Monday, August 24, 2009

ಬೇತಾಳ ಕಥೆಗಳು: ಅಮಾಧ್ಯಮ ಹಾಗೂ ರಾಜ ಜ್ಯಾಕ್ಸನ್


ಛಲ ಬಿಡದ ತ್ರಿವಿಕ್ರಮನು ಮರವೇರಿದ ಶವವನ್ನಿಳಿಸಿ ಬೆನ್ನಮೇಲೇರಿಸಿ ನಡೆಯುತ್ತಿರಲು, ಶವದಲ್ಲಿದ್ದ ಬೇತಾಳ ಹೀಗಂದಿತು. " ಎಲವೋ ತ್ರಿವಿಕ್ರಮನೆ, ನಿನ್ನ ಛಲವನ್ನು ನೋಡಿದರೆ ನನಗೆ ಮೈಕಲ್ ಜ್ಯಾಕ್ಸನ್ ಎಂಬ ರಾಜನ ಕಾಲದಲ್ಲಿಯ ಅಮೇರಿಕಾದ ಮಾಧ್ಯಮದ (ಅಮಾಧ್ಯಮ) ನೆನಪಾಗುತ್ತದೆ . 

ಒಂದಾನೊಂದು ಕಾಲದಲ್ಲಿ ನೇವರ್ಲೇಂಡ್ ರಾಜ್ಯವನ್ನ ಮೈಕಲ್ ಜ್ಯಾಕ್ಸನ್ ಎಂಬ ರಾಜನು ಆಳುತ್ತಿದ್ದ. ರಾಜ್ಯದಲ್ಲಿ ಎಲ್ಲೆಲ್ಲೂ ಸಮೃದ್ಧಿಯಿಂದ ತುಂಬಿ ತುಳುಕಾಡುತ್ತಿತ್ತು. ಚಿಕ್ಕ ಚಿಕ್ಕ ಮಕ್ಕಳು ಕುಪ್ಪಳಿಸಿ ಆಡುತ್ತಿದ್ದರು ಆ ರಾಜ್ಯದ ಭರ್ತಿ. ಸ್ವತಹ ಸಂಗೀತ ನೃತ್ಯದಲ್ಲಿ ಪರಿಣಿತ ಪಡೆದ ಈ ರಾಜ ಪಾಪ್ ಸಂಗೀತದ ಶ್ರೇಷ್ಟ ಶಿಖರಕ್ಕೆ ಸೇರಿದ್ದ ಕಾಲವದು. ಲೋಕದಲ್ಲೆಲ್ಲ ಜಯಭೇರಿ ಭಾರಿಸಿ ಪಾಪ್ ಚಕ್ರವರ್ತಿಯಾಗಿದ್ದ ಈತ.


ಚಿಕ್ಕಂದಿನಿಂದಲೇ ತನ್ನೀ ನೃತ್ಯ ಸಂಗೀತ ಸಾಮರ್ಥ್ಯವ ಪ್ರದರ್ಶಿಸಿದ್ದ ಈತನನ್ನ ಈತನ ತಂದೆ ಇದರಲ್ಲೇ ಹೆಚ್ಚಿನ ವಿದ್ಯಾಭ್ಯಾಸಕ್ಕೋಸ್ಕರ ಅಣುವು ಮಾಡಿ, ಮೋಟೌವ್ನ್ ಎಂಬ ಗುರುಕುಲಕ್ಕೆ ಕಳಿಸಿದರು. ಅಲ್ಲಿಂದ ಮುಂದೆ ಈತ ಹಾಗೂ ಈತನ ಸಹೋದರರು, ಪಂಚ ಪಾಂಡವರಂತೆ, ಸಂಗೀತದ ಇತರ ರಾಜ್ಯಗಳ ಮೇಲೆ ದಂಡೆತ್ತಿ ಹೋಗಿ ರಾಜರುಗಳ ಸೋಲಿಸುತ್ತಾ ಸಂಗೀತ ನೃತ್ಯದ ಅಜೇಯ ಚಕ್ರವರ್ತಿಯಾಗಿ ಮೆರೆದ. ನೆರೆ ರಾಜ್ಯದ ರಾಜನಾದ ಎಲ್ವಿಸ್ ನ ಮಗಳನ್ನು ಮದುವೆಯಾಗಿ ತನ್ನ ಪಟ್ಟದ ರಾಣಿಯನ್ನಾಗಿ ಮಾಡಿದ. ಇದು ಆತನ ಎರಡನೆಯ ಪತ್ನಿ. ಆದರೆ ದುರದೃಷ್ಟವಶಾತ್ ಇಬ್ಬರಲ್ಲೂ ಆತ ಪುತ್ರಭಾಗ್ಯ ಕಾಣಲಿಲ್ಲ. ಇದರಿಂದಾಗಿಯೋ, ಇಲ್ಲಾ ಬೇರೇನೊ ಕಾರಣದಿಂದಲೋ (ಕಾರಣ ಎಲ್ಲಿಯೂ ಅಮಾಧ್ಯಮದವರು ಲಿಖಿತ ಮಾಡಿಲ್ಲ), ಇವರಿಬ್ಬರನ್ನೂ ವಿಚ್ಚೇಧಿಸಿದ.


ಈತನ್ಮಧ್ಯೆ, ಅಂತರ್ಮುಖಿಯಾದ ರಾಜ ಜ್ಯಾಕ್ಸನ್ ನ ಮನದಲ್ಲಿ ಯಾರಿಗೂ ಅರಿವಾಗದ ಅದೇನೋ ಕೊರತೆ ಬಾಧಿಸುತ್ತಿತ್ತು. ಮಕ್ಕಳ ಅತೀವ ಪ್ರೇಮಿಯಾದ ಈತ ಸ್ವಂತ ತನಗೆ ಮಕ್ಕಳಾಗದ್ದಕ್ಕೋ, ಇಲ್ಲಾ ಬೇರೇನು ಕಾರಣಕ್ಕೊ ತಿಳಿಯದು. ನಿಧಾನವಾಗಿ ಈತನ ಪರಿವರ್ತನೆ ಪ್ರಾರಂಭವಾಯಿತು. ಸಂಗೀತ ಲೋಕದ ಅರಿಷಡ್ವರ್ಗಳನ್ನೆಲ್ಲ ಜಯಿಸಿ ಉತ್ತುಂಗಕ್ಕೇರಿದ ಈತ ತನ್ನ ಮೇಲೇ ತನ್ನೆಲ್ಲಾ ಅಳಲ ಪ್ರಹಾರಿಸಲು ಪ್ರಾರಂಬಿಸಿದ. ಮೊದಲನೆಯದಾಗಿ ಈತನ ಬಣ್ಣ ಬದಲಾಗಲು ಶುರುವಾಯಿತು. ಚಾಕೊಲೇಟು ವರ್ಣದ ಈತ ಸ್ವಲ್ಪವೇ ಸಮಯದೊಳು ಬಿಳಿಯ ಬಣ್ಣಕ್ಕೆ, ಜಿರಳೆ ತನ್ನ ಹೊರಕವಚ ಕಳಕೊಂಡು ಬಿಳಿಯಾಗುವಂತೆ, ಬದಲಾದ. ಅದು ಹೇಗಾಯಿತು, ಯಾಕಾಯಿತು ಎಂಬುದಕ್ಕೆ ಕೆಲವಾರು ಜನ ಹಲವಾರು ಕಾರಣಗಳ ಕೊಟ್ಟರೂ, ಇನ್ನೂ ಇದರ ಬಗ್ಯೆ ಸ್ಪಷ್ಟ ಕಾರಣ ತಿಳಿದಿಲ್ಲ. ಇದರ ಬಗ್ಯೆ ಅಮಾಧ್ಯಮದವರು ಇನ್ನೂ ಸಂಶೋಧನೆ ಮುಂದುವರಿಸಿದ್ದಾರೆ.


ಆ ಮೇಲೆ ಈತನ ದೃಷ್ಟಿ ಮೂಗಿನ ಮೇಲೆ ಹೊರಳಿತು. ಬಹುಶಃ ಯಾವಾಗಲೋ ಕೆಳಗೆ ನೋಡಲು ಯತ್ನಿಸಿದಾಗ ಮೂಗು ಅಡ್ಡ ಬಂದಿರಬೇಕು. ಈರುಳ್ಳಿಯ ಕೊಚ್ಚಿ ಹಾಕುವಂತೆ ಚೂರು ಚೂರೇ ನಾಸಿಕವ ಕೆತ್ತಿಸಿ ಕೊಳ್ಳ ಶುರು ಮಾಡಿದ ರಾಜಶಿಲ್ಪಿಯಿಂದ. ಇದೇ ಸಮಯಕ್ಕೆ ಈ ಶಿಲ್ಪಿಯ ಸೇವಕಿಯ ಮದುವೆಯಾದ. ಆಕೆಯೊಡನೆ ಆತನ ಪ್ರೇಮ ಸಮಾಗಮವಾಗದಿದ್ದರೂ, ಅಮಾಧ್ಯಮದವರು ಹೇಳುವಂತೆ, ಮೂಗಿನ ಶಿಲ್ಪಿಯ ಸಹಾಯದಿಂದ ವೈಜ್ನಾನಿಕವಾಗಿ ಮೂರು ಮಕ್ಕಳ ಪಡೆದ. ಇಷ್ಟೆಲ್ಲಾ ಆಗುತ್ತಿರಲು, ಈ ರಾಜನ ಮೇಲೆ ಅಮಾಧ್ಯಮದವರು ಅಪವಾದ ಎಸಗಿದರು, ಈತ ಮಕ್ಕಳ ನಿಜ ಪ್ರೇಮಿಯಲ್ಲ, ಬರೆ ಕಾಮಿಯೆಂದು! ಮೂಗನ್ನು ಕರವಸ್ತ್ರದಿಂದ ಮುಚ್ಚಿ ಅಗ್ನಿಪರೀಕ್ಷೆಗೆ ಹೊರಟ ರಥದಿಂದಿಳಿದ ರಾಜನಿಗೆ, ನಂಬಿಗಸ್ತ ಸೇವಕರು ಛತ್ರಿಹಿಡಿದು ನ್ಯಾಯಾಲಯಕ್ಕೆ ಮೆರವಣಿಗೆ ಮಾಡಿದರು. ಅನೇಕ ದಿನಗಳ ನಂತರ ಕೊನೆಗೂ ರಾಜನನ್ನು ಅಪವಾದ ಮುಕ್ತ ಮಾಡಿತು ನ್ಯಾಯಾಲಯ. ಅಮಾಧ್ಯಮಕ್ಕೆ ಸಾಕಷ್ಟು ಆಹಾರ ಸಿಕ್ಕಿತು ಈ ಪ್ರಕರಣದಿಂದ. ಇವೆಲ್ಲಾದರಿಂದ ತತ್ತರಿಸಿದ ರಾಜ, ರಾಜ ಸಿದ್ಧಾರ್ಥನಂತೆ, ನೇವರ್ಲೇಂಡನ್ನು ತ್ಯಜಿಸಿ ಬಹು ದೂರ ಮದ್ಯ ಪ್ರಾಚ್ಯ ದೇಶಕ್ಕೆ ತಪಸ್ಸಿಗೆ ತೆರಳಿದ. ಹತಾಶೆಯಿಂದ ಅಮಾಧ್ಯಮ ತನ್ನ ದೃಷ್ಟಿಯ ಬೇರೆ ಕಡೆ ಕೇಂದ್ರಿಸಿತು.

ಇದಾಗಿ ಕೆಲವು ವರುಷಗಳ ನಂತರ ರಾಜ್ಯದ ಪರಿಸ್ಥಿತಿ ಬಿಗಡಾಯಿಸಿತು. ಎಲ್ಲೆಲ್ಲೂ ಜನ ಕೆಲಸ ಕಳಕೊಳ್ಳ ತೊಡಗಿದರು. ರಾಜ್ಯವು ರಿಸೆಶನ್ ಸ್ಥಿತಿಗೆ ಮುಟ್ಟಿತು. ಅಮಾಧ್ಯಮರು ಮತ್ತೆ ಮತ್ತೆ ಬೇರೆ ಬೇರೆ ವ್ಯಾಪಾರಸ್ತರು ಪಾಪಾರಗಿದ್ದು ಹೇಳಿ ಸುಸ್ತಾಗಿದ್ದರು. ಅವರೇ ಕೆಲಸ ಕಳಕೊಳ್ಳುವ ಹಂತ ತಲಪಿದ್ದರು. ಇಂತಹಾ ಸಂದರ್ಭದಲ್ಲಿ, ಹಲವು ನಂಬಿಗಸ್ತ ಅನುಚರರೊಂದಿಗೆ ದೇವತೆಗಳ ನಾಡಾದ ಲಾಸ್ ಎಂಜಲೀಸಿಗೆ ಹಿಂತಿರುಗಿದ ಮಹಾರಾಜ, ಅಧಪತನ ಗೊಂಡ ತನ್ನ ರಾಜ್ಯವ ಪುನರ್ಜೀವ ಗೊಳಿಸಲೆಂದು. ಅವನ ತಂತ್ರ ಪಕ್ಕದ ದೇಶದ ಮೇಲೆ ಸಂಗೀತ ಯುದ್ಧವ ಎಸಗುವುದು. ಇದಕ್ಕೆಲ್ಲಾ ತಯಾರಿಯೂ ಭರದಿಂದ ಸಾಗುತಿರಲು, ಒಮ್ಮೆಲೆ ಬರಸಿಡಿಲೊಂದು ಬಡಿಯುತು ನಾಡಿಗೆ. ಮಹಾರಾಜ ಇನ್ನಿಲ್ಲ ಎಂದು! 

ಮೌನವಾಗಿದ್ದ ಅಮಾಧ್ಯಮ ತಟಕ್ಕೆಂದು ಎದ್ದು ಕುಳಿತಿತು! ಅಂದಿನಿಂದ ಶುರುವಾಯಿತು ಅಮಾಧ್ಯಮದ ಸುರಿಮಳೆ, ಸುಂಟರ ಗಾಳಿ, ಸುನಾಮಿ. ಮುಂದೆ ದಿನಕ್ಕೆ ಇಪ್ಪತ್ನಾಲ್ಕು ಘಂಟೆಗಳನ್ನೂ ಮಹಾರಾಜನ ಬದುಕು ಹಾಗೂ ಸಾವು, ಪೂರ್ವ ಹಾಗೂ ಉತ್ತರಗಳ ಚರಿತ್ರೆಯ ಪ್ರತಿಯೋಂದು ಕ್ಷಣಗಳ ವಿವರಗಳ ಪ್ರಸಾರಿಸಿತು. ಪೇಪರುಗಳಲ್ಲಿ, ಟಿವಿಯ ಪ್ರತಿಯೊಂದು ಚಾನಲುಗಳಲ್ಲಿ, ಇಂಟರ್ನೆಟ್ ನ ಪ್ರತಿಯೊಂದು ಬಲೆಗಳಲಿ, ಅಗಲಿದ ಮಹಾರಾಜನ ಚಿತ್ರವಿಚಿತ್ರ ಕಥೆಗಳನು ಇನ್ನಷ್ಟು ರಂಗೇರಿಸಿ, ಉಪ್ಪು ಮಸಾಲೆ ಸೇರಿಸಿ ನಾಡಿನ ಪ್ರಜೆಗಳಿಗೆ ದುಸ್ವಪ್ನವಾಗುವಷ್ಟು ಬಿತ್ತರಿಸಿತು. ಮಹಾರಾಜನ ಬಾಲ್ಯದಿಂದ ಹಿಡಿದು ನಡೆದ ಪ್ರತಿಯೊಂದು ಘಟ್ಟದ ಆಗುಹೋಗುಗಳೆಲ್ಲಾ ಪ್ರತಿಯೊಂದು ಪ್ರಜೆಯೂ ಅರಿತನು. ಪ್ರಜೆಗಳು ಬೇಡ ಬೇಡ ಎಂದು ಗುರಾಣಿಯ ಅಡ್ಡ ಹಿಡಿದರೂ, ಮಾಧ್ಯಮಗಳ ಮುಚ್ಚಿದರೂ, ತರಾವರಿ ರೀತಿಯಲ್ಲಿ ಅವರ ಮೇಲೆ ಅಮಾಧ್ಯಮ ಆಕ್ರಮಣವ ಮುಂದುವರಿಸಿತು.


ರಾಜನ ದೇಹ ಆಸ್ಪತ್ರೆಯ ಹೊಕ್ಕುವುದು, ಆತನ ಪಾರ್ಥಿವ ಶರೀರದ ಪುಷ್ಪಕ ವಿಮಾನದ (ಹೆಲಿಕೋಪ್ಟರ್) ಪ್ರಯಾಣ, ಇತ್ಯಾದಿ ರಾಜ ಇನ್ನಿಲ್ಲ ಅಂತಾ ಖಚಿತ ಪಡಿಸಿತು. ಆದರೆ, ಅವನ ಉತ್ತರಕ್ರಿಯೆಯ ದಿನ ಮುಂದಿಟ್ಟ ಪೆಟ್ಟಿಗೆಯಲ್ಲಿ ಆ ದಿನ ಮಹಾರಾಜನ ಪಾರ್ಥಿವ ಶರೀರವಿರಲಿಲ್ಲ ಎಂದು ಕೆಲ ಅಮಾಧ್ಯಮರ ಹೇಳಿಕೆ. ಅವನ ಮಗಳಂದು ನುಡಿದ ಅವನಷ್ಟು ಒಳ್ಳೆಯ ಅಪ್ಪ ಬೇರಿಲ್ಲ ಎಂಬ ಒಂದು ವಾಕ್ಯವ ಛಲಬಿಡದೆ ಮೇಲಿಂದ ಮೇಲೆ ಪ್ರಸಾರಿಸಿತು ಅಮಾಧ್ಯಮ. ಇದು ಪ್ರಜೆಗಳಿಗೆ ತುಂಬಾ 'ಚೀಜ಼ಿ' ಯಾಗಿ ಕಾಣಿಸಿತು. ಮಹಾರಾಜನ ಕೊನೆಯ ಪತ್ನಿ, ತಂದೆ, ತಾಯಿಯರ ಒಳಜಗಳವ ರಂಗುರಂಗಾಗಿ ವಿಸ್ತರಿಸಿತು. ರಾಜವೈದ್ಯ ಮರ್ರಿಯ ಮುಖದ ಪ್ರತಿಯೊಂದು ಸ್ನಾಯುಗಳ ಚಲನವಲನಗಳ ಪರಿಶೀಲಿಸಿ ಆತ ಸುಳ್ಳು ಹೇಳುತ್ತಿದ್ದಾನೆಯೆ? ನಿಜವಾಗಿಯೂ ರಾಜನ ಸಾವಿಗೆ ಕಾರಣನೇ? ಆತನೇ ಮಹಾರಾಜನಿಗೆ ಬೋಧ ತಪ್ಪುವ ಔಶಧಿ ಪ್ರೋಪೊಫೋಲ್ ಕೊಟ್ಟನೆ? ರಾಜನ ಶವಸಂಸ್ಕಾರ ಇನ್ನೂ ನಡೆದಿಲ್ಲ, ಯಾವಾಗ ಎಂದು ಗೊತ್ತಿಲ್ಲ, ಇತ್ಯಾದಿ ಇತ್ಯಾದಿ. 

ಎಲೇ ವಿಕ್ರಮಾದಿತ್ಯನೇ, ಈಗ ಹೇಳು ನೀ, ಈ ರಾಜಕುಮಾರಿ ಹೇಳಿದ ಮಾತು ಸತ್ಯವೇ? ಅವನು ಅಷ್ಟು ಒಳ್ಳೆ ಅಪ್ಪನಾಗಿದ್ದಲ್ಲಿ, ಅಂತಾ ಬುದ್ಧಿಮಾಂದ್ಯ ಮಾಡುವ ಮಣ್ಣು ಮಸಿಯೆಲ್ಲಾ ಯಾಕೆ ಮುಕ್ಕುತ್ತಿದ್ದ ಆ ಮಹಾರಾಜ? ಮುಖ ಮೂಗು ಯಾಕೆ ಕೆತ್ತಿಸಿ ಕೊಳ್ಳುತ್ತಿದ್ದ? ಜಿರಳೆಯ ತರಹ ಬಣ್ಣ ಯಾಕೆ ಬದಲಿಸುತ್ತಿದ್ದ? ಈ ಬಗ್ಯೆ ಅಮಾಧ್ಯಮ ಇಷ್ಟು ದೊಡ್ಡ ರಂಪ ಮಾಡುವ ಅವಶ್ಯಕತೆಯಿದೆಯೇ? ಹೇಳಿದ್ದನ್ನು ಪುನಹ ಪುನಹ, ಛಲಬಿಡದೆ, ಘಂಟೆ ಘಂಟೆಗೆ ಪ್ರಸಾರ ಮಾಡಲು ಪ್ರಜೆಗಳೇನು ಇನ್ನೂ ಎಲಿಮೆಂಟರಿ ಶಾಲೆಯ ಮಕ್ಕಳೇ? ಅಥವ ರಿಸೆಶನ್ನ ಆ ಕಾಲದಲ್ಲಿ ಕೆಲಸ ಕಳಕೊಂಡು ತೊಂದರೆಗೊಳಗಾಗಿರುವ ಪ್ರಜೆಗಳ ಜೀವನದಲ್ಲಿ ಬೇರೇನೂ ಇದಕ್ಕಿಂತ ಹೆಚ್ಚಿನ ತೊಂದರೆಗಳಿಲ್ಲವೇ? ಅಥವ ರಿಸೆಶನ್ನಿಂದ ಜರ್ಜರಿತವಾದ ಪ್ರಜೆಗಳು ದಂಗೆಯೇಳದಂತೆ ಸರಕಾರ ಮಾಡಿದ ಉಪಾಯವೇ? ಇವೆಲ್ಲದಕ್ಕೂ ಉತ್ತರಗಳನ್ನ ತಿಳಿದೂ ತಿಳಿದೂ ನೀ ಉತ್ತರಿಸದಿದ್ದಲ್ಲಿ ನಿನ್ನ ತಲೆ ಸಾವಿರ ಹೋಳುಗಳಾಗುವುದು."

ಆಗ ತ್ರಿವಿಕ್ರಮನಂದ, " ಇತಿಹಾಸಕಾರರು ಹೇಳುವಂತೆ ಪ್ರತಿ ರಾಜನಲ್ಲೂ ಒಂದಲ್ಲ ಹಲವಾರು ನ್ಯೂನ್ಯತೆಗಳಿರುವುದು ಸಾಮಾನ್ಯ. ಹಾಗೆಯೇ ಈ ಒಗಟಿನ ರಾಜನಲ್ಲೂ ಮಣ್ಣುಮಸಿ ತಿನ್ನುವ, ಮೂಗು ಮುಖ ಕೆತ್ತಿಸಿಕೊಳ್ಳುವ, ಬಣ್ಣ ಬದಲಾಯಿಸುವ, ..., ಇತ್ಯಾದಿ ಹಲವಾರು ನ್ಯೂನ್ಯತೆಗಳಿದ್ದರಬಹುದು. ಇನ್ನು ಬಹುಶಃ ಅಪ್ಪನಿರುವಷ್ಟೂ ಸಮಯ ಮುಸುಕಿನಲ್ಲಿ ಹೊರಗೆ ಹೋಗಿ ಬೇರೆಯವರ ಸಂಪರ್ಕವಿಲ್ಲದ್ದರಿಂದ, ಅವನೊಬ್ಬನನ್ನೇ ಅಪ್ಪನೆಂದು ನೋಡಿದ್ದರಿಂದ, ಬೇರೆ ಅಪ್ಪಂದಿರು ಹೇಗಿರುತ್ತಾರೆ ಎಂದು ರಾಜಕುಮಾರಿಗೆ ಗೊತ್ತಿಲ್ಲದ್ದರಿಂದ ಆಕೆ ಹೇಳಿದ್ದು ಅವಳಿಗೆ ಸತ್ಯವೇ. ಬಹುಸಮಯದಿಂದ ರಿಸೆಶನ್ ಅಂತಾ ಬಣ್ಣಗೇಡಿ ಸುದ್ಧಿಗಳ ಪ್ರಸಾರಿಸಿ ಬೇಜಾರದಿಂದಿರುವ ಅಮಾಧ್ಯಮಕ್ಕೆ ಮಹಾರಾಜ ತಪಸ್ಸಿನಿಂದ ವಾಪಾಸು ಬಂದದ್ದೇ ಮರುಭೂಮಿಯಲ್ಲಿದ್ದವನಿಗೆ ನೀರು ಸಿಕ್ಕಂತಾಗಿರುವಾಗ್ಯೆ, ಮಹಾರಾಜನ ಅಕಾಲ ಮೃತ್ಯು ಒಂದು ದೊಡ್ಡ ವರವಾಗಿ ಪರಿಣಮಿಸಿತು. ಇದರಿಂದ ಅಮಾಧ್ಯಮದ ಎಷ್ಟೊ ಜನರಿಗೆ ಕೆಲಸ ವಾಪಾಸು ಸಿಕ್ಕಿತು. ಅಲ್ಲದೇ ಇದು ರಿಸೆಶನ್ನಿಂದ ತತ್ತರಿಸುತ್ತಿರುವ ಪ್ರಜೆಗಳ ಮನಸ್ಸನ್ನ ಬೇರೆ ಕಡೆ ಎಳೆಯುವ ಒಂದು ಮಹಾಶಕ್ತಿಯಾಯಿತು. ಇಲ್ಲಿ ಅಮಾಧ್ಯಮಗಳಿಗೆ ಖಂಡಿತವಾಗಿಯೂ ಪ್ರಜೆಗಳ ಬುದ್ಧಿಮತ್ತೆಯ ಅರಿವಿರಲಿಲ್ಲ. ಅಮಾಧ್ಯಮರು ಪ್ರಸಾರಿಸಿದ್ದು ಅಮಾಧ್ಯಮರ ಹೊಟ್ಟೆಪಾಡಿಗೆ ಮಾತ್ರ."

ಈ ರೀತಿ ವಿಕ್ರಮಾದಿತ್ಯನು ಬಾಯಿಬಿಟ್ಟೊಡನೆ, ಬೆನ್ನಮೇಲಿದ್ದ ಬೇತಾಳ ಶವದೊಂದಿಗೆ ಹಾರಿ ಪುನಹ ಮರವ ಸೇರಿಕೊಂಡಿತು.