೮೨
ತೆರಳುವ ದಿನದ ಹೊದಿಕೆಯಡಿಯೊಳು
ಹಸಿವೆಯಿಂದ ಬಳಲಿದ ರಮ್ಜ಼ಾನ್ ಜಾರಿಹೋಗಲು,
ಕುಂಬಾರನ ಮನೆಯಲ್ಲಿ ಪುನಹ ನಾ ನಿಂತೆ ಒಂಟಿಯಾಗಿ,
ಮಣ್ಣಿನ ಹಲವಾರು ಆಕೃತಿಗಳಿಂದ ಸುತ್ತುವರಿದು.
೮೩
ಎಲ್ಲಾ ತರದ ಮತ್ತು ಗಾತ್ರದ ಆಕೃತಿಗಳು, ದೊಡ್ಡವು ಮತ್ತು ಚಿಕ್ಕವು,
ನೆಲದ ಮೇಲೆ ಮತ್ತು ಗೋಡೆಯ ಬದಿಯಲ್ಲಿ ನಿಂತಿದ್ದುವು;
ಕೆಲವು ವಾಚಾಳಿ ಮಡಕೆಗಳಿದ್ದುವು; ಮತ್ತೆ ಕೆಲವು
ಸುಮ್ಮನೆ ಆಲಿಸಿದುವು; ಮಾತೇ ಆಡಲಿಲ್ಲ ಅವು.
೮೪
ಅದರಲ್ಲೊಂದು ಹೇಳಿತು-“ ಸುಮ್ಮಗೆ ಕಾರಣವಿಲ್ಲದೆ ಮಾಡಿರಲಾರರು
ಬರೇ ಸಾಮಾನ್ಯ ಮಣ್ಣನ್ನು ತೆಕ್ಕೊಂಡು ನನ್ನ ಹುರುಳನ್ನು
ಈ ಆಕೃತಿಗೆ ರೂಪಾಂತರಿಸಿ, ಒಡೆಯಲು,
ಇಲ್ಲಾ ತುಳಿದು ಚೂರಾಗಿಸಿ ಪುನಃ ರೂಪವಿಲ್ಲದ ಮಣ್ಣಾಗಿಸಲು.”
೮೫
ಇನ್ನೊಂದಂದಿತಾಗ-“ ಎಂದೂ ಒಡೆಯನು ಸಿಡುಕಿನ ಹುಡುಗ,
ಅವ ಮುದದಿಂದ ಕುಡಿಯಲು ಉಪಯೋಗಿಸಿದ ಮಡಕೆಯ;
ಮತ್ತು, ಯಾರ ಕೈಗಳು ಈ ಮಡಕೆಯ ಮಾಡಿಹುದೋ,
ಖಂಡಿತವಾಗಿಯೂ ಆತ ಮಾಡನು ಕೋಪದಿಂದ ನಾಶ.”
೮೬
ಸ್ವಲ್ಪ ಹೊತ್ತಿನ ನಂತರ ಮಾತಾಡಿತು,
ಅಷ್ಟೇನು ಅಂದವಿಲ್ಲದ ಮಡಕೆಯೊಂದು:
“ ಹೀಯಾಳಿಸುವರವರು ನನ್ನ, ಓರೆಕೋರೆಯಾಗಿ ಹಬ್ಬಿರುವುದಕ್ಕೆ:
ಏನು! ಹಾಗಾದರೆ ಕುಂಬಾರನ ಕೈಗಳು ನಲುಗಿದುವೇನು?”
೮೭
ಅಷ್ಟರಲ್ಲಂದಿತು ಬಾಯಿ ಬಡುಕ ಗುಂಪಿಗೆ ಸೇರಿದ-
ಬಹುಶಃ ಸೂಫಿ ಕುಡಿಕೆಯಿರಬೇಕು – ಭಯಂಕರ ಬಿಸಿಯ-
“ಈ ಎಲ್ಲಾ ಕುಂಬಾರ ಮತ್ತು ಮಡಕೆಯಲ್ಲಿ- ಹೇಳಿ ಹಾಗಾದರೆ,
ಯಾರು ಮಡಕೆ, ಬೇಡಿಕೊಳ್ಳುವೆ, ಮತ್ತು ಯಾರು ಕುಂಬಾರ?”
೮೮
“ಯಾಕೆ” ಅಂದಿತು ಇನ್ನೊಂದಾಗ, “ಹೇಳುತ್ತಾರೆ ಹಲವರು,
ಬೆದರಿಸುವವನೊಬ್ಬನ ಬಗ್ಯೆ, ನರಕಕ್ಕೆ ಎಸೆಯುವನೆಂದು,
ತಾನು ಮಾಡುತಿರಲು ಕೆಡಿಸಿದ ಹತಭಾಗ್ಯ ಮಡಕೆಗಳ-ಪಿಶ್!
ಆತ ಒಳ್ಳೆಯವ, ಮತ್ತು ಎಲ್ಲಾ ಒಳ್ಳೆಯದಾಗುವುದು."
೮೯
“ಒಳ್ಳೆಯದು” ಗೊಣಗಿತೊಂದು, “ಯಾರು ಬೇಕಾದರೂ ಮಾಡಲಿ ಇಲ್ಲ ಕೊಳ್ಳಲಿ,
ದೀರ್ಘ ವಿಸ್ಮೃತಿಯಿಂದ ಹೋಗಿದೆ ನನ್ನ ಮಣ್ಣು ಒಣಗಿ:
ಆದರೆ ತುಂಬಿ ನನ್ನ ಆ ಹಳೇ ಪರಿಚಯದ ರಸದಿಂದ,
ನನಗನ್ನಿಸಿದೆ ನಾ ಚೇತರಿಸ ಬಹುದು ಸಧ್ಯದಲ್ಲಿ."
೯೦
ಹೀಗೆ ಮಡಕೆಗಳು ಒಂದರ ನಂತರ ಒಂದು ಮಾತಾಡುತಿರಲು,
ಎಲ್ಲರೂ ಅನ್ವೇಶಿಸುತ್ತಿದ್ದ ಆ ಚಿಕ್ಕ ಚಂದ್ರ ಇಣಿಕಿ ನೋಡಿದನು:
ಆಗ ಅವರೊಬ್ಬರನ್ನೊಬ್ಬರು ನಲುಗಿಸಿ, “ ತಮ್ಮಾ! ತಮ್ಮಾ! ತಿಳಿಯಿತೀಗ
ಯಾಕೆ ಕೂಲಿಯ ಹೆಗಲುಗಳ ಗಂಟುಗಳು ಕಿರುಗುಟ್ಟುವುದು ಎಂದು!’
<< ಹಿಂದೆ -------------------------------------------------- ಮುಂದೆ >>
ಇಂಗ್ಲಿಷ್: ಎಡ್ವರ್ಡ್ ಫಿಟ್ಜೆರಾಲ್ಡ್
ಕನ್ನಡಕ್ಕೆ: ಭಾರತಿ ದೇವಿ ಮತ್ತು ಮಧುರ್ ಆತ್ರೇಯ
© Bharathi Devi
