ಇವತ್ತಿನ ಲಾಸ್ ಏಂಜಲೀಸ್ ಟೈಮ್ಸ್ ನಲ್ಲಿ ಅಂಡರ್ವೇರ್ ಬಗ್ಯೆ ಎರಡು ವಾರ್ತೆಗಳು, ಕಾಕ ತಾಳೀಯ ಎಂಬಂತೆ. ಒಂದನೇಯದು ಇಲ್ಲಿಯ ಯು.ಸಿ.ಎಲ್. ಏ. (ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ) ಯ 'ಚಡ್ಡಿ ಓಟ" (Undie Run) ವನ್ನ ಇನ್ನು ಮುಂದೆ ಬಂದ್ ಮಾಡಲಾಗಿದೆ ಅಂತಾ. ಹಲವು ವರ್ಷಗಳಿಂದ ನಡೆದು ಬಂದ, ವರ್ಷಕ್ಕೆ ಮೂರು ಸಲ ಸೆಮೆಸ್ಟರ್ ಮುಗಿದ ನಂತರ ನಡೆಯುವ, ಈ ರೂಢಿಯಿಂದ ಸುತ್ತಮುತ್ತಲಿನವರಿಗೆ ತೊಂದರೆ ಹಾಗೂ ನಷ್ಟ ವಾದ್ದರಿಂದ ಇದನ್ನು ನಿಲ್ಲಿಸುವುದಾಗಿ ಯು.ಸಿ.ಎಲ್. ಏ. ತೀರ್ಮಾನಿಸಿದೆ. ಇದರಿಂದ ಚಡ್ಡಿ ಪ್ರೇಮಿಗಳಿಗೆಲ್ಲಾ ಆಘಾತವಾಗಿರಬಹುದು! ಅದೇ ಪೇಪರ್ ನಲ್ಲಿಯ ಇನ್ನೊಂದು ಸುದ್ದಿ ಅಂತರಿಕ್ಷ ವಾಹನ ಎಂಡೆವರ್ ನಲ್ಲಿ ಬಾಹ್ಯಾಕಾಶದಿಂದ ತೆರೆಳುತ್ತಿರುವ ಅಂತರಿಕ್ಷಯಾನಿಗಳದ್ದು. ಇದರಲ್ಲಿರುವ ಜಪಾನಿನ ಕೊಯಿಚಿ ಒಕಾಟನು ಒಡ ಯಾನಿಗಳಿಗೆ ಹೇಳದೇ ಒಂದು ತಿಂಗಳಿನಿಂದ ಅದೇ ಚಡ್ಡಿ ಧರಿಸಿದ್ದನಂತೆ! ಹಾಗಂತ ಈಗ ಭೂಮಿಗೆ ಇನ್ನೇನು ಮುಟ್ಟುತ್ತೇವೆ ಎಂದಿರುವಾಗ ಮೆತ್ತನೆ ಬಾಯಿ ಬಿಟ್ಟ! ಈಗ ಉಳಿದ ಸಹ ಯಾನಿಗಳೆಲ್ಲಾ ತಲೆಕೆಡಿಸಬೇಕಾದ ಸಂದರ್ಭ. ಅವರಿಗೆ ಕಳೆದ ೨೮ ದಿನಗಳಿಂದ ಬರುತ್ತಿದ್ದ ವಾಸನೆಯ ಮೂಲಕಾರಣ ಈ ಕೊಯಿಚಿಯ ಚಡ್ಡಿಯ ಕೃಪೆಯಿಂದಲೇ ಇಲ್ಲಾ ಅಂತರಿಕ್ಷ ವಾಹನದ ಪಾಯಿಖಾನೆಯಿಂದಲೇ?
ಬ್ರೂಯಿನ್ ಯು.ಸಿ.ಎಲ್. ಏ. ಯ ಕ್ರೀಡಾ ಟೀಮಿನ ಹೆಸರು. ಇದರಲ್ಲಿ ಫೂಟ್ ಬಾಲ್, ಬಾಸ್ಕೆಟ್ ಬಾಲ್, ಬೇಸ್ ಬಾಲ್, ಗಾಲ್ಫ್, ಇತ್ಯಾದಿ ಹಲವಾರು ಕ್ರೀಡೆಗಳ ತಂಡಗಳಿರುತ್ತವೆ. ಈ ದೇಶದ ಪ್ರತಿಯೊಂದೂ ಯೂನಿವರ್ಸಿಟಿಗೆ ಒಂದು ಫೂಟ್ ಬಾಲ್ ಟೀಮಿದ್ದು ಅದು ಅಯಾಯ ಯೂನಿವರ್ಸಿಟಿಯ ಸಂಸ್ಕೃತಿಯ ಪ್ರತೀಕವಾಗಿರುತ್ತದೆ. ಇಲ್ಲಿಯ ಫೂಟ್ ಬಾಲ್ ಭಾರತದ ಫೂಟ್ ಬಾಲಿನಂತಲ್ಲ. ಅದಕ್ಕೆ ಇಲ್ಲಿ ಸಾಕರ್ ಅನ್ನುತ್ತಾರೆ. ಇದನ್ನು ಆಡುವವರಲ್ಲಿ ಅಷ್ಟು ಹೆಸರುವಾಸಿಯಾರೂ ಇಲ್ಲದ್ದರಿಂದ ಬಹು ಆಡಂಬರದಿಂದ ಇಂಗ್ಲೇಂಡಿನಿಂದ ಬೆಕ್ಕಮ್ ಅನ್ನು ಸಿಕ್ಕಾಬಟ್ಟೆ ದುಡ್ಡು ಕೊಟ್ಟು ತರಿಸಿಕೊಂಡರು ಈ ದೇಶದ ಪ್ರತಿನಿಧಿಯಾಗಲು. ಆದರೆ, ಆತ ಬಂದ ಶುರುವಿನಲ್ಲೇ ಮಣಿಗಂಟಿಗೆ ತೊಂದರೆಯಾಗಿ ಆಟ ಅಲ್ಲೇ ನಿಂತದ್ದರಿಂದ, ಎಲ್ಲರ ಆಶೆಯೂ ಪುಸ್ಸೆಂದು ಹಾರಿಹೋಯಿತು. ಇನ್ನು ಇಲ್ಲಿಯ ಫೂಟ್ ಬಾಲ್ಗೆ ಬರೋಣ. ಇದರಲ್ಲಿ ಬಾಲನ್ನು ಕೈಯಲ್ಲಿ ಹಿಡಕೊಂಡು ಓಡುತ್ತಾರೆ. ಫೂಟ್ ಇರುವುದು ಓಡಲು! ಮೈಯೆಲ್ಲಾ ಗುದ್ದಿಡುವ ಈ ಆಟದ ಆಟಗಾರರು ಧಡಿಯರಂತೆ ಅಗಲವಾದ ಕತ್ತುಳ್ಳವರಾಗಿರುತ್ತಾರೆ. ಇದೊಂದು ದೇಶದ ಅತ್ಯಂತ ಪ್ರಾಮುಖ್ಯ ಆಟ ಅಥವ ಸಂಸ್ಕೃತಿಯ ಒಂದು ಅಂಶವೆಂದು ಹೇಳಿದರೂ ತಪ್ಪಾಗಲಾರದು.
ಈ ಕಾಲೇಜ್ ಫೂಟ್ ಬಾಲ್ ಪಂದ್ಯದಲ್ಲಿ ಮುಖ್ಯವಾದದ್ದು 1902 ರಲ್ಲಿ ಪ್ರಾರಂಭವಾದ "ಎಲ್ಲಾ ಆಟಗಳ ಮುತ್ತಾತ" ("grand daddy of them all") ಎಂದುಕೊಳ್ಳುವ ರೋಸ್ ಬೌಲ್ ಆಟಗಳು. ಇದು ಜನವರಿಯಲ್ಲಿ ರೋಸ್ ಬೌಲ್ ಪೆರೇಡ್ ಆದ ಮೇಲೆ "ರೋಸ್ ಬೌಲ್ ಸ್ಟೇಡಿಯಮ್" ನಲ್ಲಿ ಆಡುವಂತಾದ್ದು. ಮೊತ್ತ ಮೊದಲಿಗೆ ಇದು ಶುರುವಾದದ್ದು ರೋಸ್ ಬೌಲ್ ಪೆರೇಡ್ ನ ಅಂಗವಾಗಿ. ಈ ಪೆರೇಡ್ ನಲ್ಲಿ ಬರೇ ಗುಲಾಬಿ ಹೂಗಳಿಂದಲೇ ಮಾಡಿದ ತರಾವರಿ ಕಥೆಗಳ ದೃಶ್ಯಗಳಿದ್ದ ಟ್ರಕ್ಕುಗಳ (floral floats) ಮೆರವಣಿಗೆ ನಡೆಯುತ್ತದೆ. ಇದು ನಡೆಯುವುದು ಲಾಸ್ ಎಂಜಲೀಸಿನ ಪ್ಯಾಸಡೀನ ಎಂಬಲ್ಲಿ. ಆ ದಿನ ಹೆಚ್ಚಿನವರು, ಅದರಲ್ಲೂ ಗಂಡಸರು, ಮನೆಯಲ್ಲೇ ಪಾರ್ಟಿ ಮಾಡಿಕೊಂಡು ಟಿವಿ ಯ ಮುಂದೆ ಈ ಆಟ ನೋಡಿ ಕೊಂಡು ಕಳೆಯುತ್ತಾರೆ. ಇದು ಒಂದು ನ್ಯಾಶನಲ್ ಈವೆಂಟ್ ಅನ್ನಬಹುದು.
ಇನ್ನು ನಮ್ಮ ಕೊಯಿಚಿಯ ಚಡ್ಡಿಯ ವಿಚಾರಕ್ಕೆ ಬರೋಣ. ನಾಲ್ಕೂವರೆ ತಿಂಗಳಿಂದ ಬಾಹ್ಯಾಕಾಶದಲ್ಲಿದ್ದ ಈತನಿಗೆ ಸರಿಯಾದ ಚಡ್ಡಿ ಒಗೆಯುವ ಅವಕಾಶವಿರಲಿಲ್ಲವೇ? ಅಥವಾ ಸಾಕಷ್ಟು ಚಡ್ಡಿ ಪ್ಯಾಕ್ ಮಾಡಲು ಮರೆತಿದ್ದನಾ? ಇಲ್ಲಾ, ಸ್ವಲ್ಪ ಕೊಳಕನೇ? ನಾಲ್ಕೂವರೆ ತಿಂಗಳಿಂದ ಭೂಮಿಯ ಹೊರಗಿದ್ದುದರಿಂದ ಇಲ್ಲಿಯ ಕ್ರಮ ಮರೆತಿರಬಹುದೇ? ಆತನ್ಯಾಕೆ ಸಹಪ್ರಯಾಣಿಕರೊಡನೆ ಇದನ್ನು ಗುಟ್ಟಾಗಿರಿಸಿದ? ಮುಜುಗರದಿಂದಲೋ? ಇವಕ್ಕೆಲ್ಲಾ ಉತ್ತರ ಬಹು ಸಿಂಪಲ್. ಆತನ ಚಡ್ಡಿ ಜಪಾನಿನ 'J-Wear' ಎಂಬ ಹೊಸ ತರದ ಬ್ಯಾಕ್ಟೀರಿಯ ವಿರೋಧಿ, ವಾಸನೆ ರಹಿತ, ಹಾಗೂ ನೀರನ್ನು ಸೆಳೆದುಕೊಳ್ಳುವಂತಹ, (ಒಗೆಯದೆ) ತಿಂಗಳುಗಟ್ಟಲೆ ಹಾಕಬಹುದಾದ ಅಂತರಿಕ್ಷಯಾನಕ್ಕೆಂದೇ ಸಿದ್ಧಮಾಡಿದ ಬಟ್ಟೆಯಿಂದ ತಯಾರಿಸಿದ್ದು. ಅವನ ಸಹಪ್ರಯಾಣಿಕರು ಇದರ ಬಗ್ಯೆ ಏನೂ ಫಿರ್ಯಾದು ಮಾಡಿರದ್ದರಿಂದ ಅದು ಚೆನ್ನಾಗಿಯೇ ಕೆಲಸ ಮಾಡುತ್ತದೆ ಎಂದು ಅವನ ವಾದ. ಇವನು ಅದನ್ನು ಕಂಡು ಕೊಳ್ಳಲೆಂದೇ ಅವರಿಗೆ ಹೇಳದಿದ್ದದ್ದು ಅಂತೆ. ಇನ್ನೇನು ಭೂಮಿಗೆ ತಲಪುತ್ತೇವೆ ಅಂತಿರುವಾಗ ಇದನ್ನು ಕೇಳಿದ ಅವರು ದೊಡ್ಡದಾಗಿ ನಗಾಡಿದರಂತೆ.
ಈಗ ನನಗೆ ಸಂಶಯ. ಅವರು ಯಾಕೆ ಹಾಗೆ ಗಟ್ಟಿಯಾಗಿ ನಕ್ಕಿದ್ದು? ತಾವಿಷ್ಟರ ವರೆಗೆ ಕಿಷ್ಕಿಂದೆಯಂತಿದ್ದ ಆ ಬಾಹ್ಯಾಕಾಶ ವಾಹನದ ಪಾಯಿಖಾನೆ ವಾಸನೆಯೆಂತಾ ತಿಳಕೊಂಡ ತಮ್ಮ ಮೂರ್ಖತನಕ್ಕೊ? 'ಯಾವುದಕ್ಕೂ ಭೂಮಿಗೆ ಬಾ, ಆಮೇಲೆ ನೋಡಿಕೊಳ್ಳುತ್ತೇವೆ" ಅಂತಲೋ? ಇಲ್ಲಾ, ತುಂಬಾ ಸಮಯದಿಂದ ಏನಿದು ವಾಸನೆ ಅಂತಾ ಅವರವರೊಳಗೆ ಮಾತಾಡಿಕೊಂಡಿದ್ದು ಈಗ ಅದರ ರಹಸ್ಯ ಗೊತ್ತಾಗಿದ್ದಕ್ಕೋ? ಯಾರಿಗೆ ಗೊತ್ತು, ಅವರು ಒಳ್ಳೆಯವರಾದ್ದರಿಂದ ಏನೂ ತಕರಾರು ಮಾಡಿರದಿರಬಹುದು. ಇಲ್ಲಾ ಮೊದಲಿನಿಂದಲೂ ಇವನೊಡನೇ ಇದ್ದುದರಿಂದ, ಅವನ ವಾಸನೆಯೇ ಅದು ಅಂತಲೂ ತೀರ್ಮಾನಕ್ಕೆ ಬಂದಿದ್ದಿರಬಹುದು. ಅದು ನಿಜವಲ್ಲ ಅಂತಾ ಗೊತ್ತಾದಾಗ ಗೊಳ್ಳನೆ ನಕ್ಕಿರಬಹುದು. ಅಂತೂ ಮುಂದೇನು ಮಾಡ್ತಾರೆ ಈ ಕೊಯಿಚಿಯ ಸಹಪ್ರಯಾಣಿಕರು ಅಂತಾ ಅವರು ಭೂಮಿಗಿಳಿದ ಮೇಲೆ ನೋಡಬೇಕಷ್ಟೆ. ಸಧ್ಯ ಕೊಯಿಚಿಯ ಕಿವುಚದಿದ್ದರೆ ಸಾಕು. ಆದರೆ ಇಂತಹ ಬಟ್ಟೆ ದೇವರಾಣೆಗೂ ಎಲ್ಲಾರಿಗೂ ಉಪಯೋಗ. ಅದೂ ನೀರಿಲ್ಲದ ಬೆಂಗಳೂರಿಗೆ ಬಂದರಂತೂ ಜನ ಒಮ್ಮೆಲೆ ನಿಟ್ಟುಸಿರು ಬಿಟ್ಟು ಜುಮ್ಮೆಂದು ಇದನ್ನು ಮಾರುವ ಕಡೆ ಹಾರಬಹುದೇನೋ. ಶುರುಶುರುವಿಗೆ ಅದೊಂದು ಅಂತಸ್ತನ್ನು ಅಳೆಯುವ ಸಾಧನವೂ ಆಗಬಹುದು.
" ರೀ ಶೀಲ, ನಿಮ್ಮ ಪುಟ್ಟ ಉಚ್ಚೆ ಹೊಯ್ಕೊಂಡಿದೆ ಚಡ್ಡಿಯಲ್ಲಿ. ಬೇರೆ ಚಡ್ಡಿ ತಂದಿಲ್ವಲ್ಲ ನೀವು? ಅದಕ್ಕೆ ಒಂತರಾ ಆಗೋಲ್ವ?".
" ಪರ್ವಾಗಿಲ್ಲ ಬಿಡಿ ಮಾಲಾ. ತರಾನೂ ಇಲ್ಲಾ ಗಿರಾನೂ ಇಲ್ಲ. ಅದೇನೋ ಹೊಸ್ದಾಗಿ ಬಂದಿದೆಯಲ್ಲ 'J-Wear' ಚಡ್ಡಿ. ಅದು ಮುಂದೆ ಚಂದ್ರನ ಪ್ರಯಾಣಕ್ಕೆ ಹೋಗುವವರಿಗಂತ ಮಾಡಿದ್ದಂತೆ. ISRO ದಲ್ಲಿದ್ದ ಶ್ರೀನಿವಾಸ್ ಅಂತಿದ್ದ. ಅದ್ನ ಮೊನ್ನೆ ತಾನೆ ಗಾಂಧಿ ಬಾಜ಼ಾರಿನ ಮಾಲ್ ನಲ್ಲಿ ಕೊಂಡ್ ಕೊಂಡ್ವು. ತುಂಬಾ ದುಡ್ಡು ಕಣ್ರೀ. ಒಂದು ಚಡ್ಡಿಗೆ ೧೦೦೦ ರೂಪಾಯಿ. ಬಾಳ ಚೆನ್ನಾಗಿದೆ. ಅದೇ ಚಡ್ಡಿ ಒಂತಿಂಗ್ಳು ಹಾಕೋಬೋದಂತೆ ಒಗೀದೇನೆ. ಅದು ನೀರೂ ಹೀರ್ಕೊಳ್ತದಂತೆ."
"ಹೌದಾರೀ, ಹಾಗಾದ್ರೆ, ಹೀರ್ಕೊಂಡ ನೀರೆಲ್ಲಿ ಹೋಗುತ್ತೇ?"
"ಅದೆಲ್ಲಾ ಗೊತ್ತಿಲ್ಲಾರೀ. ಅಂತೂ ವಾರಕ್ಕೆರಡು ಸಲ ನೀರು ಬರ್ತಿರ್ವಾಗ ನಮ್ಮ ಎಕ್ಟೆಂಶನಲ್ಲಿ ಅದು ಆ ಪರಮಾತ್ಮ ಕೊಟ್ಟ ದೊಡ್ದ ವರ ಅಂತಾ ತಿಳ್ಕೊಳ್ ಬೇಕಷ್ಟೆ. ಅಲ್ವೇನ್ರಿ?"
ಇನ್ನು ಬೆಂಗಳೂರಿನಿಂದ ಮಂಗಳೂರಿಗೆ ಬಸ್ಸಿನಲ್ಲಿ ಹೋಗುವಾಗ ಇದು ಐಡಿಯಲ್ ಆಗಿರುತ್ತದೆ ಎಲ್ಲಾ ಹೆಂಗಸರಿಗೂ. ಮಧ್ಯೆ ಸಿಗುವ ಬಾತ್ ರೂಮ್ ಗಳಿಗಿಂತ ಇದು ಕ್ಲೀನ್ ಅಂತಾ ನನ್ನ ವಾದ. ಮಂಗಳೂರಿನವರು ಇದರಿಂದ ತುಂಬಾ ಫಾಯದೆ ಪಡೆಯಬಹುದು.
"ಹೌದಾ ಮಾರಾಯ್ರೆ. ಚಂದ್ರನಿಗೆ ಹೋಗುವವ್ರು ಹಾಕುವಂತಾದ್ದು ಅದೇನೋ ಹೊಸ ನಮೂನೆಯ ಚಡ್ಡಿ ಬಂದಿದೆಯಂತಲ್ವಾ ಪೇಟೆಯಲ್ಲಿ? ನಮ್ಮ ಇಲ್ಲಿಯ ಸೆಕೆಗಾಲಕ್ಕೆ, ಮಳೆಗಾಲಕ್ಕೆಲ್ಲಾ ಹೇಳಿಮಾಡಿಸಿದ್ದು. ನೀರು ಹೀರ್ತದಂತೆ. ವಾಸನೆಯೇ ಬರುದಿಲ್ಲ ಅಂತೆ, ತಿಂಗಳು ಗಟ್ಟಲೆ ಒಗಿಯದೆ ಹಾಕ್ಕೊಳ್ಳ ಬಹುದಂತೆ"
"ಅಂದಾ ಮಾರಾಯ್ರೆ. ಏರ್ ಪಂಡಿನ? ವಲ್ಪ ತಿಕ್ಕುಂಡವ್? ಹಂಪನ್ ಕಟ್ಟೆಡ್ ಉಂಡಾ? ಎಂಕ್ಲಾ ಬೋಡತ್ತ. ಈ ಪರ್ತಿ ಚಡ್ಡಿ ಬರೀ ಬೂಸ್" ಪಕ್ಕದ ಮನೆಯ ಶೆಟ್ಟರು ಕೇಳುತ್ತಾರೆ.
ಆಗ ತಾನೆ ಸೇರಿಕೊಂಡ ಕಾಮತರು ಕೇಳ್ತಾರೆ, "ಕಸನೆ? ಕೋಣ್ ಸನ್ಗಿಲೆ? ಕೈಂ ಅಸ್ಸ ಒ? ಮಕ್ಕ್ ಜಾಯ್ಕಾ. "
ಎಲ್ಲಾ ಲೋವರ್ ಕೆಜಿ, ಅಪ್ಪರ್ ಕೆಜಿ, ಹಾಗೂ ಎಲಿಮೆಂಟರಿಶಾಲೆಗಳಲ್ಲಿ 'J-Wear' ಚಡ್ಡಿಯನ್ನು ಕಡ್ಡಾಯ ಮಾಡಬಹುದು. ಇದು ನೀರು ಉಳಿಸುವ ಹಸಿರು ಕ್ರಾಂತಿಯಲ್ಲಿ ಪ್ರಾಮುಖ್ಯ ಸ್ಥಾನ ಪಡೆಯಬಹುದು. ಇನ್ನು ಪ್ಯಾಂಟು ಧರಿಸುವಲ್ಲಿ ಹೊಸ ಹೊಸ ಫ್ಯಾಶನ್ನುಗಳು ಉಂಟಾಗಬಹುದು ಅಮೇರಿಕಾದಲ್ಲಿಯ ಟೀನೇಜರ್ ಮಾಡುವಂತೆ. ಪ್ಯಾಂಟನ್ನು ಪೂರ್ತಿ ಒಳಗಿನ ಈ 'J-Wear' ಚಡ್ಡಿ ಮೇಲೆ ಕಾಣುವಂತೆ ಕೆಳಗೆ ಧರಿಸಬಹುದು. ಈ ತರಹ ಪ್ಯಾಂಟ್ ಧರಿಸಿದವರ ನೋಡುವಾಗ ನಾನ್ಯಾವಗಲೂ ಅಂದು ಕೊಳ್ಳುತ್ತೇನೆ, ಯಾಕೆ ಹೀಗೆ ಜೀನ್ಸ್ ಪ್ಯಾಂಟ್ ಡಿಸೈನ್ ಮಾಡ್ತಾರೆ ಇವ್ರಿಗೆ ಅಂತಾ. ಯಾಕಂದ್ರೆ, ಅಂಡಿನ ಬಾಗ ಮುಚ್ಚದೇ ಹಾಕುವವರಿಗೆ ಈ ಪ್ಯಾಂಟುಗಳಲ್ಲಿ ಅಂಡಿನ ಬಾಗ ಯಾಕೆ ಬೇಕು ಮತ್ತು ಅದಕ್ಕೆ ಬಟ್ಟೆ ಯಾಕೆ ವೇಸ್ಟ್? ಬರೇ ಎರಡು ಕಾಲಿನ ಬಾಗ ಮಾತ್ರವಿಟ್ಟು , ಆ ಎರಡು ಕಾಲುಗಳನ್ನ ಮೇಲೆ ಜೋಯಿನ್ ಮಾಡಿದರೆ ಎಲ್ಲಾರಿಗೂ ಅನುಕೂಲವಲ್ಲವೇ? ಇದು ಖಂಡಿತವಾಗಿಯೂ ಹಸಿರು ಕ್ರಾಂತಿಯ ಒಂದು ಅಂಗವಾಗಲೇಬೇಕು. ಇನ್ನು 'J-Wear' ಚಡ್ಡಿಯ ಕಾಲಕ್ಕೆ ಖಂಡಿತವಾಗಿಯೂ ಇದು ಆಗುವ ಅವಶ್ಯಕತೆಯಿದೆ. ಇದರಿಂದ ಹಲವಾರು ಉಪಯೋಗಗಳಿವೆ. ಬಟ್ಟೆ ಉಳಿತಾಯ. ಪ್ಯಾಂಟ್ ಹೊಲಿಯಲು ಸುಲಭ. ಬರೇ ಎರಡು ಕೊಳವೆ ಹೊಲಿದು ಮೇಲೆ ಸೇರಿಸುವುದು. 'J-Wear' ಚಡ್ಡಿಯ ಎಲ್ಲರಿಗೆ ತೋರಿಸ ಬಹುದು. ಎಲ್ಲಾದಕ್ಕಿಂತ ಮುಖ್ಯವಾಗಿ ಆ ಜಾಗದಲ್ಲಿ ಗಾಳಿಯಾಡಿ ಎಲ್ಲರ ಆರೋಗ್ಯ ಸುಧಾರಿಸಬಹುದು.
ಅಂತೂ ಈ 'J-Wear' ಒಂದು ದೊಡ್ಡ ಕ್ರಾಂತಿಯನ್ನೆಬ್ಬಿಸಬಹುದು ಅಮೇರಿಕಾದಲ್ಲಿ ಮತ್ತು ಭಾರತದಲ್ಲಿ. ಅಮೇರಿಕಾದಲ್ಲಿ, ಬ್ರೂಯಿನರು 'J-Wear' ನ ತರಾವರಿ ಬಣ್ಣದ ತರಾವರಿ ಸ್ಟೈಲ್ ನ ಚಡ್ಡಿಧಾರಿಗಳಾಗಿ ಚಡ್ಡಿ ಓಟ ಓಡಲು ಶುರುಮಾಡಬಹುದು. ಬೀಚಿಗೆ ಒಗೆಯದೆ ಪುನಹ ಪುನಹ ಅದನ್ನೇ ಹಾಕಿ ಹೋಗ ಬಹುದು. ಆ ಮೇಲೆ ಇದರಲ್ಲಿಯೇ ಮ್ಯಾರತಾನ್ ಓಡಲೂ ಬಹುದು. ಈಗಾಗಲೇ ಸ್ಪೋರ್ಟ್ಸ್ ವೇರ್ ಅಂಗಡಿಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ಸುಲಭವಾಗಿ ಒಗೆಯಲಾಗುವ ಚಡ್ಡಿಗಳ ಬದಲು, ತಿಂಗಳು ಗಟ್ಟಲೆ ಹಾಕಬಹುದಾದ 'J-Wear' ಚಡ್ಡಿಗಳು, ಅಂಗಿಗಳು ಸಿಗಬಹುದು. ಇದರಿಂದ ಬ್ಯಾಕ್ ಪಾಕ್ ನ ಅವಶ್ಯಕತೆ ಕಮ್ಮಿಯಾಗಬಹುದು. ಯಾಕಂದ್ರೆ ಹಾಕಿದ ಬಟ್ಟೆಯಲ್ಲೇ ತಿಂಗಳುಗಟ್ಟಲೆ ಕಳೆಯಬಹುದು. ಇದರಿಂದ ನಮ್ಮ ಭಾರತದ ಪ್ರಯಾಣಕ್ಕೆ ಸಣ್ಣ ಸೂಟ್ಕೇಸ್ ಸಾಕಾಗಬಹುದು.
ಬೆಂಗಳೂರಲ್ಲಿ, ಆ ಮೇಲೆ ಇದರ ಜಾಹಿರಾತೆ ಜಾಹಿರಾತು...ಎಲ್ಲೆಲ್ಲೂ ನೋಡಲಿ, ನಿನ್ನನ್ನೇ ಕಾಣುವೆ, ಹಗಲಿನಲಿ, ಇರುಳಿನಲಿ 'J-Wear' ಚಡ್ಡಿ ಹಾಕಿ ಹಾಡುವೆ! ಈಗಿನ VIP ಚಡ್ಡಿಯ ಬದಲಾಗಿ ಎಲ್ಲೆಲ್ಲೂ 'J-Wear' ನ ಚಡ್ಡಿಯ ಚಿತ್ರಗಳು. ಶೀಲರ ಮಗುವು ಉಚ್ಚೆ ಹೊಯ್ದರೂ ನೀರು ಹೀರುವ ವಾಸನೆ ಬರದ ಚಡ್ಡಿಯ ಚಿತ್ರ. ಬೆಂಗಳೂರಿನಿಂದ ಆಗ ತಾನೆ ಮಂಗಳೂರಿಗೆ ಪ್ರಯಾಣಿಸಿದ, ಕಿವಿಯಿಂದ ಕಿವಿಗೆ ನಗುತ್ತಿರುವ, ಮಾಯಳ ಚಿತ್ರ. ತಿಂಗಳುಗಟ್ಟಲೆ ಹಾಕಿ (ಹೊಸತರಲ್ಲಿ ಬಿಳಿಯಿದ್ದಲ್ಲಿ) ಕಂದುಬಣ್ಣಕ್ಕೆ ತಿರುಗಿದ ಚಡ್ಡಿಧಾರಿ ಫ಼ೈಲ್ವಾನನ ಚಿತ್ರ. "'J-Wear' ಚಡ್ಡಿಯೆಲ್ಲಿದ್ಯೋ ಅಲ್ಲಿದೇ ಆರೋಗ್ಯ" ಎಂದು ಮನೆಮನೆ ಮಾತಾಗುವ ಟಿವಿಯಲ್ಲಿನ ಸ್ಲೋಗನ್ನುಗಳು.
