Thursday, July 9, 2009

ರಿಸೆಶನ್ ನಲ್ಲಿ ಒಂದು ಜಾಬ್ ಫೇರ್

ನಿನ್ನೆ ಕಡೆಗೂ ಮನಸ್ಸು ಮಾಡಿ ಒಂದು ಜಾಬ್ ಫೇರಗೆ ಹೊರಟೆ. ಆರು ತಿಂಗಳಿಂದ ಕೆಲಸ ಹುಡುಕಿ ಹುಡುಕಿ ಸಾಕಾಗಿ, ಇಲ್ಲಾದರೂ ಏನಾದರೂ ಸಿಗುವ ಅವಕಾಶಯಿದೆಯೋ ಎಂದು ನೋಡೋಣ ಅಂತಾ ಹೊರಟೆ. ರಿಸೆಶನ್ ಮೊದಲು ಹೀಗೆ ಹೋದಾಗ ಸಾಮಾನ್ಯವಾಗಿ, ಇವನ್ನು ಏರ್ಪಡಿಸುತ್ತಿದ್ದ ದೊಡ್ಡ ಹೋಟೆಲ್ಗಳಲ್ಲಿ ಕಾರ್ ಪಾರ್ಕ್ ಮಾಡಲು ಸಾಕಷ್ಟು ಅವಕಾಶಗಳಿರುವುದಲ್ಲದೆ, ಕುಡಿಯಲು ಕಾಫಿ, ಚಾ, ಜ್ಯೂಸ್, ನೀರು, ಹಾಗು ಬೇಕರಿಯ ತಿಂಡಿ ತಿನಸುಗಳು, ಹಣ್ಣು ಹಂಪಲುಗಳನ್ನು ಇಡುವುದು ಸಾಮಾನ್ಯವಾಗಿತ್ತು. ಅಷ್ಟೆ ಅಲ್ಲದೆ, ತುಂಬಾ ಬೂತ್ ಗಳಿದ್ದು ಪ್ರತಿಯೊಂದರಲ್ಲೂ ಸುಮಾರು ಜನರಿರುತ್ತಿದ್ದರು ಬಂದ ಅಭ್ಯರ್ತಿಗಳೊಡನೆ ಸಂದರ್ಶಿಸಲು. ಆದ್ದರಿಂದ ಹೆಚ್ಚೆಂದರೆ ಒಂದೆರಡು ಗಂಟೆಯೊಳಗೆ ಹೋಗಿ ಬರಬಹುದಿತ್ತು. ಅಲ್ಲಿ ಹೆಚ್ಚು ಹೊತ್ತು ಇರುವ ಅವಶ್ಯಕತೆ ಇದ್ದರೆ, ಹೇಗಾದರೂ ಮಾಡಿ ಹೊಟ್ಟೆ ತುಂಬಿಸ ಬಹುದಿತ್ತು.

ಹೀಗಂತ ಯೋಚಿಸಿ, ಊಟ ಮಾಡದೆ ಬೆಳಗ್ಗೆ ೧೦:೩೦ ಗೆ ಹೊರಟೆ. ಮನೆಯಿಂದ ಸುಮಾರು ೧೭ ಮೈಲಿ ದೂರದಲ್ಲಿರುವ ಹೋಟೆಲ್ ನಲ್ಲಿ ಇದನ್ನು ಏರ್ಪಡಿಸಿದ್ದರು. ಅಲ್ಲಿ ಮುಟ್ಟಿದ ತಕ್ಷಣ ಗೊತ್ತಾಯ್ತು ಪಾರ್ಕಿಂಗ್ ಧರ್ಮದ್ದಲ್ಲ ಎಂದು. ಆದರೂ, ಪಾರ್ಕಿಂಗ್ ಟಿಕೆಟನ್ನು ಜಾಬ್ ಫೇರ್ಗೆ ಬಂದವರಿಗೆ ರದ್ದು ಮಾಡಬಹುದು ಅಂತಾ ಒಂದು ಆಶೆಯಿಂದ ಒಳಗೆ ಹೋದೆ. ಜಾಬ್ ಫೇರ್ ಇರುವ ಕೋಣೆಯ ಹೊರಗೆಯೇ ಸುಮಾರು ಇಪ್ಪತ್ತಡಿ ಉದ್ದದ ಕ್ಯೂ. ಕೊನೆಯಲ್ಲಿದ್ದವನ ಹತ್ತಿರ ವಿಚಾರಿಸಿದೆ, 'ಇದು ರೆಜಿಸ್ಟ್ರೇಶನ್ ಗಾ' . ಅವನಂದ, 'ಇಲ್ಲಾ, ಇದು ಒಂದು ಕಂಪೆನಿಗೆ ಮಾತ್ರ, ಬೇರೆ ಕಂಪೆನಿಗಾದರೆ ಒಳಗೆ ಹೋಗ ಬೇಕು'. ಒಳಗೆ ಹೋಗಿ ನೋಡಿದರೆ, ನಾನು ಎಣಿಸಿದ ಹಾಗೆ ತುಂಬಾ ಕಂಪೆನಿಗಳಿಗೆ ಬದಲು, ಬಾರೆ ನಾಲ್ಕೈದು ಕಂಪೆನಿಗಳಿದ್ದುವು. ಪ್ರತಿಯೊಂದರ ಮುಂದೂ ಅದೇ ತರಹ ಕೊನೆಯಿಲ್ಲದ ಲೈನುಗಳು. ಪ್ರತಿಯೊಂದು ಟೇಬಲ್ ನಲ್ಲಿ ಒಂದೋ ಎರಡೋ ಪ್ರತಿನಿಧಿಗಳು. ಸರಿ. ಒಂದು ಕ್ಯೂನ ಕೊನೆಯಲ್ಲಿ ನಾನೂ ಸೇರಿದೆ. ನನ್ನ ಮುಂದೆ ಒಬ್ಬ ಮಧ್ಯ ವಯಸ್ಕ, ಹಿಂದೆ ಈಗ ತಾನೆ ಕಾಲೇಜ್ ಮುಗಿಸಿ ಕೆಲಸ ಹುಡುಕುವವ. ನಮ್ಮ ಸಾಲು ಇರುವೆಗೂ ನಾಚುವಂತೆ ನಿಧಾನವಾಗಿ ಮುಂದುವರಿಯುತ್ತಿತ್ತು. ಆದ್ದರಿಂದ ಸ್ವಲ್ಪದರಲ್ಲೇ ನಾವು ನಮ್ಮ ಪಕ್ಕದವರೊಡನೆ ಸಂಭಾಷಣೆ ಶುರು ಮಾಡಿದೆವು. ನಮ್ಮೆಲ್ಲರ ಅಭಿಪ್ರಾಯ ಒಂದೆ ಆಗಿತ್ತು, ಚಿಕ್ಕವರಿಗೆ ಕೆಲಸ ಸಿಗುವ ಸಂಭವ ಜಾಸ್ತಿ ಈಗಿನ ಕಾಲದಲ್ಲಿ. ಕೊನೆಗೂ ಕ್ಯೂನಲ್ಲಿ ನಿಂತು ಒಂದೂವರೆ ಗಂಟೆಯ ನಂತರ ನನ್ನ ಸರದಿ ಬಂತು. ನೋಡಿದರೆ ಕೆಲಸಗಳಿರುವುದು ಬೇರೆ ಪ್ರಾಂತ್ಯಗಳಲ್ಲಿ.

ಅಷ್ಟರಲ್ಲಿ ಉಳಿದ ಟೇಬಲ್ ಗಳ ಮುಂದೂ ಕ್ಯೂ ಗಳು ಹನುಮಂತನ ಬಾಲಕ್ಕಿಂತಲೂ ಉದ್ದವಾಗಿ ಬೆಳೆದಿದ್ದುವು. ಮೊದಲೆಲ್ಲಾ ಇಂತಹ ಜಾಬ್ ಫೇರ್ ನಲ್ಲಿ ಆಯಾಯ ಕಂಪೆನಿಯ ಜಾಹಿರಾತಿನ ಪೆನ್ನುಗಳು, ಮತ್ತು ಇತರೇತರೆ ಸಣ್ಣಪುಟ್ಟ ಸಾಮಾನುಗಳನ್ನ ಮುಕ್ತವಾಗಿ ಕೊಡುತ್ತಿದ್ದರು. ಈವಾಗ ಅವೇನಿರಲಿಲ್ಲ. ಕೊನೆಗೆ ಬಾಯರಿಕೆಯಾಗಿ ನೀರಾದರೂ ಇದೆಯೇ ಅಂತಾ ಹುಡುಕಿದರೆ, ಅದೂ ಇರಲಿಲ್ಲ! ಇನ್ನು ಜ್ಯೂಸ್ ಕಾಫಿ ತಿಂಡಿ ವಿಚಾರವೇ ಬಿಡಿ. ಹೊರಗೆ ಬಂದು ಹೋಟೆಲ್ನ ವೈಟರ್ ನ ಹತ್ತಿರ ನೀರು ಕೇಳಿದರೆ, ಅವನೇನೋ ನಾನು ಮಹಾ ತಪ್ಪು ಮಾಡಿದ ಹಾಗೆ ನೀರು ಕೊಟ್ಟ.

ಕೋಣೆಯ ಹೊರಗೆ ಹಾವಿನಂತೆ ಬೆಳೆದಿದ್ದ ಕ್ಯೂ ಇನ್ನೂ ಉದ್ದವಾಗಿತ್ತು ಇಷ್ಟು ಹೊತ್ತಿಗೆ. ಗಂಟೆ ಕಳೆದಂತೆ ಕಾರ್ ಪಾರ್ಕ್ ಗೆ ಇನ್ನೆಷ್ಟು ದುಡ್ಡು ಚೆಲ್ಲಬೇಕೋ ಎಂದು ದೊಡ್ಡ ಯೋಚನೆಯಾಗಿತ್ತು ಇಷ್ಟರಲ್ಲಿ. ಇದರ ಬಗ್ಯೆ ಯಾವ ರದ್ದೂ ಇಲ್ಲದಂತೆ ಇಷ್ಟರಲ್ಲಿ ವಿದಿತವಾಗ ತೊಡಗಿತು. ಆದರೂ ಆ ಉದ್ದದ ಬಾಲದ ಹಿಂದೆ ನಾನೂ ಸೇರಿಕೊಂಡೆ. ಅದೇ ಹೊತ್ತಿಗೆ, ಒಬ್ಬಾಕಿ ಬಂದು, ನೀವು ಬೇಕಿದ್ದರೆ ನಿಮ್ಮ ರೆಸ್ಯುಮೆ ಟೇಬಲ್ ಮೇಲೆ ಬಿಟ್ಟು ಹೋಗ ಬಹುದು ಎಂದಳು. ಸರಿ, ಇನ್ನು ಅಲ್ಲಿರುವ ಸಂದರ್ಶಕನೊಡನೆ ಮಾತಾಡಿದರೂ ನನಗಿರುವ ಅವಕಾಶ ಅಷ್ಟೆ, ಅಲ್ಲದೆ, ಗಳಿಗೆ ಗಳಿಗೆಗೂ ನಾನು ಪಾರ್ಕಿಂಗ್ ಗೆ ಕೊಡಬೇಕಾದ ದುಡ್ಡು ಮಾತ್ರ ಇನ್ನೂ ಜಾಸ್ತಿಯಾಗುವುದು ಮಾತ್ರ ಗ್ಯಾರಂಟಿ, ಆದ್ದರಿಂದ ಮನೆಗೆ ಹೋಗುವುದೇ ಸರಿ ಅಂತಾ ತೀರ್ಮಾನಿಸಿ, ವಾಪಾಸು ಹೊರಟೆ. ನೋಡಿದರೆ, ಪಾರ್ಕ್ ಮಾಡಿದ್ದಕ್ಕೆ ಹತ್ತು ಡಾಲರ್! ಅದೂ ಜಾಬ್ ಫೇರ್ ಗೆ ಕಡಿಮೆ ಮಾಡಿದ್ದಂತೆ!

ಇನ್ನು ಮುಂದೆ ನಾನು ಜಾಬ್ ಫೇರ್ ಗೆ ಹೊರಟರೆ, ಶುರುವಾಗುವ ಸಮಯಕ್ಕಿಂತ ಒಂದು ಗಂಟೆ ಮೊದಲು ಅಲ್ಲಿರಬೇಕು, ಅಲ್ಲಿ ಎಲ್ಲಿಯಾದರೂ ರಸ್ತೆಯಲ್ಲಿ ಪಾರ್ಕ್ ಮಾಡಬೇಕು, ತಿನ್ನಲು ತಿಂಡಿ, ಕುಡಿಯಲು ನೀರು ಕೊಂಡು ಹೋಗಬೇಕು. ಅಲ್ಲಿರುವ ಕೆಲಸಗಳು ಕೆಲವೇ ಇರುವುದರಿಂದ, ಹೋಗದಿದ್ದರೂ ಪರವಾಗಿಲ್ಲಾ. ಮನೆಯಲ್ಲೇ ಸುಖವಾಗಿ ನಿದ್ರಿಸಿದರೆ ಇನ್ನೂ ಉತ್ತಮ ಆರೋಗ್ಯಕ್ಕೆ.