ಕಳೆದ ಸೆಪ್ಟಂಬರ್ ನಲ್ಲಿ ನಾನು ಭಾರತಕ್ಕೆ ಹೊರಡುವ ತಯಾರಿಯಲ್ಲಿದ್ದೆ. ಸಾಮಾನ್ಯವಾಗಿ ಒಕ್ಟೋಬರ್ನಲ್ಲಿ ದಕ್ಷಿಣಕ್ಕೆ ತಿರುಗುವ ನಮ್ಮ ಸ್ಟಾಕ್ ಮಾರ್ಕೆಟ್ ಬಗ್ಯೆ ಯೋಚಿಸುತ್ತಿದ್ದೆ. ನನ್ನೆಲ್ಲಾ 401 K (Retirement fund) ಹಾಗೂ ಇತರ ಮ್ಯೂಚುವಲ್ ಫಂಡ್ ನಲ್ಲಿದ್ದ ದುಡ್ಡಿನ ಕತೆ ಏನಾಗ ಬಹುದು, ಈ ಸಲ ಏನಾದರೂ ಸಿಕ್ಕಾಬಟ್ಟೆ ಬೀಳುವ ಸಾಧ್ಯತೆ ಇದೆಯೇ? ಹೀಗಾಗಲಿಕ್ಕಿಲ್ಲ. ಅಂತಹ ಸೂಚನೆಗಳೇನೂ ಕಾಣುತ್ತಿಲ್ಲ... ೨೦೦೧ ರಲ್ಲಿ ೯-೧೧ ನಂತರ ಆದ ಮಾರ್ಕೆಟ್ ನ ಕುಸಿತದಿಂದ ನಾನು ಕಳಕೊಂಡದ್ದು ಇನ್ನೂ ಹಸಿರಾಗಿದೆ. ಈ ಸಲವೂ ಏನಾದರೂ ಹೀಗಾದಲ್ಲಿ ಏನಾಗಬಹುದು ಎಂದು ಯೋಚಿಸಲೂ ಭಯವಾಗಿತ್ತು. ಅಂದು ನಾನು ಜೀವನಕ್ಕೆ ಬೇಕಾದ ಎಲ್ಲಾ ಸಾಮಾಗ್ರಿಗಳಿಗೂ, ಹಾಗೂ ಮನೆಗೂ ತುಂಬಾ ಕಡಿಮೆ ಖರ್ಚಿನ ಟೆಕ್ಸಾಸ್ ನಲ್ಲಿದ್ದೆ. ಇಂದು ಬಹುಶಃ ದೇಶದಲ್ಲೇ ಅತ್ಯಂತ ದುಬಾರಿ ಜಾಗದಲ್ಲಿದ್ದೇನೆ.
ಸೆಪ್ಟಂಬರ್ ೩೦. ಮಧ್ಯಾಹ್ನ ೧:೪೬ ಗಂಟೆ. ಮಾರ್ಕೆಟ್ ಒಮ್ಮೆಗೆ ಪ್ರಪಾತಕ್ಕೆ ಜಾರಲು ಶುರುವಾಗಿ ಡೌ ಜೋನ್ಸ್ ೬೦೦ ಪಾಯಿಂಟ್ ಕಳಕೊಂಡಿತು. ದಿನ ಮುಗಿಯುವುದರೊಳಗಾಗಿ ಚರಿತ್ರೆಯೊಂದು ದಾಖಲಾಗಿತ್ತು. ಡೌ ಜೋನ್ಸ್ ಮಾರ್ಕೆಟ್ ಸೂಚಿಕೆ ೭೭೭.೬೮ ಪಾಯಿಂಟ್ ಕಳಕೊಂಡಿತು. ಬಹುಶಃ ಅಂದು ನಾಂದಿಯಾಯ್ತು ಅಮೇರಿಕದಲ್ಲಿ ಅತ್ಯಂತ ಕೆಟ್ಟ ರಿಸೆಶನ್ ಗೆ. ಮುಂದೆ ಎಲ್ಲವೂ ಫಾಸ್ಟ್ ಫ಼ಾರ್ವಾರ್ಡ್ ಮಾಡಿದಂತೆ ನಡೆಯಿತು. ಒಂದಾದ ಮೇಲೊಂದು ವಲಯಗಳು, ಬ್ಯಾಂಕಿಂಗ್, ಇಂಶ್ಯೂರೆನ್ಸ್, ಖಾಸಗಿ, ಸರಕಾರಿ, ರಾಷ್ಟ್ರೀಯ ರಕ್ಷಣೆ,.... ಪ್ರತಿಯೊಂದೂ ಡೋಮಿನೋ ಪರಿಣಾಮದಂತೆ ಮಣ್ಣ ಮುಕ್ಕಲು ಪ್ರಾರಂಭಿಸಿದುವು. ಎಷ್ಟೋ ದೊಡ್ಡ ದೊಡ್ಡ ಹಳೆಯ ಕಂಪೆನಿಗಳು ಕಣ್ಣುಮುಚ್ಚಿ ತೆರೆಯುದರೊಳಗಾಗಿ ಚಿತ್ರದಿಂದ ಕಾಣೆಯಾದುವು. ತೊಂದರೆಗೊಳಗಾದ ಫ್ರೆಡ್ಡಿ ಮ್ಯಾಕ್ (Federal Home Loan Mortgage Corporation
), ಫ್ಯಾನ್ನಿ ಮೇ (Federal National Mortgage Association
) ಗಳನ್ನು ಸರಕಾರ ವಶ ಮಾಡಿ ಕೊಂಡಿತು. ಅತ್ಯಂತ ದೊಡ್ಡ ಇನ್ಷೂರೆನ್ಸ್ ಕಂಪೆನಿ AIG, ಜಾಗತಿಕ ಬ್ಯಾಂಕ್ ಸಿಟಿ, ಬ್ಯಾಂಕ್ ಆಫ್ ಅಮೇರಿಕ, ಇತ್ಯಾದಿಗಳು ಸರಕಾರದ ಮುಂದೆ ಕೈ ಒಡ್ಡಿ ಸಾಲಾಗಿ ನಿಂತುವು ದಿವಾಳಿಯ ತಡೆಯಲು. ಸರಕಾರದ ರಕ್ಷಣೆ ಕೇಳಿಕೊಂಡ ದೇಶದ ಮೂರು ಪ್ರಾಮುಖ್ಯ ಕಾರು ತಯಾರಕರಾದ ಜಿ.ಎಂ., ಕ್ರೈಸ್ಲರ್, ಫೋರ್ಡ್ ದಿವಾಳಿಯ ಅಂಚಿಗೆ ಹೋಗಿ, ಮೊದಲಿನೆರಡು ದಿವಾಳಿಯಾದುವು. ಕ್ರೈಸ್ಲರನ್ನು ಇಟಲಿಯ ಫಿಯಟ್ ಖರೀದಿಸಿತು. ಜಿ.ಎಂ. ಈಗ ದಿವಾಳಿಯಿಂದ ಹೊರಗೆ ಬರುವ ಪ್ರಯತ್ನದಲ್ಲಿದೆ. ನವಂಬರ್ ನಲ್ಲಿ ಒಬಾಮನ ಆಯ್ಕೆಯಾದಾಗ ದೇಶ ಒಂದು ದೊಡ್ದ ನಿಟ್ಟುಸಿರು ಬಿಟ್ಟಿತು, ಇನ್ನಾದರೂ ನಮಗೆ ಒಳ್ಳೆಯದಾಗ ಬಹುದೆಂದು ಆಶೆಯಿಂದ. ಆದರೆ ಯಾರೂ ಊಹಿಸಿರಲಿಕ್ಕಿಲ್ಲ ಈಗಾಗಲೇ ಆಗಿರುವ ಆಘಾತದ ತೀವ್ರತೆಯ ಪರಿಣಾಮ. ಹಾಗೂ ಅದರಿಂದ ಮುಂದೆ ಕಾದಿರುವ ತೊಂದರೆಗಳು. ಯಾರೂ ಅಳೆದಿರಲಿಕ್ಕಿಲ್ಲ ಒಬಾಮನ ಮುಂದಿರುವ ತೊಡಕಿನ ಪರ್ವತಗಳ ಎತ್ತರ.
ಒಕ್ಟೋಬರ್ ೬, ೨೦೦೮. ಲಾಸ್ ಏಂಜಲೀಸ್ ನ ಇಂಡಿಯನರಿಗೆಲ್ಲಾ ಶಾಕ್ ತರುವಂತಹ ಘಟನೆ. ಅಮೇರಿಕಾದ ಕನಸು ನುಚ್ಚುನೂರಾದ ಭಾರತೀಯ ಕುಟುಂಬದ ಯಜಮಾನನಿಂದ ಇಡೀ ಕುಟುಂಬದ ಕೊಲೆ ಹಾಗೂ ಆತ್ಮಹತ್ಯೆ. ಮುಂದೆ ಬರಲಿರುವ ಅಮೆರಿಕಾದ ಕತ್ತಲಿನ ಸೂಚನೆ. ಅಂದು ೪೫ ವರ್ಷದ M.B.A. ಪದವಿಯಿದ್ದು ಇತ್ತೀಚಿಗೆ ನಿರುದ್ಯೋಗಿಯಾಗಿದ್ದ ಕಾರ್ತಿಕ್ ರಾಜರಾಮ್ ಎಂಬಾತ ತನ್ನ ಹೆಂಡತಿ ಸುಬಶ್ರೀ (೩೯), ಆಕೆಯ ತಾಯಿ ಇಂದ್ರ ರಾಮಸೇಶಮ್ (೬೯), ತನ್ನ ಮಕ್ಕಳಾದ ಕೃಷ್ನ(೧೯), ಅರ್ಜುನ (೭), ಗಣೇಶ (೧೨) ರನ್ನು ಗುಂಡಿನಿಂದ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ. ಕಾರಣ ಅತ್ಯಂತ ಹಣದ ಬಿಕ್ಕಟ್ಟು. ಅತ್ಯಂತ ಚಾಣಾಕ್ಷ್ಯನಾಗಿದ್ದ ಈತ ಹಿಂದೆ ಅತ್ಯಂತ ಉತ್ತಮ ಹುದ್ದೆಗಳಲ್ಲಿದ್ದು ಒಂದು ಕಾಲದಲ್ಲಿ ಮಿಲಿಯ ಗಟ್ಟಲೆ ಡಾಲರು ಹಣ ಗಳಿಸುತ್ತಿದ್ದ. ಅದು ಹ್ಯಾಗೆ ಈ ಬಿಕ್ಕಟ್ಟಿಗೆ ಎದುರಾದ ಎಂಬುದು ಯಾರಿಗೂ ತಿಳಿಯದು. ಬಹುಶಃ ಸ್ಟಾಕ್ ಮಾರ್ಕೆಟ್ ಬಿದ್ದಾಗ ಎಲ್ಲವನ್ನೂ ಕಳೆದು ಕೊಂಡಿರಬಹುದು ಎಂದು ಊಹನೆ. ಈತ ತುಂಬಾ ದಿನಗಳಿಂದ ಈ ರಕ್ತ ಪಾತಕ್ಕೆ ತಯಾರಿ ಮಾಡಿದ್ದ.
ಇದಾದಂದಿನಿಂದ ಪ್ರಾರಂಭವಾದ ಕಂಪೆನಿಗಳ ನೌಕರಿಗಳ ಕತ್ತರಿ ಪ್ರಯೋಗ ಇನ್ನೂ ಮುಂದುವರಿದಿದೆ. ದೇಶದ ನಿರುದ್ಯೋಗ ಸಂಖ್ಯೆ ಗಗನಕ್ಕೇರಿದೆ. ೨೦೦೮ ಸೆಪ್ಟಂಬರ್ ಮೊದಲು ದೇಶದ ಸರಾಸರಿ ನಿರುದ್ಯೋಗ ಸಂಖ್ಯೆ ೫% ಇದ್ದಲ್ಲಿ, ಇಂದು ಅದು ೯.೭%. ಇದರಲ್ಲೂ ಹೆಚ್ಚಾಗಿ ಕಾರು ತಯಾರಕರಿದ್ದ ಮಿಶಿಗನ್ ನಲ್ಲಿ ೧೫.೪% ಹಾಗೂ ದಿವಾಳಿಯ ಅಂಚಿನಲ್ಲಿರುವ ಕ್ಯಾಲಿಫೋರ್ನಿಯದಲ್ಲಿ ೧೧.೬%. ಇನ್ನೂ ಈ ಕತ್ತಲಿನ ಸುರಂಗದ ಕೊನೆಯ ಬೆಳಕೇ ಕಾಣುತ್ತಿಲ್ಲ. ಮನೆಗಳ ಬೆಲೆಗಳು ಮೋರ್ಟ್ಗೇಜಿನ (ಭೋಗ್ಯದ) ಸಾಲಕ್ಕಿಂತ ಕಡಿಮೆಯಾಗಿದೆ. ಮನೆ ಮಾರಿದರೂ ಸಾಲ ತೀರಿಸಲು ಅಸಾಧ್ಯ. ಹೆಚ್ಚಿನವರು ಕೆಲಸ ಕಳಕೊಂಡದ್ದರಿಂದ ಮನೆ ಕೊಳ್ಳುವವರೂ ಇಲ್ಲ.
ಇವೆಲ್ಲಾ ಹೇಗಾಯಿತು? ಇವಕ್ಕೆಲ್ಲ ಮೂಲ ಸಬ್ಪ್ರೈಮ್ ಮೋರ್ಟ್ಗೇಜ್ ನ ಬಿಕ್ಕಟ್ಟು (subprime mortgage crisis) ಎಂದರೂ ತಪ್ಪಾಗಲಾರದು. ೨೦೦೬-೨೦೦೭ ರಲ್ಲಿ ತಾರಕಕ್ಕೇರಿದ ಗೃಹಗಳ ಬೆಲೆಯ ಗುಳ್ಳೆ ಒಡೆಯಲು ಪ್ರಾರಂಭವಾಯಿತು. ಇದರ ಪರಿಣಾಮವಾಗಿ ಸಾಧಾರಣ ೨೦೦೭ ರ ಸುಮಾರಿಗೆ ಶುರುವಾದ ಜರಿತ ಉಗ್ರ ಪರಿಸ್ಥಿತಿಗೆ ತಿರುಗಿದ್ದೆ ಕಾರಣ. ಇವಕ್ಕೆ ಕಾರಣ ಸಬ್ಪ್ರೈಮ್ ಲೆಂಡಿಂಗ್. ಸಬ್ಪ್ರೈಮ್ ಲೆಂಡಿಂಗ್ ಅಂದರೇನು? ಫ್ರೆಡ್ಡಿ ಮೇಕ್ ಮತ್ತು ಫ್ಯಾನ್ನಿ ಮೇ ಗಳು ಸಾಲ ಕೊಳ್ಳುವವರಿಗೆ ಇರ ಬೇಕಾಗುವ ಯೋಗ್ಯತೆಯ ಬಗ್ಯೆ ಹಾಕಿದ ನಿಯಮಗಳ ಗೆರೆಗಳನ್ನ ಮೀರಿ ಸಾಲ ಕೊಡುವುದು. ಇದು ಮನೆ, ಕಾರು, ಹಾಗೂ ಕ್ರೆಡಿಟ್ ಕಾರ್ಡ್ ಗಳಿಗೆಲ್ಲಾ ಅನ್ವಯಿಸುವುದು. ಸಾಲ ಕೊಡಲು ಇರುವ ನಿಯಮಗಳು ಹಲವು ಅಂಶಗಳಿಂದ ತೀರ್ಮಾನಿತವಾದರೂ, ಒಂದೇ ಉತ್ತರದಲ್ಲಿ ಇದನ್ನು ಹೀಗೆ ಉಲ್ಲೇಖಿಸ ಬಹುದು: ಅಮೇರಿಕದ ಕ್ರೆಡಿಟ್ ಸ್ಕೋರ್ ೬೪೦ ಕ್ಕೂ ಹೆಚ್ಚಿದ್ದವರಿಗೆ ಮಾತ್ರ ಸಾಲ ನೀಡಬೇಕು. ಹಲವಾರು ಅಂಶಗಳ ಮೇಲೆ ನಿರ್ಧರಿತವಾಗುವ ಈ ಕ್ರೆಡಿಟ್ ಸ್ಕೋರ್ ಒಬ್ಬನು ಕೊಂಡ ಸಾಲವ ತಿರುಗಿಸಲು ಶಕ್ಯನೇ ಎಂದು ಹೇಳುತ್ತದೆ. ಇದನ್ನು ಆತನ (ಹಿಂದಿನ ಕ್ರೆಡಿಟ್ ಕಾರ್ಡ್ ಇತ್ಯಾದಿ) ಸಾಲದ ಚರಿತ್ರೆಯನ್ನೆಲ್ಲ ಉಪಯೋಗಿಸಿ ಸಂಖ್ಯಾ ಶಾಸ್ತ್ರದ ಪರಿಚ್ಛೇದದ ಮೇರೆಗೆ ತೀರ್ಮಾನಿಸಿರುತ್ತಾರೆ. ಸಬ್ಪ್ರೈಮ್ ಲೆಂಡಿಂಗ್ ನಲ್ಲಿ ಈ ನಿಯಮಗಳ ಕಡೆಗಣಿಸಿ ಸಾಲ ಕೊಡಲಾಗುತ್ತದೆ. ಕೆಲವು ಸಲ ಇದರ ಬಡ್ಡಿಯ ದರವೂ ಆಗಿನ prime rate ಗಿಂತ ಕಡಿಮೆಯಿರ ಬಹುದು.
ಹೀಗೆ ಕೊಟ್ಟ ಹೆಚ್ಚಿನ ಸಾಲಗಳು ಮೊದಲಿನ ೩, ೫, ೭ ಅಥವ ೧೦ ವರ್ಶ ನಿರ್ದಿಷ್ಟ ಅವಧಿಯ ವರೆಗೆ ಕಡಿಮೆ ದರದಲ್ಲಿದ್ದು, ಈ ಸಮಯದಲ್ಲಿ ಬರೆ ಅದರ ಬಡ್ಡಿ ಮಾತ್ರ ಕೊಡುವ ವ್ಯವಸ್ತೆಯಿರುತ್ತದೆ. ಇದರಿಂದಾಗಿ ಮನೆ ತೆಕ್ಕೊಳ್ಳಲು ಸಾಕಷ್ಟು ವರಮಾನವಿಲ್ಲದವರೂ ಮನೆ ಖರೀದಿಸ ತೊಡಗಿದರು. ಅವರಂದು ಕೊಂಡದ್ದು ಒಂದೇ ಸವನೆ ಹೆಚ್ಚುತ್ತಿರುವ ಮನೆಗಳ ಬೆಲೆ ಈ ಅವಧಿಯೊಳಗೆ ಜಾಸ್ತಿಯಾಗುವುದರಿಂದ ಏನೂ ತೊಂದರೆಯಾಗಲಾರದು ಎಂದು. ೨೦೦೭ ರಲ್ಲಿ ಇಂತಹರು ಜಾಸ್ತಿಯಾದರು. ಮನೆಗಳ ಬೆಲೆ ಆಕಾಶ ಮುಟ್ಟಿದ್ದರಿಂದ ಇಷ್ಟರಲ್ಲಿ ಮನೆಯನ್ನು ಕೊಳ್ಳುವವರ ಸಂಖ್ಯೆ ಕಮ್ಮಿಯಾಗ ಹತ್ತಿತು. ಆದ್ದರಿಂದ ಇಂತಹರು ಮನೆ ಮಾರಲೂ ಅಸಾಧ್ಯವಾಯಿತು. ಆದರೆ ಈ ನಿರ್ದಿಷ್ಟ ಅವಧಿ ಮುಗಿಯುವ ಹೊತ್ತಿಗೆ ಬಡ್ಡಿ ಜಾಸ್ತಿಯಾಗುವುದಲ್ಲದೇ, ಇದರೊಡನೆ ಅದರ ಅಸಲೂ ಸೇರುವುದರಿಂದ ತಿಂಗಳು ತಿಂಗಳು ತೀರಿಸ ಬೇಕಾದ ಮೋರ್ಟ್ಗೇಜ್ ಒಮ್ಮೆಲೆ ಸಿಕ್ಕಾಬಟ್ಟೆ ಜಾಸ್ತಿಯಾಯಿತು. ಸಾಲ ಕೊಂಡವರಿಗೆ ಇದನ್ನು ಕೊಡುವ ಶಕ್ತಿಯಿಲ್ಲದ್ದರಿಂದ ಇಂತಹ ಪರಿಸ್ಥಿತಿಯನ್ನು ಎದುರಿಸಲಾಗದೇ ಜನ ಮನೆಯನ್ನು ಸಾಲಿಗರಿಗೆ ಬಿಟ್ಟು ನಡೆಯ ತೊಡಗಿದರು. ಒಮ್ಮೆಲೆ ಖಾಲಿ ಮನೆಗಳ ಸಂಖ್ಯೆ ಮಾರ್ಕೆಟಿನಲ್ಲಿ ಜಾಸ್ತಿಯಾಗ ತೊಡಗಿತು. ಮನೆಗಳ ಬೆಲೆ ಬೀಳ ತೊಡಗಿತು ಖರೀದಿಸುವವರಿಲ್ಲದೇ. ಇದು ಬಳೆಕೆದಾರರ ಕಡೆಯ ನೋಟ.
ಇದರಿಂದ ರಿಸೆಶನ್ ಹ್ಯಾಗೆ ಬಂತು? ಬ್ಯಾಂಕುಗಳು ಯಾಕೆ ಇಂತಹರಿಗೆ ಸಾಲ ಕೊಟ್ಟಿತು? ಬ್ಯಾಂಕುಗಳು ಮುಳುಗಿದ್ದು ಹ್ಯಾಗೆ? ಇವು ಸಬ್ಪ್ರೈಮ್ ಲೆಂಡಿಂಗ್ ನಿಂದ ಉಂಟಾದ ಕ್ರೆಡಿಟ್ ಕೈಸಿಸ್ ನಿಂದ (ಇದರ ಬಗ್ಯೆ ಹಲವಾರು ಚೆನ್ನಾಗಿರುವ ವಿಡಿಯೋಗಳು ಯೂಟ್ಯೂಬ್ ನಲ್ಲಿವೆ). ಇದು ಹೇಗಾಯಿತು? ಇಲ್ಲಿರುವ ಭಾಗವಹಿಸಿದ ನಟರು ಹಲವಾರು. ವಾಲ್ ಸ್ಟ್ರೀಟ್ (ದಲಾಲಿಗಳು, ಬ್ಯಾಂಕುಗಳು, ಇಂಶೂರೆನ್ಸ್ ಕಂಪೆನಿಗಳು, ಬಂಡವಾಳದಾರರು...), ಮೇನ್ ಸ್ಟ್ರೀಟ್ (ಮನೆ ಖರೀದಿಸುವವರು). ಆಶೆ ಬುರುಕ ಇನ್ವೆಸ್ಟ್ ಮೆಂಟ್ ಬ್ಯಾಂಕುಗಳು ಸಾಲದ ನಿಯಮಗಳ ಮೀರಿ ಯೋಗ್ಯತೆ ಇಲ್ಲದವರಿಗೆ ಸಾಲ ಕೊಡ ಶುರುಮಾಡಿದರು. ಅದೂ ನಿರ್ದಿಷ್ಟ ವೇಳೆಯ ನಂತರ ಬದಲಾಗುವಂತಾದ್ದು. ಅವರ ಅಂದಾಜು, ತಡವರಿಸದೆ ಹೆಚ್ಚುತ್ತಿರುವ ಮನೆಗಳ ಬೆಲೆಯಿಂದಾಗಿ ಒಂದು ವೇಳೆ ಸಾಲಕೊಂಬವರು ಸಾಲ ತೀರಿಸದಿದ್ದರೆ, ಮನೆ ಮಾರಿದಲ್ಲಿ ಸಾಲಕ್ಕಿಂತಲೂ ಹೆಚ್ಚಿನ ದುಡ್ಡು ವಾಪಾಸಾಗುವುದರಿಂದ ನಷ್ಟದ ಯೋಚನೆಯಿರಲಿಲ್ಲ. ಬ್ಯಾಂಕುಗಳಿಗೆ ಲೋಕದ ದೊಡ್ಡ ದೊಡ್ಡ ಬಂಡವಾಳ ಶಾಹಿಗಳು ( ಅಂತರಾಶ್ಟ್ರೀಯ ಕಂಪೆನಿಗಳು, ಮ್ಯೂಚುವಲ್ ಫ಼ಂಡ್ ಗಳು, ಸರಕಾರಿ ತಿಜೋರಿ ಬಿಲ್ಲ್, ಇತ್ಯಾದಿ), ದುಡ್ಡು ಸಪ್ಲೈ ಮಾಡಿದರು. ಬ್ಯಾಂಕುಗಳು ಇರುವ ಮೋರ್ಟ್ಗೇಜ್ ನ್ನು ಒತ್ತೆ (Collateral Leveraging) ಇಟ್ಟು ಇನ್ನೂ ಸಾಲ ಪಡಕೊಂಡುವು ಬಂಡವಾಳ ಶಾಹಿಗಳಿಂದ. ಅವನ್ನು ಪುನಃ ಮನೆ ಕೊಳ್ಳಲು ಸಾಲವಾಗಿ ಕೊಟ್ಟುವು ಯೋಗ್ಯತೆಯಿಲ್ಲದವರಿಗೆ. ಇದಕ್ಕೆ ಇಂಶೂರೆನ್ಸ್ ಕಂಪೆನಿಗಳು ಇಂಶೂರೆನ್ಸ್ ಕೊಟ್ಟುವು.
ಉದಾಹರಣೆಗೆ ಬ್ಯಾಂಕುಗಳ ಬಳಿ ೧೦,೦೦೦ ಡಾಲರಿನ ಸಾಲದ ಮನೆಗಳಿವೆ ಅಂದುಕೊಳ್ಳೋಣ. ಇದರಿಂದ ಬ್ಯಾಂಕುಗಳಿಗೆ ೫% ಬಡ್ಡಿ, ಅಂದರೆ ೫೦೦ ಡಾಲರು, ಬರುತ್ತದೆ ಅಂದು ಕೊಳ್ಳೋಣ. ಆದರೆ ಬ್ಯಾಂಕುಗಳು ಈ ಮನೆಗಳನ್ನ ಪುನಹ ಒತ್ತೆಯಾಗಿಟ್ಟು ಬಂಡವಾಳ ಶಾಹಿಗಳಿಂದ ಇನ್ನೂ ೯೦,೦೦೦ ಡಾಲ್ಲರ್ ಸಾಲ ಪಡೆದು ಅದನ್ನು ಪುನಹ ಮನೆಕೊಳ್ಳುವವರಿಗೆ ಸಾಲ ಕೊಟ್ಟರೆ ಒಟ್ಟಾರೆ ೧೦೦,೦೦೦ದ ಮೇಲೆ ೫% ಬಡ್ಡಿ, ೫೦೦೦ ಡಾಲರು, ಬರುತ್ತದೆ. ಮನೆ ಕೊಂಡವರು ಸಾಲ ತೀರಿಸುವವರೆಗೆ ಎಲ್ಲಾರೂ ಸಂತೋಶವಾಗಿರುತ್ತಾರೆ.
ಆದರೆ ಇವರೆಲ್ಲಾರ ಊಹೆಗಳೂ ತಲೆಕೆಳಗಾದುವು. ೨೦೦೭ ರಲ್ಲಿ ಗೃಹಗಳ ಬೆಲೆಯ ಗುಳ್ಳೆ ಒಡೆಯಲು ಪ್ರಾರಂಭವಾಯಿತು. ಅಷ್ಟರಲ್ಲಿ ಹೆಚ್ಚಿನವರ ಸಾಲದ ಪಾವತಿಯೂ ಜಾಸ್ತಿಯಾಗ ಹತ್ತಿತು. ಅಷ್ಟು ಪಾವತಿ ಮಾಡುವ ಸಾಧ್ಯತೆಯಿಲ್ಲದೇ, ಮನೆ ಮಾರಲಾಗದೇ ಜನ ಮನೆಗಳ ತ್ಯಜಿಸಿ ಹೊರಡ ಶುರುಮಾಡಿದರು. ಬ್ಯಾಂಕುಗಳ ವಶಕ್ಕೆ ಮಾರಲಾಗದಷ್ಟು ಮನೆಗಳು ಸೇರಿದುವು. ಮನೆಗಳ ಬೆಲೆ ಅವರು ಕೊಟ್ಟ ಸಾಲಕ್ಕಿಂತಲೂ ಕಡಿಮೆಯಾಯಿತು. ಇದರಿಂದಾಗಿ ಬ್ಯಾಂಕುಗಳು ಬಂಡವಾಳ ಶಾಹಿಗಳಿಗೆ ಸಾಲ ವಾಪಾಸಾತಿ ಮಾಡಲಾರದಾದರು. ಅದರಿಂದಾಗಿ ಬ್ಯಾಂಕುಗಳು, ಇಂಶೂರನ್ಸ್ ಕಂಪೆನಿಗಳು, ಬಂಡವಾಳ ಶಾಹಿಗಳು, ಸರಕಾರದ ತಿಜೋರಿ,... ದುಡ್ಡು ಕಳಕೊಳ್ಳ ತೊಡಗಿದುವು. ಈ ಸಾಲಗಳ ಮೇಲೆಯೇ ಅಧಾರವಾಗಿದ್ದ ಹಲ ಮ್ಯೂಚುವಲ್ ಹಾಗೂ ಹೆಡ್ಜ್ ಫಂಡ್ ಗಳು ಮುಳುಗಲು ಪ್ರಾರಂಭಿಸಿದುವು. ಜಾಗತೀಕತೆಯ ಈ ಕಾಲದಲ್ಲಿ ಇದರ ತರಂಗಗಳು ಪ್ರತಿಯೊಂದು ಕ್ಷೇತ್ರಗಳಿಗೂ ತಟ್ಟಿ ಲೋಕದಾದ್ಯಂತ ಹರಿಯಲು ಪ್ರಾರಂಬಿಸಿತು. ಅತ್ಯಂತ ದೊಡ್ಡ ಕಂಪೆನಿಗಳು ಮುಳುಗುವ ಅಂಚಿಗೆ ತೆರಳಿದುವು. ಅಮೇರಿಕಾದ ಹೊಸ ಸರಕಾರಕ್ಕೆ ಹೊಸ ಸವಾಲೊಡ್ಡಿದುವು. ಸರಕಾರದ ಅನೇಕ ಪ್ರಾಜೆಕ್ಟ್ ಗಳು ರಾತ್ರಿ ಬೆಳಗಾಗುವುದರೊಳಗೆ ಇಲ್ಲವಾದುವು. ಐದಾರು ತಿಂಗಳೊಳಗೆ ಅಮೇರಿಕಾದ ಅತ್ಯಂತ ಕೆಟ್ಟ ರಿಸೆಶನ್ ನ ಉದಯವಾಯಿತು.
ಇಂದು ಇನ್ನೂ ಜನರು ಮನೆಗಳನ್ನು ತ್ಯಜಿಸಿ ನಡೆಯುತ್ತಿದ್ದಾರೆ, ಸಾಲ ತೀರಿಸಲು ಸಾಧ್ಯವಿದ್ದರೂ. ಯಾಕಂದರೆ ಮನೆಯ ಬೆಲೆಗಳು ಸಾಲಕ್ಕಿಂತ ಇನ್ನೂ ಕಡಿಮೆಯಲ್ಲೇ ಇದೆ. ಅದಿನ್ನು ಮೇಲೆ ಯಾವಾಗ ಬರುತ್ತೊ ಗೊತ್ತಿಲ್ಲ. ಮನೆಯ ಕೊಳ್ಳುವವರಿಗೆ ಕೆಲಸವೇ ಇಲ್ಲದಾಗ್ಯೆ ಕೊಳ್ಳಲು ಬರುವವರಾದರೂ ಯಾರು? ದಿವಾಳಿಯೆದ್ದಿರುವ ಕ್ಯಾಲಿಫೋರ್ನಿಯಾದಲ್ಲಿ ಇದು ಇನ್ನೂ ತೀವ್ರವಾಗಿದೆ. ದುಡ್ಡಿಲ್ಲದ ಸರಕಾರ ವಿದ್ಯಾಭ್ಯಾಸದ ವಲಯಕ್ಕೆ ದೊಡ್ಡ ಕತ್ತರಿ ಪ್ರಯೋಗ ಮಾಡಿದೆ.
ಇನ್ನೂ ತತ್ತರಿಸುತ್ತಿದೆ ಅಮೇರಿಕ ಹಾಗೂ ಅಮೇರಿಕಾದ ಜನತೆ, ನನ್ನ ಸೇರಿದಂತೆ.
