Monday, October 26, 2009

ಓಮಾರ್ ಕಯ್ಯಾಮನ ರುಬಾಯಿಯತ್ (೮)

೬೬
ನನ್ನಾತ್ಮವ ನಾ ಕಳಿಸಿದೆ ಅಗೋಚರದ ಮೂಲಕ,
ಕೆಲವು ಪತ್ರಗಳಲಿ ಉಚ್ಚರಿಸಿ ಹೇಳಲು ಪರಲೋಕವ :
ದಿಢೀರ್ ತಿರುಗಿ ಬಂತು ನನ್ನ ಬಳಿ ನನ್ನಾತ್ಮ,
ಮತ್ತು ಉತ್ತರಿಸಿತು ” ನಾನು, ನಾನೇ ಸ್ವರ್ಗ ಮತ್ತು ನರಕ:”

೬೭
ಸ್ವರ್ಗವೆಂದರೆ ಪೂರೈಸಿದ ನಮ್ಮಾಶೆಗಳ ಕಲ್ಪನೆಯಷ್ಟೆ
ಮತ್ತು ನರಕ ಬೆಂಕಿಯೆದ್ದ ನಮ್ಮಾತ್ಮ ಎಸೆದ ಛಾಯೆ
ಕತ್ತಲ ಮೇಲೆ, ಯಾವುದರೊಳಗಿಂದ ನಾವು ತುಂಬ ತಡವಾಗಿ
ಆವಿಷ್ಕರಿಸಿದೆವೋ, ಮತ್ತು ಹೋಗಿ ಸೇರಿ ಕೊಳ್ಳುವೆವೋ ಸಧ್ಯದಲ್ಲೇ.

೬೮
ನಾವು ಮತ್ತೇನಲ್ಲ ಬರೇ ಚಲಿಸುವ ಸಾಲುಗಳು
ಸದಾ ಬರುತ್ತಾ ಹೋಗುತ್ತಾ ಇರುವ ಮಾಯೆಯ ನೆರಳಿನ ರೂಪಗಳು
ಎಲ್ಲಿ ಮಧ್ಯರಾತ್ರಿಯಲಿ ಸೂರ್ಯನಿಂದ ಬೆಳಗಿದ
ಕಂದೀಲ ಹಿಡಿದಿರುವನೋ ಅಲ್ಲಿ ಈ ಪ್ರದರ್ಶನದ ಕರ್ತೃವು.

೬೯
ಆದರೆ ಆಡುವನಾತನು ಅಸಹಾಯಕ ದಾಳಗಳ
ಈ ಚದುರಂಗದಾಟದಲಿ ರಾತ್ರಿ ಮತ್ತು ಹಗಲುಗಳ;
ಅತ್ತ-ಇತ್ತ ಚಲಿಸುವನು, ನಿಗ್ರಹಿಸುವನು, ಮತ್ತು ವಧಿಸುವನು,
ಮತ್ತೆ ತೆಗೆದಿಡುವನು ಬೀರುವಿನಲ್ಲಿ ತಿರುಗಿ ಒಂದೊಂದಾಗೇ ಅವುಗಳ.

೭೦
ಪ್ರಶ್ನೆಯೇ ಇಲ್ಲ, ಚೆಂಡು ಅಯ್ಯೋ ಮತ್ತು ಬೇಡ ಎನ್ನುವುದು,
ಆದರೆ ಆಟಗಾರ ಅಲ್ಲಿ ಇಲ್ಲಿ ಹೊಡೆದಲ್ಲಿ ಹೋಗುವುದು;
ಮತ್ತೆ ನಿನ್ನ ಆಟದ ಬಯಲಿಗೆ ಬೀರಿದಾತ,
ಆತನಿಗೆ ಇದೆಲ್ಲಾ ಗೊತ್ತು-ಆತನಿಗೆ ಗೊತ್ತು-ಆತನಿಗೆ ಗೊತ್ತು!

೭೧
ಚಲಿಸುವ ಬೆರಳು ಬರೆಯುವುದು; ಮತ್ತು ಬರೆದ ನಂತರ,
ಮುಂದುವರಿಯುವುದು: ನಿನ್ನಾವ ಧಾರ್ಮಿಕತೆ ಇಲ್ಲಾ ಬುದ್ಧಿ ಚಾತುರ್ಯ
ಆಕರ್ಶಿಸದು ಅದನ್ನ ಅಳಿಸಲು ತಿರುಗಿ ಬರೆದ ಅರ್ಧ ಗೆರೆಯ,
ಮತ್ತು ನಿನ್ನೆಲ್ಲಾ ಕಣ್ಣೀರೂ ತೊಳೆಯದು ಒಂದಕ್ಷರವ ಕೂಡ.

೭೨
ಆಗಸವೆಂದು ಕರೆಯುವ ಆ ಕವುಚಿದ ಬೋಗುಣಿಯ ಕೆಳಗೆ,
ತೆವಳುತ್ತಾ ಬದುಕುವೆವು ಮತ್ತು ಗತಿಸುವೆವು ನಾವೀ ಪಂಜರದೊಳಗೆ,
ಕೈಯೆತ್ತ ಬೇಡ ಅದರ ಬಳಿ ಸಹಾಯಕ್ಕೆಂದು –ಯಾಕಂದರೆ
ನಿನ್ನ ಇಲ್ಲಾ ನನ್ನಂತೆ ಅದೂ ಚಲಿಸುವುದು ದುರ್ಬಲವಾಗೇ.

೭೩
ಭೂಮಿಯ ಮೊದಲ ಮಣ್ಣಲ್ಲಿ ಕೊನೆಯ ಮನುಜನ ನಾದಿದರವರು
ತನ್ಮೂಲಕ ಕಟ್ಟ ಕಡೆಯ ಸುಗ್ಗಿಯ ಬೀಜವ ಬಿತ್ತಿದರು:
ಮತ್ತೆ ಪರಿಗಣಿತ ಅಂತಿಮ ಸಂಜೆಯಲಿ ಓದುವಂತಹದನ್ನ
ಸೃಷ್ಟಿಯ ಪ್ರಥಮ ಮುಂಜಾನೆಯಲಿ ಬರೆದರು.

೭೪
ನಿನ್ನೆ ತಯಾರಿಸಿತು ಇಂದಿನ ಈ ಮರುಳುತನವನ್ನು;
ನಾಳೆಯ ಮೌನ, ಯಶಸ್ಸು, ಹಾಗೂ ನಿರಾಶೆಯನ್ನು;
ಕುಡಿ! ನಿನಗರಿವಿಲ್ಲ ನೀ ಎಲ್ಲಿಂದ ಮತ್ತು ಯಾಕೆ ಬಂದೆಯೆಂದು:
ಕುಡಿ! ನಿನಗೆ ಗೊತ್ತಿಲ್ಲ ನೀ ಯಾಕೆ ಮತ್ತು ಎಲ್ಲಿಗೆ ಹೋಗುವೆಯೆಂದು.

೭೫
ನಾ ನಿನಗೆ ಹೇಳುವೆ ಇದ – ಶುರುವಿಂದಲೇ ಅದೇ ಗುರಿಯಿಂದ,
ಮೇಲಿಂದ ಆಗಸದ ಗುರು ಮತ್ತು ವೃಷಭ ನಕ್ಷತ್ರಗಳಂತ
ಕುದುರೆಗಳ ಹೆಗಲುಗಳು ಉರಿದಾಗ ಅವರೆಸೆದರು,
ಪೂರ್ವ ನಿರ್ಣಯಿತ ಧೂಳು ಮತ್ತು ಆತ್ಮದ ಈ ಪಿತೂರಿಗೆ ನನ್ನ.

<< ಹಿಂದೆ -------------------------------------------------- ಮುಂದೆ >>

ಇಂಗ್ಲಿಷ್: ಎಡ್ವರ್ಡ್ ಫಿಟ್ಜೆರಾಲ್ಡ್
ಕನ್ನಡಕ್ಕೆ: ಭಾರತಿ ದೇವಿ ಮತ್ತು ಮಧುರ್ ಆತ್ರೇಯ
© Bharathi Devi