ಕವಿಯ ಹೇಗೆ ಹೂಳುವೆ?
ಖಂಡಿತವಾಗಿಯೂ ಅಲ್ಲ
ಬೋದ್ಲೆಯರ್ ನ ಹೂಳಿದಂತೆ
ಅಪ್ಪ ಅಮ್ಮನ ಜೊತೆ,
ಶಿಶುವಿನ ಶವವನ್ನೂ ಎಸೆದಂತೆ.
ಎಳೆಯುವುದಿನ್ನೂ
ಅದು ವಿಕಟ ವ್ಯಂಗ್ಯವ
ಕವಿಗಳೆಂದೂ ಮಕ್ಕಳಾಗೆ
ಉಳಿಯಬೇಕೆಂಬ
ಪ್ಯಾಸ್ಟೆರ್ನಾಕನ ಮಾತಿನ.
ವ್ಯವಹಾರ ಮಾಡುವರೇ ಕವಿಗಳು
ತಡೆದುಳಿಯುವ ಅನುಭವಗಳ
ಗಂಧವ
ಮುಗ್ಧ ಕಣ್ಣುಗಳಿಗೋಸುಗ?
ಏನೋ ಇದೆ
ವಿಕರ್ಷಣೆ
ಶೂನ್ಯದ ಕಳೆಯ
ತರುಣನ ಮುಖದಿ.
ಕಾಣುವುದು ಅಂತಹ
ಮಗುವಿನ ಮುಖ ಮಫ್ತಿಯಲಿ
ಇಲ್ಲಾ ವಧಿಸಿದ ವ್ಯಾಘ್ರನ
ಮೇಲಿಟ್ಟ ಕಾಲಲ್ಲಿ.
ಏನೂ ಮಾಡಲೂ
ಹೇಸರು ಇಂತಹರು
ಇಲ್ಲಾ ಉದ್ದಕ್ಕೆ ಶೂನ್ಯದ
ಜೋಗುಳವ ಹಾಡುವರು.
ನನಗೆ ಬೋದ್ಲೆಯರ್ ನ ಅಗಿದು ತೆಗೆದು
ಕೊಡಬೇಕು ಅವನಿಗೆ ಅವನದೇ ಆದ
ಭವ್ಯವಾದ ಚಟುವಟಿಕೆಯ ಸಮಾಧಿ.
ಒಂದು ಕೋನದಿ
ಸೆಟೆದು ಬಿಲ್ಲಾದ ಕರಿಯ ಬೆಕ್ಕು.
ಇನ್ನೊಂದೆಡೆ
ಹಂಗಿಸುವ ಕಪ್ಪಿನ ಅಮೃತ ಶಿಲೆಯ
ಗುಲ್ಮ.
ಯಾವ ಕವಿಯೂ
ಬದುಕಿರುವಾಗ ಇಲ್ಲಾ ಸತ್ತ ಮೇಲೆ
ಕೊಳೆಯಬಾರದು
ತಂದೆ ತಾಯಿಯರ ಜೊತೆ.
-ಕನ್ನಡಕ್ಕೆ: ಶಿಶಿರ
CHARLES BAUDELAIRE’S GRAVE
- Dorothy Porter
