ನಾವು ಕೊಳಲಿನಂತೆ, ಆದರೆ ನಮ್ಮಲ್ಲಿಯ ನಿನಾದ ನಿನ್ನಿಂದ;
ನಾವು ಪರ್ವತದಂತೆ, ಆದರೆ ನಮ್ಮಲ್ಲಿಯ ಪ್ರತಿಧ್ವನಿ ನಿನ್ನಿಂದ.
ಚದುರಂಗದ ದಾಳಗಳಂತೆ ನಿರತರಾಗಿಹೆವು ನಾವು ಸದಾ ಸೋಲು ಗೆಲವುಗಳಲಿ;
ಆದರೆ ನಮ್ಮ ಸೋಲು ಮತ್ತು ಗೆಲವುಗಳು ನಿನ್ನಿಂದ, ಓ ನಿನ್ನಾ ಗುಣಗಳು ಎಷ್ಟು ಚೆನ್ನ!
ನಾವ್ಯಾರು, ಓ ಆತ್ಮಗಳ ಆತ್ಮನೇ
ನಿನ್ನ ಸಮನಾಗಿ ನಿನ್ನಾ ಪಕ್ಕದಿ ಉಳಿದಿರಲಿಕ್ಕೆ?
ನಾವು ಮತ್ತು ನಮ್ಮ ಅಸ್ತಿತ್ವ ನಿಜವಾಗಿಯೂ ಬರೇ ಕಲ್ಪನೆ;
ನಿರಪೇಕ್ಷ ಅಸ್ತಿತ್ವದ ನೀ ನಶ್ವರವಾಗಿ ಅಭಿವ್ಯಕ್ತಿಸುವ.
ನಾವು ಸಿಂಹಗಳು, ಆದರೆ ಬರೇ ಪತಾಕೆಯ ಸಿಂಹಗಳು:
ಬೀಸುವ ಗಾಳಿಗೆ ಗಳಿಗೆಯಿಂದ ಗಳಿಗೆಗೆ ಜಿಗಿಯುವವುಗಳು.
ಅವುಗಳ ಜಿಗಿತ ಮಾತ್ರ ಕಾಣುವುದು, ಆದರೆ ಕಾಣಿಸದು ಗಾಳಿ:
ನಮಗೆ ಅಗೋಚರವಾದದ್ದು ನಮ್ಮಿಂದ ಉಡುಗದಿರಲಿ!
ನಮ್ಮ ಮುನ್ನಡೆಸುವಾ ಗಾಳಿ ಮತ್ತು ನಮ್ಮ ಅಸ್ತಿತ್ವ ನಿನ್ನ ಉಡುಗೊರೆಯಿಂದ;
ನಮ್ಮೆಲ್ಲಾ ಬದುಕಿಗೆ ನೀ ನಮ್ಮ ಉಂಟು ಮಾಡಿದ್ದೇ ಕಾರಣ.
ಕನ್ನಡಕ್ಕೆ: ಭಾರತಿ ದೇವಿ
ಮೂಲ: Teachings of Rumi, The Masnavi: Translated to English by E.H. Whinfield
