Saturday, July 11, 2009

ಸೈಬರ್ ಅಟ್ಯಾಕ್

ಇದೇ ಜುಲಾಯಿ ೪, ಅಮೇರಿಕಾದ ಸ್ವಾತಂತ್ರ್ಯ ದಿನದಂದು, ಅಮೆರಿಕಾದ ಫೆಡರಲ್ ಟ್ರೇಡ್ ಕಮ್ಮಿಶನ್ ನ ಹಲವಾರು ಡಜನ್ ವೆಬ್ ಸೈಟ್ ಗಳು, ಟ್ರೆಝರಿ ಖಾತೆಯ ವೆಬ್ ಸೈಟ್ ಗಳು, ಹಾಗೂ ಇನ್ನಿತರ ಸರಕಾರಿ ಸೈಟ್ ಗಳು ಸ್ತಗಿತ ಗೊಂಡುವು ಈ ಇಂಟರ್ನೆಟ್ 'ಸೇವೆ ನಿರಾಕರಣೆ ಆಕ್ರಮಣ' ದಿಂದ (Denial of Service Attack – DoS) ಅಥವ ಸೈಬರ್ ಅಟ್ಯಾಕ್ ನಿಂದ. ಇವು ವೈಟ್ ಹೌಸ್ ಮೇಲೆ ಉದ್ದ್ಯೇಶಿಸಿ ಮಾಡಿದ ಅಕ್ರಮಣಗಳಿರಬಹುದೆಂದು ಊಹಿಸಲಾಗಿದೆ. ಆದರೆ, ಉಳಿದ ಹೆಚ್ಚಿನವು ಇದರಿಂದ ತೊಂದರೆಗೊಳಗಾದರೂ, ವೈಟ್ ಹೌಸ್ ನ ವೆಬ್ ಸೈಟ್ ಗೆ ತೊಂದರೆ ಬಂದಿಲ್ಲ. ಇದಾದ ಸ್ವಲ್ಪ ದಿನಗಳಲ್ಲೇ, ದಕ್ಷಿಣ ಕೊರಿಯದಲ್ಲೂ ಇದೇ ಪ್ರಹಾರದ ಅಲೆಗಳ ಪ್ರಕರಣ. ಅಂದು ಶುರುವಾದ ಆಕ್ರಮಣ ಇನ್ನೂ ಮುಂದುವರಿಯುತ್ತಾ ಇದೆ. ಇದು ಇತ್ತೀಚಿಗಿನ ದಿನಗಳಲ್ಲಿ ನಡೆದ ಬಾರೀ ದೊಡ್ಡ ಸೈಬರ್ ಅಟ್ಯಾಕ್ ಆಗಿದೆ.

ಇವೆಲ್ಲಾ ಆಕ್ರಮಣದ ಅಲೆಗಳು ಕೇಳಲು ಶಾಕ್ ತರುವಂತದ್ದಾದರೂ, ಅಂತಹ ಮುಂದುವರಿದ (sophisticated) ಪರಿಯಲ್ಲಿ ಮಾಡಿದ ಆಕ್ರಮಣಗಳಲ್ಲ ಇವು ಎಂದು ಗಮನಕ್ಕೆ ಬಂದಿದೆ. ಇದರ ಬಗ್ಯೆ ಅನ್ವೇಶಣೆ ನಡೆಸಿದವರು ಇದು 'ಬೀರಿದ ಸೇವೆ ನಿರಾಕರಣೆ" (Distributed Denial of Service Attack) ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ಆಕ್ರಮಣದಲ್ಲಿ ಲೋಕದಲ್ಲೆಲ್ಲಾ ಹರಡಿರುವ, ಮಾಲ್ ವೇರ್ (Malware= Malicious software) ನಿಂದ ಸೋಂಕಿದ, ಸುಮಾರು 50,000 ಕಂಪ್ಯೂಟರ್ ಗಳನ್ನು ಭ್ರಮಿಷ್ಟ ರಾಗಿ (zombi) ಬೋಟ್ ನೆಟ್ (Botnet) ಪರಿಯಲ್ಲಿ ಬಳಸಲಾಗಿದ್ದು (ಬೋಟ್ ನೆಟ್ ನ ಮೇಲೆ ಲೇಖನ ಕೆಂಡಸಂಪಿಗೆಯಲ್ಲಿ ಬಂದಿತ್ತು ಈ ಹಿಂದೆ), ಆಕ್ರಮಣದ ಉತ್ತುಂಗದಲ್ಲಿ, ವೆಬ್ ಸೈಟ್ ಗಳ ಸರ್ವರ್ ಗಳ ಪರಿಮಿತಿಯ ಹತ್ತು ಪಾಲು, ಸುಮಾರು ಸೆಕೆಂಡಿಗೆ ೨೦-೪೦ ಗಿಗಾ ಬೈಟ್ ನಷ್ಟು (20-40 GB), ಮಾಹಿತಿಯ ಕಳಿಸಲಾಗಿತ್ತು. ಇದರಿಂದ ಆಗುವ ಪರಿಣಾಮಕ್ಕೆ ದಿನ ನಿತ್ಯದ ಸಾಮಾನ್ಯ ಉದಾಹರಣೆ ಪೈಪಿನಲ್ಲಿ ಹಿಡಿಯದಷ್ಟು ಮಿತಿಮೀರಿ ನೀರು ಕಳಿಸುವುದು. ಪೈಪಿನ ಮಿತಿ ಓಂದು ಸೆಕೆಂಡಿಗೆ ೧೦೦ ಲಿಟರ್ ಕಳಿಸುವ ತಾಕತ್ತು ಇದ್ದಲ್ಲಿ ಅದರ್ ಮೂಲಕ ಸೆಕೆಂಡಿಗೆ ೧೦೦೦ ಲಿಟರ್ ಕಳಿಸಲು ಯತ್ನಿಸಿದಲ್ಲಿ ಏನಾಗಬಹುದು?

ಈ 'ಸೇವೆ ನಿರಾಕರಣ" ಅಥವ DoS ಬಗ್ಯೆ ನನಗ್ಯಾಕೆ ಯೋಚನೆ? 'ಸೇವೆ ನಿರಾಕರಣ" ಎಂದರೇನು? ಇದನ್ನು ಹ್ಯಾಗೆ, ಯಾರು, ಯಾಕೆ ಮಾಡುತ್ತಾರೆ? ಇದರಿಂದ ತೊಂದರೆಗಳೇನು? ಇದನ್ನು ಮಾಡಲು ಹೆಚ್ಚಿನ ಬುದ್ದಿವಂತಿಕೆ ಬೇಕೆ? ಇದನ್ನು ತಡೆಯುವುದು ಹೇಗೆ? ಕಳೆದ ಐದು ವರ್ಷ ಆಕಾಶದಲ್ಲಿ ಉಪಗ್ರಹಗಳ ಉಪಯೋಗಿಸಿ ನೆಟ್ ವರ್ಕ್ ಕಟ್ಟುವ ಅತ್ಯಂತ ಮುಂದುವರಿದ ಇಂಟರ್ನೆಟ್ ಕೃಷಿಯಲ್ಲಿದ್ದ ನನಗೆ, ಅದರ ಭದ್ರತೆಯೂ ಒಂದು ಅತೀ ಮುಖ್ಯ ವಿಚಾರವಾಗಿತ್ತು. ಅದರಲ್ಲಿ 'ಸೇವೆ ನಿರಾಕರಣ" ಬಹುಶಃ ಬಹು ಪ್ರಾಮುಖ್ಯ ಸ್ಥಾನ ಪಡೆಯುತ್ತದೆ.

'ಸೇವೆ ನಿರಾಕರಣ ಆಕ್ರಮಣ" ಎಂದರೆ ಇಂಟರ್ನೆಟ್ ನ ಸಂಪನ್ಮೂಲಗಳು ನ್ಯಾಯವಾಗಿ ಉಪಯೋಗಿಸುವವರಿಗೆ ಸಿಗದಂತೆ ಮಾಡುವುದು. ಮೇಲೆ ಹೇಳಿದ ಉದಾಹರಣೆಯಂತೆ, ಇದು ನೆಟ್ ನಲ್ಲಿರುವ ಯಾವುದೇ ಸಂಪರ್ಕ ಸಾಧನ (ರೌಟರ್, ವೆಬ್/ಈಮೇಲ್ ಸರ್ವರ್, ಡೊಮೈನ್ ನೇಮ್ ಸರ್ವರ್) ಗಳ ಕಂಪ್ಯೂಟರ್ ಗಳ ಪ್ರಾಸೆಸ್ಸಿಂಗ್ ನ ಮಿತಿಮೀರಿದಾಗ ಮಾತ್ರ ಸಾಧ್ಯ. ಉದಾಹರಣೆಗೆ ನಿಮ್ಮ ಮನೆ ಕಂಪ್ಯೂಟರ್ ನಲ್ಲಿ ಹೆಚ್ಚಿನ ಮೆಮೊರಿ ಇಲ್ಲದಾಗ, ನೀವು ಒಂದೇ ಸಲಕ್ಕೆ ಬೇರೆ ಬೇರೆ ಪ್ರೋಗ್ರಾಮ್ ಗಳ ಉಪಯೋಗಿಸ ಹೊರಟಲ್ಲಿ, ನಿಮ್ಮ ಕಂಪ್ಯೂಟರ್ 'ಫ್ರೀಜ಼' (freeze) ಆಗುವಂತೆ. ಇನ್ನು ಸರ್ವರ್ ಗಳ ತೆಕ್ಕೊಂಡಲ್ಲಿ, ಅವುಗಳನ್ನು ಜಾಲದಲ್ಲಿ (network) ಜೋಡಿಸಿ ನಿಮಗೆ ಅದು ದಕ್ಕುವಂತೆ ಮಾಡಿದ ಪೈಪ್ ಗಳ (link capacity) ಮಿತಿಯೂ ಚಿತ್ರಕ್ಕೆ ಬರುತ್ತದೆ.

ಹಲವಾರು ರೀತಿಯಲ್ಲಿ ಮಾಡಲಾಗುವ ಈ ಆಕ್ರಮಣಗಳಿಗೆ ಇಂಟರ್ನೆಟ್ ನ ಕೆಲವು ಪ್ರೋಟೊಕಾಲ್ ಗಳನ್ನ (ICMP, TCP/SYN, IP, fragmented packets, etc) ಬಳಸಲಾಗುತ್ತದೆ. ಎಲ್ಲಾದರ ಉದ್ಯೇಶವೂ ಒಂದೇ, ನೆಟ್ ನ ಮಿತಿಯನ್ನು ಮೀರುವುದು ಅಥವಾ ನೆಟ್ ನಲ್ಲಿರುವ ಸಲಕರಣೆಗಳನ್ನ ಹಾಳು ಮಾಡುವುದು. ಇವೆಲ್ಲಾದರಲ್ಲಿ ಪಡೆಯುವವರ ಐಪಿ ವಿಳಾಸ ಒಂದೇ ಆಗಿದ್ದರೂ, ಹೆಚ್ಚಿನ ಆಕ್ರಮಣಗಳಲ್ಲಿ, ಪ್ಯಾಕೆಟ್ಗಳಲ್ಲಿರುವ ಕಳಿಸಿದವರ ಐಪಿ ವಿಳಾಸ ಮಾತ್ರ ನಕಲಿಯಾಗಿರುತ್ತದೆ. ಇದರಿಂದಾಗಿ, ನೆಟ್ ನಲ್ಲಿ ಪ್ಯಾಕೆಟ್ ಗಳ ಪ್ರವಾಹ ಉಂಟಾಗುತ್ತದೆ.

ಬೀರಿದ ಪರಿಯಲ್ಲೇ ಹೆಚ್ಚಾಗಿ ಮಾಡುವ ಆಕ್ರಮಣದಲ್ಲಿ ಮೊತ್ತ ಮೊದಲನೆಯದಾಗಿ, ಲೋಕದ ಹಲವಾರು ಕಂಪ್ಯೂಟರ್ ಗಳಲ್ಲಿ ಮಾಲ್ ವೇರ್ ನ್ನು ಬಿಡಲಾಗುತ್ತದೆ. ನಿಮ್ಮ ಮನೆಯ ಕಂಪ್ಯೂಟರ್ ನಲ್ಲೂ ಇವು ಇರಬಹುದು, ನಿಮಗೆ ಗೊತ್ತಿಲ್ಲದೇ ಇವು ಕೆಲವಾರು ರೀತಿಯಲ್ಲಿ ನೀವು ಡೌನ್ ಲೋಡ್ ಮಾಡಿರುತ್ತೀರಿ. ಹಾಗೂ ಅದು ಒಂದು 'ಜೋಂಬಿ' ಯಾಗಿ ಆಗಲೇ ವರ್ತಿಸಿದ್ದಿರ ಬಹುದು ಲೋಕದಲ್ಲಿ ದಿನ ನಿತ್ಯ ಸಾಮಾನ್ಯೆ ನಡೆಯುವ ಈ ಅಕೃಮ ಕೃತ್ಯದಲ್ಲಿ. ಇವು ಇದ್ದಲ್ಲಿ ನಿಮ್ಮ ಕಂಪ್ಯೂಟರ್ ತುಂಬಾ ನಿಧಾನವಾಗ ಬಹುದು.


ಇದನ್ನು ಮಾಡುವವರಿಗೆ ಇದರಿಂದ ಏನೂ ಲಾಭವಿಲ್ಲದಿದ್ದರೂ, 'ನನಗಿಲ್ಲದ್ದು ಇತರರಿಗೂ ಇರಬಾರದು' ಎಂಬ ಧೋರಣೆಯಲ್ಲಿ ಮಾಡುವ ಅಕೃಮ ಕೃತ್ಯ ಇದು. ಇದನ್ನು ಮಾಡುವವರಿಗೆ ಇದರಿಂದಾಗಿ ಯಾವ ಮಾಹಿತಿಯೂ ಸಿಗದು. ಆದರೆ, ಇಂತಹ ವೆಬ್ ಸೈಟ್ ನಡೆಸುವವರಿಗೆ ಹಾಗೂ ಉಪಯೋಗಿಸುವವರಿಗೆ ಮಾತ್ರ ಈ ಸೇವೆಯ ಅಭಾವದಿಂದ ಮತ್ತು ಅದರಿಂದ ಬರುವ ಆದಾಯದಿಂದ ಇದರಿಂದ ತೊಂದರೆಯಾಗುತ್ತದೆ. ಇದನ್ನು ಹೊಸ ವರ್ಷದ ದಿನ ಹಾಗೂ ಮದರ್ಸ್ ಡೇ ಯ ಫೋನ್ ಲೈನ್ ಸಿಗದಿರುವ ಕಷ್ಟಕ್ಕೆ ಹೋಲಿಸ ಬಹುದು. ಆದರೆ, DoS ಮಾತ್ರ ಅನ್ಯಾಯದಲ್ಲಿ ಮಾಡುವಂತಾದ್ದು. ಹಾಗೂ, ಈಗ ಹೆಚ್ಚಾಗಿ ಎಲ್ಲವೂ ಇಂಟರ್ನೆಟ್ಟನ್ನೇ ಅವಲಂಬಿಸಿರಿವುದರಿಂದ, ಇವು ಯುದ್ಧ, ಇತ್ತೀಚಿಗೆ ನಡೆದಂತಾ ವಿಮಾನ ಅಪಘಾತ ಅಥವಾ ಭೂಕಂಪ ಇತ್ಯಾದಿ ಸಂದಿಗ್ಧ ಕಾಲದಲ್ಲಿ ನಡೆದರೆ, ಸರಿಯಾದ ಸಮಯಕ್ಕೆ ಸಹಾಯ ಸಿಗದೆ ಇನ್ನೂ ಜಾಸ್ತಿಯ ದುಷ್ಪರಿಣಾಮಗಳು ಉಂಟಾಗ ಬಹುದು.

ಈ 'ಹ್ಯಾಕಿಂಗ್' ಕೃತ್ಯ ಎಸಗಲು ಕಷ್ಟವೆನ್ನಿಸಿದರೂ, ಇದಕ್ಕೆ ಅಂತಹ ಪರಿಜ್ನಾನದ ಅವಶ್ಯಕತೆಯಿಲ್ಲ. ಇದು ಸಾಮಾನ್ಯ ಜನರಿಗೆ ಸಾಧ್ಯ. ಇವಕ್ಕೆ ಬೇಕಾದ ಎಲ್ಲಾ ತರದ ಸಾಫ್ಟ್ ವೇರ್ ಸಲಕರಣೆಗಳು ಸುಲಭವಾಗಿಯೇ ಇಂಟರ್ನೆಟ್ ನಲ್ಲಿ ದೊರೆಯುತ್ತವೆ. ಅದನ್ನು ಉಪಯೋಗಿಸಲು ಅಷ್ಟೇನೂ ಬುದ್ದಿವಂತಿಕೆಯ ಅವಶ್ಯವೂ ಇಲ್ಲ. ಕೆಲವು ಸಲ ಇಂತಹ ಆಕ್ರಮಣಗಳನ್ನ ಹದಿ ಹರೆಯದ ಹುಡುಗರು ಬರೇ ತಮಾಶೆಗೋಸ್ಕರ ಮಾಡಿದ್ದೊ ಇದೆ. ಇದಕ್ಕೆ ಒಂದು ಉದಾಹರಣೆ ೭ ಫೆಬ್ರವರಿ ೨೦೦೦ ದಲ್ಲಿ ಯಾಹೂನ ಮೇಲೆ ನಡೆಸಿದ ಆಕ್ರಮಣ. ಇದನ್ನು ಈಗ ಇಂಟರ್ನೆಟ್ ನ ಚರಿತ್ರೆಯಲ್ಲೇ ಒಂದು ಮುಖ್ಯ ಘಟನೆಯೆಂದು ಪರಿಗಣಿಸಲಾಗಿದೆ. ಇದನ್ನು ನಡೆಸಿದಾತ ೧೪ ವರ್ಷದ 'ಮಾಫಿಯ ಬೋಯ್' ಎಂದು ಸ್ವತಹ ಕರೆದುಕೊಳ್ಳುತ್ತಿದ್ದ, ಬಾಸ್ಕೆಟ್ ಬಾಲ್ ಮತ್ತು ಹುಡುಗಿಯರನ್ನು ಇಷ್ಟ ಪಡುತ್ತಿದ್ದ, ಕೆನಡಾದ ಮೋಂಟ್ರಿಯಲ್ ನ ಹುಡುಗ, ಮೈಕಲ್ ಕಾಲ್ದೆ(Michael Calce).

ಆ ಸೋಮವಾರ ಬೆಳಗ್ಯೆ ಸುಮಾರು ೧೦:೩೦ ಗಂಟೆಗೆ, ಯಾಹೂನ ಅತ್ಯಂತ ದೊಡ್ಡ ಇನ್ಫೊರ್ಮೇಶನ್ ಪೋರ್ಟಲ್ ಮತ್ತು ಈ-ಕಾಮರ್ಸ್ ನ ಸೈಟ್ ಗಳು ಮಾಹಿತಿಯ ಪ್ಯಾಕೆಟ್ ಗಳ ಪ್ರಹಾರಕ್ಕೊಳಗಾದುವು. ಸುಮಾರು ಮಿನಿಟ್ ಗೆ ೩.೫ ಮಿಲಿಯ ಸರಾಸರಿ ಈಮೇಲ್ ಗಳ ಪ್ಯಾಕೆಟ್ ಗಳಿಂದ ಒಂದು ರೌಟರ್ ಇದರಿಂದ ತತ್ತರಿಸಿ ಹೋಗಿ ಸುಧಾರಿಸಿ ಕೊಂಡರೂ, ಇದರಿಂದಾಗಿ ಯಹೂನ ಮುಖ್ಯ ISP ನೆಟ್ ವರ್ಕ್ ಗೆ ಸಂಬಂಧ ಮುರಿದು ಬಿತ್ತು. ಸ್ವಲ್ಪದರಲ್ಲೇ ಯಾಹೂನ ಕಾರ್ಯ ನಿರ್ವಾಹಕರಿಗೆ ಅರಿವಾಯಿತು ಇದು ಒಂದು ಸಾಮಾನ್ಯ ಸರ್ವರ್ ನ ತೊಂದರೆಯಲ್ಲ, ಉದ್ದ್ಯೇಶಪೂರ್ವಕವಾಗಿ ಮಾಡಿದ ಆಕ್ರಮಣ ಎಂದು. ಅವರಂದು ಕೊಂಡದ್ದು ಯಾರೋ ದೊಡ್ಡ ಅನುಭವವುಳ್ಳ ಹ್ಯಾಕರ್ /ಗಳು ತುಂಬಾ ಯೋಚಿಸಿ ಬೇಕೆಂದೇ ಮಾಡಿದ ಕೃತ್ಯ ಇದೆಂದು. ಆದರೆ ಅವರಿಗೆ ಅರಿವಿಲ್ಲದ್ದು ಏನೆಂದರೆ ಇದು ಒಬ್ಬ ಟೀನೇಜರ್ ಅವನು ಆಗ ತಾನೆ ಡೌನ್ ಲೋಡ್ ಮಾಡಿದ ಒಂದು ಸ್ಕ್ರಿಪ್ಟನ್ನು ಅದು ಕೆಲಸ ಮಾಡುತ್ತೊ ಇಲ್ಲವೋ ಎಂದು ಪರಿಶೀಲಿಸಲು ಮಾಡಿದ ಯತ್ನದ ಪ್ರತಿಫಲ ಅದು. ಇವೆಲ್ಲಾ ಮುಗಿದ ನಂತರ ಇದರ ಬಗ್ಯೆಯ ಮಾಹಿತಿ ಸುಮಾರು ೬೩೦ ಪಿಕ್ ಅಪ್ ಟ್ರಕ್ ಗಳಲ್ಲಿ ಪೇರ ಬಹುದಾದಷ್ಟು ಪೇಪರುಗಳಲ್ಲಿ ತುಂಬಿತ್ತು!

ಆ ರಾತ್ರಿ FBI ಯ ಕಂಪ್ಯೂಟರ್ ಅಕ್ರಮ ಪ್ರವೇಶ ದಳದ ಬಿಲ್ಲ್ ಸ್ವಾಲ್ಲೋ ಎಂಬಾತ IRC ಚಾಟ್ ರೂಮಿನ ಆಪರೇಟರ್ ನಂತೆ ಸೋಗು ಹಾಕಿ ಇನ್ನೊಂದು ಉದ್ದದ ರಾತ್ರಿಯ ಕಳೆಯಲು ತಯಾರಾಗಿದ್ದ ಕಾಫಿಯ ಜೊತೆ. ಸಾಮಾನ್ಯವಾಗಿ ಅಷ್ಟೇನು ಮುಖ್ಯವಲ್ಲದ ಟೀನೇಜ್ ಹ್ಯಾಕರ್ ಗಳು ಬರುವ ಆ ಜಾಗದಲ್ಲಿ ಅಂದು 'ಮಾಫಿಯ ಬೋಯ್" ಅಂದು ಒಮ್ಮೆಲೆ ಉದ್ಭವಿಸಿದ. ಆತ ತನ್ನ ಚಾಣಾಕ್ಷತೆಯ ಬಡಾಯಿ ಎಷ್ಟು ಕೊಚ್ಚಿಕೊಳ್ಳುತ್ತಿದ್ದನೆಂದರೆ, ಅತನನ್ನು ಕೊನೆಗೆ ಹೊರಗೆ ಕಳಿಸ ಬೇಕಾಯಿತು. ಆದರೆ ಸ್ವಾಲ್ಲೋಗೆ ಅಂದು 'ಮಾಫಿಯ ಬೋಯ್' ಗೂ ಯಾಹೂನ ಅಟ್ಟಾಕ್ ಗೂ ಸಂಬಂಧ ಕಲ್ಪಿಸಲಾಗಲಿಲ್ಲ.

ಮೇ ೮ ರಂದು ಬೆಳಗ್ಗೆ ೯ ಗಂಟೆಗೆ ಓನ್ ಲೈನ್ ಸ್ಟೋರ್ Buy.com ಪಬ್ಲಿಕ್ ಸ್ಟಾಕ್ ಪ್ರಥಮವಾಗಿ ಬಿಡುಗಡೆ ಯಾಯಿತು. ಇದಾದ ಸ್ವಲ್ಪ ಹೊತ್ತಲ್ಲೇ ಅದರ ಎಲ್ಲಾ ಸರ್ವರ್ ಗಳು ಅಟ್ಟಾಕ್ ಗೆ ತುತ್ತಾದುವು. ಸುಮಾರು ೧೦:೩೦ ರ ಹೊತ್ತಿಗೆ ಅದರ ಕಾರ್ಯನಿರ್ವಾಹಕರು ಸರ್ವರ್ ಗಳ ಮಿತಿಯ ಎರಡು ಪಟ್ಟು ಮಾಹಿತಿಯ ಧಾಳಿಗೆ ಒಳಗಾಗಿ ಹೆಣಗಾಡುತ್ತಿದ್ದರು. ಇದರ ಮೇಲೇ ಹೊಂದಿ ಕೊಂಡಿದ್ದ ಅವರ ವ್ಯವಹಾರ ಯಾವಾಗ ಪುನಹ ಶುರುವಾಗಬಹುದು ಎಂದು ತಿಳಿಯದಾಗಿತ್ತು. ಅದೇ ದಿನ ಮಧ್ಯಾಹ್ನ ಈಬೇ, ಹಾಗೂ ಅಮೆಜಾನ್ ಗಳೂ ಈ ಆಕ್ರಮಣಕ್ಕೆ ತುತ್ತಾದುವು.

ಆ ರಾತ್ರಿ, ಸ್ವಾಲ್ಲೋನು ಡ್ಯೂಟಿಗೆ ಬಂದಾಗ ಪುನಹ ಮಾಫಿಯ ಬೋಯ್ ಎದುರಾದ ಚಾಟ್ ರೂಮಿನಲ್ಲಿ. ಈ ಬಾರಿ ಸ್ವಾಲ್ಲೋನಿಗೆ ಅಂದು ನಡೆದ ಅಟ್ಟ್ಯಾಕ್ ನ ಅರಿವಿತ್ತು. ಅಂದೂ ಮಾಫಿಯ ಬೋಯ್ ಅಂದು ನಡೆದ ಅಟ್ಟ್ಯಾಕ್ ಗೂ ತಾನೆ ಕಾರಣ ಎಂದಾಗ IRC ಯಲ್ಲಿದ್ದ ಹ್ಯಾಕರ್ ಗಳ್ಯಾರೂ, ಸ್ವಾಲ್ಲೋನನ್ನು ಸೇರಿ, ನಂಬಲಿಲ್ಲ. ಯಾಕೆಂದರೆ ಇವನನ್ನಾಗಲೇ 'ಬೋಗಸ್ ಮೀಟರ್' ಎಂದು ಕರೆಯಲು ಶುರುಮಾಡಿದ್ದರು. ಆಗ ಮಾಫಿಯ ಬೋಯ್ ಅವರೆಲ್ಲರೊಡನೆ ಸವಾಲೊಡ್ಡಿದ: ' ಇನ್ನೇನನ್ನ ಅಟ್ಟಾಕ್ ಮಾಡಿ ತೋರಿಸಲಿ?' ಎಲ್ಲರೂ ಇವನ ಸವಾಲನ್ನು ನಿರ್ಲಕ್ಷಿಸಿದರೂ, ಒಬ್ಬ ಸಲಹೆ ಕೊಟ್ಟ: 'CNN and E-Trade ಗಳು ಒಳ್ಳೆ ಗುರಿಗಳು".

ಹಲವು ನಿಮಿಶಗಳೊಳಗೆ, CNN ನ ಜಾಗತಿಕ ವಾರ್ತೆಯ ಎಲ್ಲಾ ಕಾರ್ಯಗಳೂ, ಹಾಗೂ CNN ನ ಸುಮಾರು ೧೨೦೦ ವೆಬ್ ಸೈಟ್ ಗಳೂ ತತ್ತರಿಸಿ ಸ್ನಿಗ್ಧವಾಗಲು ಪ್ರಾರಂಭವಾಯಿತು. ಮರುದಿನ ಡಾಟೆಕ್ ಹಾಗೂ E-Trade ಗಳೂ ತೊಂದರೆಗೊಳಗಾದುವು. ಇವಕ್ಕೆಲ್ಲ ಕ್ಯಾಲಿಫೋರ್ನಿಯ, ಸಾಂತ ಬಾರ್ಬರ, ಆಲ್ಬರ್ಟ, ಅಟ್ಲಾಂಟ, ಹಾಗೂ ಮ್ಯಾಸ್ಸಚುಸೆಟ್ ನ ಯೂನಿವರ್ಸಿಟಿಗಳ ಕಂಪ್ಯೂಟರ್ ಹಾಗೂ ಜಗತ್ತಿನಾದ್ಯಂತ ಇನ್ನೂ ೭೫ ಕಂಪ್ಯೂಟರ್ ಗಳನ್ನ 'ಜೋಂಬಿ' ಯಾಗಿ ಉಪಯೋಗಿಸಲಾಗಿತ್ತು! ಅಕ್ರಮವಾಗಿ ಪ್ರವೇಶಿದವ ಈ ಎಲ್ಲಾ ಕಂಪ್ಯೂಟರ್ ಗಳಲ್ಲಿ ದುರುದ್ದೇಶದ ಸಾಫ್ಟ್ ವೇರ್ ನ್ನು (malicious software) ನೆಟ್ಟು ಅವೆಲ್ಲಾ 'ಲೋಂಚಿಂಗ್ ಪ್ಯಾಡ್' ತರಹ ಅವಾಗಿಯೇ ಈ ಆಕ್ರಮಣ ಮಾಡುವಂತೆ ಮಾಡಿದ್ದನು.

ಹಲವಾರು ವರ್ಷಗಳಿಂದ ನುರಿತವರು ಮುನ್ನೆಚ್ಚರಿಕೆ ಕೊಡುತ್ತಿದ್ದ ತುರ್ತು ಪರಿಸ್ತಿತಿ ಇದಾಗಿತ್ತು. ಅಂದು ಶುರುವಾದ FBI ಯ ಅನ್ವೇಷಣೆ ಕೆನಡಾದ ಕಡೆ ವಾಲಿದಾಗ, FBI ಹಾಗೂ ಕೆನಡಾದ ಪೋಲಿಸ್ ರು ಒಂದಾದರು ಈ 'ಮಾಫಿಯ ಬೋಯ್' ಯ ಹುಡುಕುವಿಕೆಗೆ. ಫೆಬ್ರವರಿ ೧೪ ರಂದು ಕೆನಡಾದ RCMP (Royal Canadian Mounted Police) ಯೊಡನೆ ಸೇರಿ ಈ ಮಾಫಿಯ ಬೋಯ್ ಯ ಪತ್ತೆಗೆ 'Operation Claymore' ಉದಯವಾಯಿತು. ಮುಂದೆ ಸೆರೆ ಹಿಡಿಯಲ್ಪಟ್ಟು, ಸೆಪ್ಟಂಬರ್ ೧೨, ೨೦೦೧ ರಲ್ಲಿ ಮೋಂಟ್ರಿಯಲ್ ನ ಯುವ ಕೋರ್ಟ್ ಇವನಿಗೆ ೮ ತಿಂಗಳು 'open custody' ಸಜೆ ಯಿತ್ತು, ಒಂದು ವರ್ಷ ಉಮೇದುವಾರಿಕೆಯಲ್ಲಿಟ್ಟು, ಆ ಸಮಯದಲ್ಲಿ ಇಂಟರ್ನೆಟ್ ಉಪಯೋಗ ಬಿಗಿತದಲ್ಲಿಟ್ಟರು. ಇಂದು ಈತ ನೆಟ್ ವರ್ಕ್ ಸೆಕ್ಯೂರಿಟಿ ಯ ಬಗ್ಯೆ ಕನ್ಸಲ್ಟೆಂಟ್ ಆಗಿದ್ದು ಮೊನ್ನೆ ಏಪ್ರಿಲ್ ನಲ್ಲಿ ನಡೆದ IT 360 ಕಾನ್ಫರೆಂಸ್ ನಲ್ಲಿ ಮುಖ್ಯ ಅತಿಥಿ ಭಾಷಣಕಾರನಾಗಿದ್ದ. ಹಾಗೂ ಒಂದು ಪುಸ್ತಕವನ್ನೂ ಬರೆದಿದ್ದಾನೆ: "How I cracked The Internet And Why It's Still Broken."

ದಿನ ನಿತ್ಯ ನಡೆಯುವ ಈ ಆಕ್ರಮಣಗಳನ್ನ ಇಂದು ಹಲವಾರು ತರದಲ್ಲಿ ತಡೆಯುವ ವ್ಯವಸ್ತೆ ಇದ್ದಾಗ್ಯೂ, ಇದನ್ನು ಪೂರ್ಣವಾಗಿ ತಡೆಯುವುದು ಅಸಾಧ್ಯ. ಯಾಕಂದರೆ ಹೊಸ ವ್ಯವಸ್ತೆಯಾದೊಡನೆ, ಅದರೊಡನೆ ಅದನ್ನು ಮುರಿಯುವ ಪರಿಯನ್ನು ಬಹು ಸುಲಭವಾಗಿ ಕಂಡು ಕೊಳ್ಳುತ್ತಾರೆ ಹ್ಯಾಕರುಗಳು. ಚಿಕ್ಕಂದಿನಲ್ಲಿ ಈ ರೀತಿ ಹ್ಯಾಕಿಂಗ್ ಮಾಡಿದ ಅನೇಕರು ಇಂದು ಅದನ್ನು ತಡೆಯುವುದರಲ್ಲಿ ಸಹಾಯ ಮಾಡುತ್ತಿದ್ದಾರೆ,. ಕಳ್ಳರಿಗೆ ತಾನೆ ಗೊತ್ತಿರುವುದು ಕಳ್ಳರ ಪರಿ?