Friday, September 25, 2009

ಧ್ರುವ ತಾರೆ

ಧ್ರುವ ತಾರೆಯೆ, ಆಗಿದ್ದಿದ್ದರೆ ನಾನೂ ನಿನ್ನಂತೆ ನಿಶ್ಚಲ-
ಇರುಳ ಅಟ್ಟದಿ ನೇತುಹಾಕಿದ ಒಂಟಿ ಭವ್ಯತೆಯಂತೆ
ನಿದ್ರೆಯಿಲ್ಲದೆ ವೀಕ್ಷಿಸುತ್ತಾ ತೆರೆದು ಕಣ್ಣ ಅಚಲ,
ತಾಳ್ಮೆಯಿಂದ ಪ್ರಕೃತಿಯ ಬೈರಾಗಿಯಂತೆ,
ಪೂಜಾರಿ ತರಹ, ಹರಿಯುತಿಹ ಜರಿ
ಭುವಿಯ ಮಾನವ ತೀರವ ಶುದ್ಧೀಕರಿಸುವಂತೆ,
ಅಥವ ನಯವಾಗಿ ಬಿದ್ದ ಹಿಮ ಹರಡಿ ಮರೆಮಾಚಿದ ಗಿರಿ
ಬಯಲುಗಳ ದಿಟ್ಟಿಸಿ ನೋಡುವಂತೆ-
ಇಲ್ಲಾ -ಇದಕ್ಕಿಂತಲೂ ಬದಲಾಗದ, ಇನ್ನೂ ನಿಶ್ಚಲ,
ಪಕ್ವವಾಗುತಿಹ ನನ್ನ ಪ್ರಿಯೆಯ ಸ್ತನಗಳ ದಿಂಬಾಗಿರಿಸಿ, ಅನವರಿತ
ಅನುಭವಿಸುತ್ತಾ ಅದರ ನವಿರಾದ ಏರು ಬೀಳುಗಳ,
ಸಿಹಿ ವಿಪ್ಲವದಲಿ ಎಂದೆಂದೂ ಎಚ್ಚರದಿಂದಿರುತ,
ಆಕೆಯ ಮೃದುವಾದ ಉಸಿರ ಕೇಳುವಷ್ಟು ಸ್ತಬ್ಧತೆಯಲಿ, ಚಿರವಾಗಿ
ಬದುಕ ಬೇಕು ಹೀಗೆ– ಇಲ್ಲಾ ಸಾಯಬೇಕು ಮೂರ್ಛೆ ಹೋಗಿ.


ಮೂಲ: 'ಬ್ರೈಟ್ ಸ್ಟಾರ್", ಜೋನ್ ಕೀಟ್ಸ್

ಅನುವಾದ: ಭಾರತಿ

'ಬ್ರೈಟ್ ಸ್ಟಾರ್" ಒಂದು 'ಸಾನೆಟ್'. ಇದನ್ನು ಅನುವಾದಿಸುವಾಗ ಅದೇ ರೀತಿಯ ರಚನೆಯನ್ನು ಅನುಸರಿಸಲು ಪ್ರಯತ್ನಿಸಿದ್ದೇನೆ.

ಇದರ ಮೇಲೆ ಆಧಾರಿತ ಜೋನ್ ಕೀಟ್ಸ್ ನ ಅತ್ಯಂತ ಅಲ್ಪಾವಧಿ ಜೀವನದ ಬಗ್ಯೆ ಚಲನ ಚಿತ್ರವೊಂದು ಈಗ ಬಿಡುಗಡೆಯಾಗಿದೆ.