Monday, September 7, 2009

ನಿಸರ್ಗ ದೇಗುಲ: ಯೊಸೆಮಿಟಿ (ಭಾಗ ೧)



" ಕೈಯಿಂದ ಮಾಡಿದ ಯಾವ ದೇವಾಲಯವೂ ಯೊಸೆಮಿಟಿಯೊಡನೆ ಸ್ಪರ್ಧಿಸಲಾರದು. ಇದು ಪ್ರಕೃತಿಯಲ್ಲಿಯೇ ಅತ್ಯಂತ ಭವ್ಯವಾದ ಅಸಾಧಾರಣ ದೇಗುಲ" - ಜೋನ್ ಮ್ಯೂರ್ (John Muir)

ಬಹು ಸುಂದರ ಪ್ರಾಂತ್ಯವಾದ ಕ್ಯಾಲಿಫೋರ್ನಿಯಾದಲ್ಲಿ ಎಲ್ಲೆಲ್ಲೂ ಪೃಕೃತಿ ದಾಕ್ಷಿಣ್ಯವಿಲ್ಲದೆ ತನ್ನೆಲ್ಲಾ ಮುಖಗಳ ತೋರುವಳು.ಹಲವು ಕಡೆ ಪ್ರಕೃತಿ ಹಸಿರಿಂದ ನಳನಳಿಸಿರೆ, ಇನ್ನೊಂದೆಡೆ ಬರಡು ಮರುಭೂಮಿಯ ತೋರುವಳು. ಪಶ್ಚಿಮಕ್ಕೆ ಪೆಸಿಫಿಕ್ ಸಾಗರ ತೀರದಲಿ ನಿಂತ ಈಕೆ, ಪೂರ್ವಕ್ಕೆ ಹೋದಂತೆ ಕೆಲವೆಡೆ ತನ್ನ ೧೩೦೦೦ ಅಡಿಗಿಂತಲೂ ಎತ್ತರದ ಪರ್ವತಶ್ರೇಣಿಯ ಉಬ್ಬುಗಳ ಹೆಮ್ಮೆಯಿಂದ ಬೀಗುವಳು. ಕೋಪ, ತಾಪ, ಬೆಂಕಿ, ನಡುಕ, ಶಾಂತಿ, ಮೌನ, ಅತ್ಯಂತ ಚಳಿ, ಅತ್ಯಂತ ಸೆಕೆ, ಮಳೆಗಾಲ, ಬರಗಾಲ, ಬದಲೇ ಆಗದ ಮೆಡಿಟರ್ರೇನಿಯನ್ ಹವೆ, ಎಲ್ಲಾವೂ ಈ ಒಂದು ಪ್ರಾಂತ್ಯದಲ್ಲಿದೆ. ಪ್ರತಿಯೊಂದೆಡೆಯೂ ಅದರದೇ ಆದ ವಿಶಿಷ್ಟ ಸೌಂದರ್ಯವಿದೆ. 

 
ಅದರಲ್ಲೂ ಮಧ್ಯ ಕ್ಯಾಲಿಫೋರ್ನಿಯಾದಲ್ಲಿ ಸುಮಾರು ನಾಲ್ನೂರು ಮೈಲಿ ವಿಶಾಲವಾಗಿ ಉತ್ತರದಿಂದ ದಕ್ಷಿಣಕ್ಕೆ ಹಬ್ಬಿರುವ ಸಿಯೆರ್ರಾ ನೆವಾಡಾ ಪರ್ವತ ಶ್ರೇಣಿಗಳ ಆಸುಪಾಸಿನಲ್ಲಿ ಪ್ರಕೃತಿ ತನ್ನೆಲ್ಲ ಸಂಕೋಚವ ತೊರೆದು ನಿಸರ್ಗವಾದಿಗಳಿಗೆ ಸ್ವರ್ಗವ ತೋರುವಳು. ಇಲ್ಲಿ ಯೊಸೆಮಿಟಿ (Yosemite), ಮೋನೋಲೇಕ್, ಮ್ಯಾಮತ್ ಪರ್ವತಗಳು, ಸುಪ್ರಸಿದ್ಧ ಲೇಕ್ ಟಾಹೊ, ಹಾಗೂ ಸಾವಿರಾರು ವರ್ಷಗಳಿಂದ ಹಲವು ಮಾನವ ತಲೆಮಾರುಗಳ ಆಗುಹೋಗುಗಳ ನೋಡಿ ಸ್ಥಿತಪ್ರಜ್ನರಾಗಿ ನಿಂತ ದೈತ್ಯ ಸೆಕೋಯ ಮರಗಳು, ಇತ್ಯಾದಿ, ನಿಸರ್ಗ ಸೌಂದರ್ಯದಲ್ಲಿ ಒಂದರನ್ನೊಂದು ಮೀರಿಸುವ ಜಾಗಗಳಿವೆ. ಇವೆಲ್ಲಾವನ್ನ ನಿಸರ್ಗವಾದಿ ಜೋನ್ ಮ್ಯೂರ್ ನು ತನ್ನ ಪತ್ರಗಳು, ಪ್ರಬಂಧಗಳು, ಪುಸ್ತಕಗಳಲ್ಲಿ ಬಹು ಚೆನ್ನಾಗಿ ಚಿತ್ರಿಸಿದ್ದಾನೆ. ಅವನಿಂದಾಗಿಯೇ ಯೊಸೆಮಿಟಿ ಹಾಗೂ ಸೆಕೋಯ ರಾಷ್ಟ್ರೀಯ ಉದ್ಯಾನ ಹಾಗೂ ಇತರ ಕಾನನಗಳು ಇಂದಿಗೂ ಉಳಿದುಕೊಂಡು ನಿಸರ್ಗವಾದಿಗಳ ಮನತಣಿಸುತ್ತವೆ. ಸ್ಕೋಟ್ಲೇಂಡ್ ನಲ್ಲಿ ಹುಟ್ಟಿದ ಜೋನ್ ಮ್ಯೂರ್ ಅಮೇರಿಕಾಕ್ಕೆ ಬಂದ ಹೊಸತರಲ್ಲಿ, ಮಾರ್ಚ್ ೧೮೬೮ರಲ್ಲಿ ಮೊದಲ ಬಾರಿಗೆ ಯೊಸೆಮಿಟಿಯ ನೋಡಿ ಈ ಮೇಲೆ ಹೇಳಿದ ಮಾತನ್ನ ಉದ್ಗರಿಸಿದ್ದ. ಮುಂದೆ ಈತ ಇಲ್ಲೇ ಸ್ವಲ್ಪ ದಿನ ಜೀವಿಸಿ, ಅದರ ಸೌಂದರ್ಯವ ಪೂರ್ತಿಯಾಗಿ ಅಸ್ವಾದಿಸಿ, ಅರೆದು ಬರೆದ ಬರಹಗಳು ಆಧುನಿಕ ಕಾಲದ ಪರಿಸರ ಕ್ರಾಂತಿಗೆ ಬುನಾದಿಯಾಯಿತು.


ಲಾಸ್ ಏಂಜಲೀಸಿನಿಂದ ಸುಮಾರು 313 ಮೈಲಿ ದೂರದಲ್ಲಿರುವ ಯೊಸೆಮಿಟಿ ಇಂದು ಒಂದು ರಾಷ್ಟ್ರೀಯ ಉದ್ಯಾನ ಎಂದು ಪರಿಗಣಿತವಾಗಿ ಎಲ್ಲಾ ತರದ ಪ್ರವಾಸಿಗಳಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮಧ್ಯ ಕ್ಯಾಲಿಫೋರ್ನಿಯಾದ ಪೂರ್ವದಲ್ಲಿರುವ, ಸುಮಾರು ೩೦೦೦ ಚದರ ಕಿಲೋಮೀಟರ್ ವಿಸ್ತೀರ್ಣದ, ಟುವಲೊಮಿ, ಮರಿಪೋಸ, ಮಡೇರ ಕೌಂಟಿಗಳಿಂದ ಸುತ್ತುವರಿದ ಯೊಸೆಮಿಟಿಯು ಸಿಯರ್ರಾ ನೆವಾಡಾದ ಪಶ್ಚಿಮದ ತಪ್ಪಲಲ್ಲಿದೆ. ಇದು ಸಿಯರ್ರಾ ನೆವಾಡಾ ಪರ್ವತಗಳ ಅತ್ಯಂತ ದೊಡ್ಡದಾದ ಹಾಗೂ ಅತೀ ಕಮ್ಮಿ ನುಚ್ಚಾದ ಪರಿಸರದ ಒಂದು ತುಂಡು. ಇಲ್ಲಿಯ ಪರಿಸರ ಹೆಚ್ಚಾಗಿ ಸಿಯರ್ರಾ ನೆವಾಡಾದ ಗ್ರಾನೈಟ್ ನ ತುಂಡಿನಿಂದ ರಚಿತವಾದದ್ದು. ಇದರಿಂದಾಗಿ ಇಲ್ಲಿ ಸುಮಾರು ಕಲ್ಲಿನ ಬೆಟ್ಟಗಳು ತುಂಬಿವೆ. ಇವುಗಳಲ್ಲಿ ಪ್ರಸಿದ್ದಿಯಾದದ್ದು ಇಲ್ಲಿಯ ಕಣಿವೆಯಲ್ಲಿ ಎದ್ದು ನಿಂತಿರುವ , ಹಾಫ್ ಡೋಮ್ (ಸುಮಾರು ೧೪೫೦ ಮೀಟರ್ ಎತ್ತರ), ಸೆಂಟಿನೆಲ್ ರೋಕ್, ಹಾಗೂ ಉತ್ತರದ ಬಾಗದಲ್ಲಿರುವ, ಲೋಕದಲ್ಲೇ ಕಲ್ಲಿನ ಪರ್ವತಾರೋಹಿಗಳಿಗೆ ಇಷ್ಟವಾಗಿ ಸವಾಲೊಡ್ಡುವ, ಎಲ್ ಕ್ಯಾಪಿಟಾನ್(೯೧೦ ಮೀಟರ್ ಎತ್ತರ).  

Figure 1 ಎಲ್ ಕ್ಯಾಪಿಟಾನಿನ ಎದುರು ಹರಿಯುವ ಮರ್ಸೆಡ್ ನದಿ.
ಇಲ್ಲಿಯ ಸಿಯರ್ರಾದ ಬೆಟ್ಟದ ಶಿಖೆಗಳಲ್ಲಿ ಉಂಟಾಗುವ ಎರಡು ನದಿಗಳಾದ ಮರ್ಸೆಡ್ ಹಾಗೂ ಟುವಲೊಮಿ ನದಿಗಳು ಯೊಸೆಮಿಟಿಯ ಮೂಲಕ ಹರಿದು ಈ ಉದ್ಯಾನದೊಳಗಡೆ ಸುಮಾರು ೩೨೦೦ಕ್ಕೂ ಹೆಚ್ಚಿನ ಕೆರೆಗಳು, ಎರಡು ರಿಸರ್ವೊಯರ್ ಹಾಗೂ ೧೭೦೦ ಮೈಲಿ ಉದ್ದದ ತೊರೆಗಳಿಗೆ ಮೂಲವಾಗಿದೆ. ಇಷ್ಟೆ ಅಲ್ಲದೇ ಹೆಚ್ಚಿನ ಸಾಂದ್ರತೆಯಲ್ಲಿ ಜಲಪಾತಗಳಿಂದ ತುಂಬಿದ ಈ ಜಾಗದಲ್ಲಿ ಉತ್ತರ ಅಮೇರಿಕಾದಲ್ಲೇ ಅತ್ಯಂತ ಎತ್ತರದ ಯೊಸೆಮಿಟಿ ಜಲಪಾತ (೭೩೯ ಮೀಟರ್), ವವೋನ ಸುರಂಗದಿಂದ  ಕಾಣುವ ಪ್ರಸಿದ್ಧ ಬ್ರೈಡಲ್ ವೈಲ್, ಹಾಗೂ ಅತ್ಯಂತ ಎತ್ತರದ ಒಂದೆ ಪತನದ ರಿಬ್ಬನ್ ಫಾಲ್ಸ್ ಮುಂತಾದುವುಗಳಿವೆ. ಚಳಿಗಾಲದ ಹಿಮ ಕರಗಿ ಇಲ್ಲಿರುವ ಜಲಪಾತಗಳು ಭೊರ್ಗರೆದು ಮೆರೆಯುವ ಸಮಯ ಮೇ, ಜೂನ್ ತಿಂಗಳು. ಜುಲಾಯಿ  ಹೊತ್ತಿಗೆ ಇವುಗಳ ಪ್ರಭಾವ ಕಮ್ಮಿಯಾಗ ಹತ್ತುತ್ತದೆ.


ಎರಡು ವರ್ಷಗಳ ಹಿಂದೆ ನಾವಿಲ್ಲಿಗೆ ಜುಲೈ ತಿಂಗಳಲ್ಲಿ ಹೋಗಿದ್ದೆವು. ಬೆಳಗ್ಗೆ ೧೦:೩೦ ಗಂಟೆಗೆ ಲಾಸ್ ಏಂಜಲೀಸ್ ಬಿಟ್ಟವರು ಸಾಯಂಕಾಲ ಸುಮಾರು ಆರು ಗಂಟೆಗೆ ಯೊಸೆಮಿಟಿ ಉದ್ಯಾನದ ಹೊರಬಾಗಿಲಿಗೆ ತಲಪಿದ್ದೆವು. ಉದ್ಯಾನದಲ್ಲಿಯೇ ದಕ್ಷಿಣ ದ್ವಾರದಿಂದ ಹೊಕ್ಕು ಸಾಧಾರಣ ಅರ್ಧ ಗಂಟೆ ದೂರದಲ್ಲಿರುವ ಒಂದು ಲಾಡ್ಜಿಂಗಿನಲ್ಲಿ ನಾಲ್ಕು ರಾತ್ರಿ ಉಳಕೊಳ್ಳಲು ಮೊದಲೇ ರಿಸರ್ವೇಶನ್ ಮಾಡಿದ್ದೆವು. ಅದರಲ್ಲಿ ಅಡಿಗೆಮಾಡಿಕೊಳ್ಳಲು ಸೌಕರ್ಯವಿತ್ತು. ಪಕ್ಕದಲ್ಲೆಲ್ಲೂ ಊಟಕ್ಕೆ ಸೌಕರ್ಯವಿರಲಿಲ್ಲದ್ದರಿಂದ. ಆದ್ದರಿಂದ ಬೆಳ್ಳಿಗ್ಗೆಯ ಟೀಗೆ ಹಾಗೂ ರಾತ್ರಿಯ ಊಟದ ತಯಾರಿಗೆ ಬೇಕಾಗುವ ಎಲ್ಲಾ ಸಾಮಾಗ್ರಿಗಳನ್ನ ನಾವು ಕೊಂಡು ಹೋಗಿದ್ದೆವು. ಊಟ ಉಪಹಾರ ಗೃಹಗಳೆಲ್ಲಾ ನಾವಿಳಿದು ಕೊಂಡ ಲಾಡ್ಜಿನಿಂದ ಸುಮಾರು ಕಾರಿನಲ್ಲಿ ಅರ್ಧ ಗಂಟೆ ದಾರಿ ದೂರವಿರುವ ಉದ್ಯಾನದ ಮಧ್ಯದ ಕಣಿವೆಯಲ್ಲಿವೆ. ದಾರಿಯೆಲ್ಲಾ ಹೇರ್ ಪಿನ್ ಕರ್ವ್ ಗಳಾದರಿಂದ ವೇಗಮಿತಿ ೨೦ ಮೈಲಿಯಾಗಿತ್ತು.
                                                 Figure 2 ಕಣಿವೆಯಲ್ಲಿ ಕಾಣುವ ಹಾಫ್ ಡೋಮ್ (ಎಡಕ್ಕೆ).
ಅಮೋಘ ದೃಶ್ಯಗಳಿಂದ ಸುತ್ತುವರಿದ, ಪ್ರವಾಸಿಗರ ಅತ್ಯಂತ ಆಕರ್ಷಣೆ ಹಾಗೂ ಯೊಸೆಮಿಟಿಯ ಅತ್ಯಂತ ಚಿಕ್ಕ ಭಾಗವಾದ (ನೂರನೆ ಒಂದು ಭಾಗ) ಕಣಿವೆಯಲ್ಲಿ ಎಲ್ಲಾ ಸೌಕರ್ಯಗಳೂ ಇವೆ. ಸುಪ್ರಸಿದ್ಧ ರಿಸೋರ್ಟ್ ಹೊಟೇಲುಗಳಾದ ಆವಾಃನಿ, ವವೋನ, ಯೊಸೆಮಿಟಿ ಪಾರ್ಕ್ ಲೋಡ್ಜ್ ಮುಂತಾದ ದೊಡ್ಡ ದೊಡ್ದ ಹೊಟೇಲುಗಳಿವೆ. ಇನ್ನು ಕ್ಯಾಂಪಿಂಗಿಗೆ ಕ್ಯಾಂಪ್ ಕರ್ರಿ ಎಂಬ ಜಾಗವಿದೆ. ಹೈಕಿಂಗ್, ವಾಕಿಂಗ್, ಬೈಕಿಂಗ್ ವಗೈರೆ ಎಲ್ಲಾದಕ್ಕೂ ಅನುಕೂಲವಿದೆ. ಬಾಡಿಗೆಗೆ ಸೈಕಲುಗಳು ದೊರೆಯುತ್ತವೆ. ಇಲ್ಲಿ ಒಂದು ಆಸ್ಪತ್ರೆ ಹಾಗೂ ಶಾಲೆಯೂ ಇದೆ.      


ಮರು ದಿನ ಬೆಳಗ್ಗೆ ನಾವು ಯೊಸೆಮಿಟಿ ಕಣಿವೆ ಕಡೆ ಹೊರಟೆವು. ವವೋನ ಹೈವೇ ಮೂಲಕ ಕಣಿವೆಯನ್ನು ವವೋನ ಸುರಂಗದ ಮೂಲಕ ಪ್ರವೇಶಿಸುತ್ತೇವೆ.  ಪ್ರವೇಶಿಸಿದಂತೆ ದೂರದಲ್ಲಿ ನಮಗೆ ಬೆಂಕಿಯ ಹೊಗೆ ಕಾಣಿಸಿತು. ಆ ದಿನ, ಅಲ್ಲಿ ಬೇಕಾಗಿಯೇ ’ಸೀಮಿತ ಬೆಂಕಿ” (Controlled Fire) ಹಾಕಿದ್ದರು. ಈ ತರಹ ಸೀಮಿತ ಬೆಂಕಿ ಈ ಜಾಗದಲ್ಲಿ ಅಗಾಗ್ಯೆ ಉಂಟು ಮಾಡುವುದರಿಂದ ಕಾಳ್ಗಿಚ್ಚನ್ನು ಹೆಚ್ಚುವಂತೆ ಮಾಡುವ ಒಣ ಹುಲ್ಲು, ಮರ ಇತ್ಯಾದಿ ಕಮ್ಮಿಯಾಗಿ ಕಾಳ್ಗಿಚ್ಚನ್ನು ತಡೆಯಲು ಸಹಾಯವಾಗುತ್ತದೆ. ಅಲ್ಲದೇ ಸೆಕೋಯದಂತ ಹಲವು ಸಸ್ಯಗಳ ಬೀಜ ಪ್ರಸಾರಕ್ಕೆ ಸಹಾಯವಾಗುತ್ತದೆ ಮತ್ತು ಮರಗಿಡಗಳ ಸಾಂದ್ರತೆ ಕಮ್ಮಿಯಾಗಿ ಹೊಸ ಗಿಡಗಳಿಗೆ ಸಾಕಷ್ಟು ಬೆಳಕು ಸಿಗುತ್ತದೆ.

Figure 3 ವವೋನ ಸುರಂಗ.
ಪ್ರವಾಸಿಗಳ ಕಾರುಗಳ ನಿಲ್ಲಿಸಲು ಕಣಿವೆಯಲ್ಲಿ ಎಲ್ಲಾ ವ್ಯವಸ್ತೆಯೂ ಇವೆ. ಅಲ್ಲಿಂದ ಕಣಿವೆಯಲ್ಲಿರುವ ಎಲ್ಲಾವನ್ನು ನಡೆದೇ ನೋಡ ಬಹುದು: ಇಲ್ಲವಾದಲ್ಲಿ, ಅಲ್ಲೇ ಸುತ್ತಲೂ ತಿರುಗುತ್ತಿರುವ ಹಲವಾರು (ಬಿಟ್ಟಿ) ಶಟ್ಲ್ ಬಸ್ಸಿನಲ್ಲೂ ಹೋಗ ಬಹುದು. ಕ್ಯಾಂಪ್ ಕರ್ರಿಯ ಬಳಿ ಮಾಹಿತಿ ಕೇಂದ್ರವಿದ್ದು, ಉದ್ಯಾನದಲ್ಲಿ ಏನೇನು ಮಾಡಬಹುದು, ಎಂದು ಮ್ಯಾಪುಗಳ ಜೊತೆ ಸಲಹೆ ಕೊಡುತ್ತರೆ. ಅಂದಿನ ನಮ್ಮ ಕಾರ್ಯಕ್ರಮ ಮಿರ್ರರ್ ಲೇಕ್ ಗೆ ಹೈಕಿಂಗ್, ಯೊಸೆಮಿಟಿ ಕಣಿವೆಯ ಟ್ಯೂರ್, ಹಾಗೂ ಕಣಿವೆಯಲ್ಲೇ ಕಾಣ ಸಿಗುವ ಜಾಗಗಳು. ಸಾಮಾನ್ಯವಾಗಿ ಮಿರ್ರರ್ ಲೇಕಿನಲ್ಲಿ ನೀರು ತುಂಬಿ ಹರಿಯುವಾಗ ಹಿಂದಿನ ಬೆಟ್ಟಗಳೆಲ್ಲವ ಪ್ರತಿಬಿಂಬಿಸುವುದರಿಂದ ಒಂದು ಅಮೋಘ ದೃಶ್ಯ ಕಾಣ ಸಿಗುವುದು. ಆದರೆ ನಾವು ಹೋದಾಗ ನೀರು ಬತ್ತಿದ್ದರಿಂದ ಆ ದೃಶ್ಯ ನಮಗೆ ಕಾಣದಿದ್ದರೂ, ಜೋನ್ ಮ್ಯೂರ್ ಹೇಳಿದಂತೆ, '"ಇದು ಮೊದಲಿನಂತೆ ಕನ್ನಡಿಯ ತರವಿಲ್ಲ, ತಂಗಿದ ಮಣ್ಣಿನಿಂದ. ಆದರೆ ಇಲ್ಲಿಂದ ಹಾಫ್ ಡೋಮ್ ನ ಭವ್ಯ ದೃಶ್ಯ ಮಾತ್ರ ಇನ್ನೂ ಹಾಗೆ ಇದೆ". 
Figure 4 ಕನ್ನಡಿ ಕೆರೆ (ಮಿರ್ರರ್ ಲೇಕಿನ) ಬಳಿ.

ಅಲ್ಲಿ ಕೆರೆಯ ಬಳಿ ಕುಳಿತು ನಾವು ಲಾಡ್ಜಿನಲ್ಲಿ ಮಾಡಿ ತಂದ ಎಮ್.ಟಿ.ಅರ್. ರವೆ ಇಡ್ಲಿ ತಿಂದು, ಮಿರ್ರರ್ ಲೇಕಿನಿಂದ ತಿರುಗಿ ಕ್ಯಾಂಪ್ ಕರ್ರಿಗೆ ಬಂದೆವು ಕಣಿವೆಯ ಸುತ್ತಾಡಲು, ಹಾಗೂ ಅಲ್ಲೇ ಕಾಣುವ ಲೋವರ್ ಯೊಸೆಮಿಟಿ ಜಲಪಾತ ನೋಡಲು. ಇಲ್ಲಿಗೆ ಹೋಗಲು ವ್ಯವಸ್ತಿತ ದಾರಿಯೂ ಇದೆ ಹಾಗೂ ಸ್ವಲ್ಪ ಕಠಿಣವಾದ ಹೈಕಿಂಗ್ ದಾರಿಯೂ ಇದೆ. ನಾವು ವ್ಯವಸ್ತಿತ ದಾರಿಯಲ್ಲೆ ಸಾಗಿದೆವು. ಆದರೆ, ಈಗಾಗಲೇ ಹೆಚ್ಚಿನ ಎಲ್ಲಾ ನೀರು ಬತ್ತಿದ್ದರಿಂದ, ಜಲಪಾತ ಕಣ್ಣೀರೆರೆಯುವಂತೆ ಕಾಣುತ್ತಿತ್ತು.
                
Figure 5 ಕೆಳಗಿನ ಯೊಸೆಮಿಟಿ ಜಲಪಾತಕ್ಕೆ ವ್ಯವಸ್ತಿತ ದಾರಿ.


ಹೀಗೆ ನಾವು ಅಲ್ಲ್ಲೇ ಅಡ್ಡಾಡುತ್ತಿರುವಾಗ ಇಲ್ಲಿಯ ನಿವಾಸಿಯಾದ ಕರಡಿ ಮರಿಯೊಂದು ರಸ್ತೆಯಲ್ಲಿ ಬಸ್ಸಿನ ಅಡ್ಡಕ್ಕೆ ಹಾದು ಹೋದದ್ದನ್ನು ಕಂಡೆವು. ಯೊಸೆಮಿಟಿಯ ವನ್ಯಪ್ರಾಣಿಗಳಲ್ಲಿ ಒಂದಾದ ಕಪ್ಪು ಕರಡಿ (ನೋಡಲು ಕಡು ಕಂದು ಬಣ್ಣ) ಇಲ್ಲಿ ವರ್ಷವಿಡೀ ಓಡಾಡುತ್ತಿರುತ್ತವೆ, ಕಾರುಗಳ ಕಿಟಿಕಿ ಮುರಿದು ಆಹಾರ ಹುಡುಕುತ್ತವೆ. ಆದ್ದರಿಂದ ಕಾರಲ್ಲಿ ಆಹಾರ ಬಿಡಬಾರದೆಂಬ ನಿರ್ದೇಶನ ಎಲ್ಲೆಲ್ಲೂ ಕಾಣ ಸಿಗುತ್ತದಿಲ್ಲಿ. ಕ್ಯಾಂಪಿನಲ್ಲಿರುವವರಿಗೆ ಅಹಾರ ಇಡಲು ವಿಶೇಷವಾದ ಲಾಕರುಗಳಿರುತ್ತವೆ. ಕಸದ ತೊಟ್ಟಿಗಳೆಲ್ಲಾ ಕರಡಿ ತಡೆ (bear proof) ಮಾಡಿರುತ್ತಾರೆ.                                                     
Figure 6 ಕರಡಿ ತಡೆಯ ಕಸದ ತೊಟ್ಟಿ.     Figure 7 ಮ್ಯೂಸಿಯಮಿನಲ್ಲಿಟ್ಟ ಬೆಟ್ಟದ ಜೀವಿ ಮಾರ್ಮೋಟ್.







-ಮುಂದುವರಿಯುವುದು.