Thursday, October 29, 2009

ಓಮಾರ್ ಕಯ್ಯಾಮನ ರುಬಾಯಿಯತ್ (೯)

೭೬
ತಗಲಿತೊಂದು ನೂಲಿಗೆ ಆ ದ್ರಾಕ್ಷಾಬಳ್ಳಿ: ಹೊಸೆದು ಕೊಂಡಿತು
ನನ್ನೀ ಅಸ್ತಿತ್ವಕ್ಕೇ ಅದರಿಂದಾಗಿ-ಧಿಕ್ಕರಿಸಲಿ ಬೇಕಾದರೆ ಫಕೀರನು;
ನನ್ನೀ ಕ್ಷುದ್ರ ಲೋಹದಿಂದ ಅರ ಹಾಕಿ ಚಾವಿ ಮಾಡಿದಲ್ಲಿ
ಅದು ಆತ ಊಳಿಡದ ಬಾಗಿಲ ಬೀಗವ ತೆರೆಯಬಹುದು.

೭೭
ನನಗಿದು ಗೊತ್ತು: ನನ್ನಲ್ಲಿ ಆ ನಿಜವಾದ ಬೆಳಕೊಂದು
ಪ್ರೀತಿಯ ಹಚ್ಚುವುದೋ, ಇಲ್ಲಾ ರೋಷದಲಿ ಉರಿಸುವುದೊ ನನ್ನ ಎಂದು,
ಪಥಿಕಾಶ್ರಮದಿ ನಾ ಕಂಡ ಆ ಒಂದು ಮಿಂಚು ಎಷ್ಟೋ ಮೇಲು
ದೇವಾಲಯದೊಳು ನಮ್ಮನ್ನೇ ಕಳಕೊಂಡದ್ದಕ್ಕಿಂತ ಖಂಡಿತವಾಗಿಯು.

೭೮
ಏನು! ಪ್ರಚೋದಿಸುವುದೇ ಅವಿವೇಕದ ಶೂನ್ಯದಿಂದ
ಪ್ರಜ್ಞೆಯ ಏನೋ ಒಂದ ತೋರಲು ಅಸಮಧಾನವ
ಅನುಮತಿಯಿಲ್ಲದ ಆನಂದದ ನೊಗದ ಮೇಲೆ,
ಅದು ಮುರಿದಲ್ಲಿ ನೋವೆಂದು ಅನವರತ ಶಿಕ್ಷೆಯ!

೭೯
ಏನು! ಆತನ ಈ ಅಸಹಾಯಕ ಪ್ರಾಣಿ ತಿರುಗಿಸಬೇಕೆ ಶುದ್ಧ ಚಿನ್ನವ
ಮುಕ್ತ ಗೊಳಿಸಲು ಆತ ಕೊಟ್ಟ ಬರೇ ಬೆಂಡಿನ ಸಾಲವ-
ದಾವೆ ಹೂಡುವುದೇ ಸಾಲದ ಮೇಲೆ ಆತ ಒಪ್ಪಂದ ಮಾಡದ,
ಮತ್ತೆ ಉತ್ತರಿಸಲಾರದ – ಛೇ ಎಂತಾ ಹೀನ ವ್ಯಾಪಾರ!

೮೦
ಏಯ್ ನೀನು, ಮುಚ್ಚಿದ ಹೊಂಡಗಳಿಂದ ಮತ್ತು ಸಾಧನಗಳಿಂದ
ತುಂಬಿಟ್ಟಿರುವವನೇ ನಾ ಅಲೆಯುವ ರಸ್ತೆಯನ್ನ,
ನೀ ಮೊದಲೇ ನಿರ್ಣಯಿಸಿದ ಕೆಡುಕುಗಳಿಂದ ನನ್ನ ಸುತ್ತುವರಿದು
ಆವರಿಸಿ, ಮತ್ತೆ ನಾ ಪಾಪಕ್ಕೆ ಇಳಿದಿಹೆನೆಂದು ಅರೋಪಿಸ ಬೇಡ!

೮೧
ಏಯ್ ನೀನು, ನಿಕೃಷ್ಟ ಭೂಮಿಯ ಮನುಜನ ಮಾಡಿದವನೇ,
ಸ್ವರ್ಗದಂತಲ್ಲೂ ಹಾವನ್ನು ಮಾಡಿ ಮಸಲತ್ತು ಮಾಡಿದವನೇ:
ಮನುಜನ ಮುಖವ ಕಪ್ಪಾಗಿ ಮಾಡುವಂತಹ ಆ ಎಲ್ಲಾ
ಪಾಪಗಳಿಗೂ- ಮನುಜ ನಿನ್ನ ಮನ್ನಿಸುವ – ತೆಗೆದುಕೋ ಮತ್ತೆ !

**************************************************

<< ಹಿಂದೆ -------------------------------------------------- ಮುಂದೆ >>

ಇಂಗ್ಲಿಷ್: ಎಡ್ವರ್ಡ್ ಫಿಟ್ಜೆರಾಲ್ಡ್
ಕನ್ನಡಕ್ಕೆ: ಭಾರತಿ ದೇವಿ ಮತ್ತು ಮಧುರ್ ಆತ್ರೇಯ
© Bharathi Devi