Saturday, October 23, 2010

ವಿಶ್ವೈಕ್ಯವಾದ

ನಾನೇನು ಮಾಡಲಿ, ದೈವ ಭಕ್ತರೆ, ನಾನ್ಯಾರೆಂದು ನಾನರಿಯೆ.
ಕ್ರಿಶ್ಟಿಯನ್ ಅಲ್ಲ, ಜ್ಯೂವೂ ಅಲ್ಲ, ಜ಼ೋರಾಸ್ಟ್ರಿಅನ್ ಅಲ್ಲ, ಮುಸ್ಲಿಮನೂ ನಾನಲ್ಲ,
ಬಂದಿಲ್ಲ ನಾ ಪೂರ್ವ ಪಶ್ಚಿಮದಿಂದ, ಭೂ ಸಾಗರಗಳಿಂದ,
ಪ್ರಕೃತಿಯ ಕೋಲಿಂದ, ವ್ಯೋಮದ ಗೋಳಗಳಿಂದ,
ಈ ಭುವಿಯಿಂದ, ನೀರು, ಗಾಳಿ, ಬೆಂಕಿಗಳಿಂದ.

ನಾ ಬಂದಿಲ್ಲ ಆ ಎತ್ತರದ ಸ್ವರ್ಗದಿಂದ, ಈ ಲೋಕದಿಂದ,
ಇಲ್ಲಿಯ ಅಸ್ತಿತ್ವದಿಂದ, ಅಥವ ನಾನು ನಾನಾಗಿರುವುದರಿಂದ.
ನಾನು ಭಾರತದಿಂದಲ್ಲ, ಚೀನಾದಿಂದಲ್ಲ, ಬುಲ್ಗರ್ನಿಂದಲ್ಲ, ಸಾಕ್ಸಿನ್ ನಿಂದಲ್ಲ,
ಇರಾಕುಗಳ ಎರಡು ಸಾಮ್ರಾಜ್ಯಗಳಿಂದಲ್ಲ, ಅಥವ ಖುರಾಸಾನದಿಂದಲೂ ಅಲ್ಲ
ನಾ ಭೂಮಿಯಿಂದಲ್ಲ, ಬಾಹ್ಯ ಲೊಕದಿಂದಲೂ ಅಲ್ಲ
ಸ್ವರ್ಗದಿಂದಲ್ಲ, ಇಲ್ಲಾ ನರಕದಿಂದಲೂ ಅಲ್ಲ.
ನಾನು ಆಡಮ್ ನಿಂದಲ್ಲ, ಈವ್ ನಿಂದಲ್ಲ, ಈಡನ್ ತೋಟದಿಂದಲ್ಲ, ರಿಜ಼್‍ವಾನ್ ನಿಂದಲ್ಲ.

ಜಾಗವಲ್ಲದ್ದು ನನ್ನ ಜಾಗ, ಅವಶೇಷವಿಲ್ಲದ್ದು ನನ್ನ ಕುರುಹು,
ದೇಹ, ಆತ್ಮಗಳಿಲ್ಲದ ನಾ ಆತ್ಮಗಳ ಆತ್ಮ.
ದ್ವಂದ್ವಗಳ ಓಡಿಸಿ ಎರಡೂ ಲೋಕದಲೂ ಒಂದೆಯೆಂಬಂತೆ ಬಾಳುತಿಹೆ.
ಒಂದ ನಾನು ಹುಡುಕುವುದು, ಒಂದು ನನಗೆ ಗೊತ್ತಿಹುದು, ಒಂದ ನಾ ಕರೆಯುತಿಹುದು, ಒಂದು ನಾ ನೋಡುತಿಹುದು.
ಅವನೇ ಮೊದಲೂ, ಅವನೇ ಕೊನೆಯೂ, ಅವನೇ ಬಹಿರಂಗ, ಅವನೇ ಅಂತರಂಗ.
"ಅವನು" ಮತ್ತು "ಅವನಿರುವಿಕೆ" ಬಿಟ್ಟರೆ ನನಗ್ಯಾರೂ ಗೊತ್ತಿಲ್ಲ.
ಪ್ರೇಮ ಪಾನದಲ್ಲಿ ಮತ್ತನಾದ ನನ್ನಿಂದ ನುಣುಚಿದುವು ಎರಡೂ ಲೋಕಗಳು.

ಅನುರಾಗದ ಮೇಳದಿ ಬ್ರಹ್ಮಾನಂದದಲಿರುವ ನನಗಿಲ್ಲ ಬೇರಾವ ಯೋಚನೆಯೂ.
ಕ್ಷಣವೊಂದೂ ನಿನ್ನನ್ನಗಲಿದರೆ ಕಂಪಿಸುವೆ ನಾ
ಆ ಗಳಿಗೆಯಿಂದ ಅನುತಾಪದಿ ಅಜೀವ ಪರ್ಯಂತ.
ಎಂದಾದರೊಂದು ದಿನ ಸಿಕ್ಕಲ್ಲಿ ನಿನ್ನೊಡೆ ಏಕಾಂತ ಒಂದು ಕ್ಷಣ
ಮರ್ಧಿಸಿ ಎರಡೂ ಲೋಕವ ತುಳಿದು ನರ್ತಿಸುವೆ ನಾ ಅಮರ.
ಓ ಟಾಬ್ರಿಜ಼್ ನ ಸೂರ್ಯನೇ, ಅಮಲೇರಿದೆ ನನಗೀ ಲೋಕದಿ,
ಬೇರೇನೂ ಕತೆಯಿಲ್ಲಾ ಹೇಳಲು ಈ ಮತ್ತೇರಿದ ಭಾವಾವೇಶವಲ್ಲದೆ.

ಕನ್ನಡಕ್ಕೆ ಅನುವಾದ : ಭಾರತಿ
ಪರ್ಶಿಯನ್ ಮೂಲ: ಜಲಾಲ್ ಅದ್ದೀನ್ ಮುಹಮ್ಮದ್ ರೂಮೀ (೧೨೦೭-೧೨೭೩)
ಇಂಗ್ಲಿಷ್ ಗೆ: ಕೋಲ್‍ಮನ್ ಬಾರ್ಕ್ಸ್