಡು ಹೋದ ಒಬ್ಬ ಬಿಕಾರಿ, ಆಕೆಯನ್ನು ಮುಖ ಮುಚ್ಚಿ ಸುಮಾರು ಒಂಬತ್ತು ತಿಂಗಳು ತನ್ನೊಡನೆ ಬೀದಿ ಬೀದಿ ಸುತ್ತಿಸಿದ್ದ. ಕೊನೆಗೆ ರಸ್ತೆಯೊಂದರಲ್ಲಿ ಸಿಕ್ಕಿ ಹಾಕಿಕೊಂಡಾಗ ಎಲ್ಲಾರೂ(ಅವನೊಡನೆ ಅವನ ಹೆಂಡತಿ ಮತ್ತು ಇನ್ನೂ ಕೆಲ ಮಕ್ಕಳಿದ್ದರು) ಉದ್ದಕ್ಕೆ ನಿಲುವಂಗಿತರಹದ ಬಟ್ಟೆ ಹಾಕಿಕೊಂಡಿದ್ದರು. ಈಗ ಅವರಿಬ್ಬರು ಜೈಲಿನಲ್ಲಿದ್ದಾರೆ.

ಈ ಎರಡು ಉದಾಹರಣೆಗಳಲ್ಲಿರುವ, ಇಬ್ಬರೂ ಅತ್ಯಾಚಾರಿಗಳೂ ಅತ್ಯಂತ ವಿಚಿತ್ರವಾದ, ಭ್ರಮೆಯ ಪರಿಧಿಗೆ ಸೇರುವ, ಧಾರ್ಮಿಕತೆ ಪ್ರದರ್ಶಿಸಿದ್ದಾರೆ. ಇದಕ್ಕೋಸ್ಕರವೇ, ಬರ್ಕ್ಲಿಯ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯದಲ್ಲಿ ಕರಪತ್ರ ಹಂಚಲು ಗ್ಯಾರ್ರಿಡೊ ಆ ಎರಡು ಚಿಕ್ಕ ಮಕ್ಕಳೊಂದಿಗೆ ಹೋದಾಗಲೇ, ಸೂಕ್ಷ್ಮಮತಿಯರಾದ ಎರಡು ಸ್ತ್ರೀ ಪೋಲೀಸರ ಕಣ್ಣಿಗೆ ಬಿದ್ದದ್ದು. ಈ ಸಂಬಂಧದಲ್ಲಿ ಏನೋ ತಪ್ಪಿದೆ ಎಂದು ಅವರಿಗೆ ಅನ್ನಿಸಿ, ಅವರದನ್ನು ಮುಂದುವರಿಸಿದ್ದರಿಂದ ಇಂದು ಗ್ಯಾರ್ರಿಡೊ ಜೈಲಿನಲ್ಲಿದ್ದಾನೆ. ಆ ಎರಡು ಪೋಲೀಸರು ನಮಗ್ಯಾಕೆ ಈ ಕುಟುಂಬದ ಬಗ್ಯೆ ಯೋಚನೆ ಅಂತಾ ಬಿಟ್ಟಿದ್ದಲ್ಲಿ ಬಹುಶಃ ಜೇಯ್ಸಿ ಬೆಳಕ ಕಾಣುತ್ತಿರಲಿಲ್ಲವೇನೊ!

ಅಂಕಿ ಅಂಶಗಳಿಗೆ ಸೇರುವ ಇಂತಹ ಒಂದೊಂದು ಘಟನೆಯೂ, ಕುಟುಂಬದ ಹಲವಾರು ನಿರಪರಾಧಿ ಜೀವಿಗಳ ಜೀವನದಲ್ಲಿ ಇಂತಹ ಭಯಾನಕ ಸುನಾಮಿಗಳನ್ನೆಬ್ಬಿಸುವಾಗ, ಅನ್ನಿಸುತ್ತದೆ, ಇಲ್ಲಿ ಜೇಯ್ಸಿಯ ತಪ್ಪೇನು? ಮಕ್ಕಳ ಮೇಲೆ ದೌರ್ಜನ್ಯವೆಸಗುವವರನ್ನು ಕೊಲೆಗಡುಕರೆಂದು ಯಾಕೆ ಗಣಿಸಬಾರದು? ಯಾವ ಸಮಾಜದಲ್ಲಿ ಮಕ್ಕಳಿಗೆ ಸುರಕ್ಷಿತವಾಗಿ ನಡೆದು ಹೋಗುವ ಸ್ವಾತಂತ್ರ್ಯವಿಲ್ಲವೋ, ಯಾವ ಸಮಾಜದಲ್ಲಿ ಉಗ್ರವಾದ ಅತ್ಯಾಚಾರಿಗಳಿಗೆ ಉಳಿದವರಂತೆ, ಉಳಿದವರ ಮಧ್ಯೆ, ಬದುಕಿ ಈ ಅಮಾನುಷ ಅತ್ಯಾಚಾರವ ಮುಂದುವರಿಸುವ ಸ್ವಾತಂತ್ರ್ಯವಿದೆಯೋ, ಆ ಸಮಾಜ ಹೇಗೆ ನಾಗರೀಕ ಸಮಾಜವಾಗಲು ಸಾಧ್ಯ? ಇನ್ನು ನಾಗರೀಕತೆಯೆಂಬುದೇ ಇಲ್ಲದ ಪ್ರಾಣಿಗಳಲ್ಲಿಯೂ ಇರಲಿಕ್ಕಿಲ್ಲ ಬಹುಶಃ ಈ ರೀತಿಯ ಮಕ್ಕಳ ಮೇಲಿನ ಲೈಂಕಿಕ ದೌರ್ಜನ್ಯ! ಹಾಗಾದರೆ, ಮನುಷ್ಯ ಪ್ರಾಣಿಗಳಲ್ಲೇ ಉತ್ತಮ ವರ್ಗ ಹೇಗಾಗುತ್ತಾನೆ?