ಬಾ ನನ್ನೊಡನೆ ಈ ಕುರುಚಲು ಹುಲ್ಲ ಹುಣಿಯಲ್ಲಿ,
ಮರುಭೂಮಿಯ ಗದ್ದೆಗಳಿಂದ ಬೇರ್ಪಡಿಸುವ ಮಧ್ಯದಲ್ಲಿ,
ಎಲ್ಲಿ ಸುಲ್ತಾನ, ಗುಲಾಮ ಎನ್ನುವುದು ಮರೆತಿದೆಯೊ-
ಎಲ್ಲಿ ಶಾಂತಿ ಮೆರೆದಿಹುದೋ ಮಹಮೂದನಿಗೆ ಚಿನ್ನದ ಗದ್ದುಗೆಯಲ್ಲಿ.
೧೨
ಹರಡಿಹ ರೆಂಬೆಗಳ ಕೆಳಗೆ ಪದ್ಯ ಪುಸ್ತಕ,
ಸುರಾಪಾತ್ರೆ ಹಾಗೂ ರೊಟ್ಟಿಯ ತುಂಡ ಜೊತೆ—ಪಕ್ಕ
ನನ್ನ ಬಳಿ ನೀ ಹಾಡುತಿರೆ ಕಾನನದಲಿ—
ಆಹಾ ಕಾನನವೇ ಎಂತಹ ಸ್ವರ್ಗ!
೧೩
ಹಾತೊರೆವರು ಹಲರು ಲೌಕಿಕ ವೈಭವಕ್ಕೆ;
ಇನ್ನು ಕೆಲರು ಪ್ರವಾದಿಯ ಮುಂದಿನ ಸ್ವರ್ಗಕ್ಕೆ;
ಆಹ, ತೆಗೆದುಕೋ ನಗದನ್ನು, ಬಿಟ್ಟು ಬಿಡು ಸಾಲವನ್ನ,
ಹಾಗೂ ಕಿವಿಕೊಡ ಬೇಡ ದೂರದ ನಗಾರಿಯ ಶಬ್ದಕ್ಕೆ!
೧೪
ನಮ್ಮ ಸುತ್ತ ಬಿರಿಯುವ ಗುಲಾಬಿಯ ನೋಡು-ಹೇಳುವಳು
“ ನಗುತ ಲೋಕಕ್ಕೆಲ್ಲಾ ಹಾರಿಸುವೆ ನಾ, ಕೇಳು,
ಒಮ್ಮೆಲೆ ನನ್ನ ಥೈಲಿಯ ರೇಷ್ಮೆಯ ಕುಂಚ ಹರಿಯುವುದು,
ಮತ್ತು ಅದರೊಳಗಿನ ಸಿರಿಯೆಲ್ಲಾ ಹರಡುವುದು ತೋಟದೊಳು.
೧೫
ಮತ್ತು ಬಂಗಾರದ ದಿನಸಿಯ ಬೆಳೆಯುವರು,
ಹಾಗೂ ಅದನ್ನ ಗಾಳಿಯಲಿ ಮಳೆಯಂತೆ ತೂರಿದವರು,
ಬೇರಾವುದಕ್ಕೂ ಅಷ್ಟು ಈ ಚಿನ್ನದ ಭೂಮಿಯನ ಉಳರು,
ಹಾಗೂ, ಹೂತ ನಂತರ ಪುನಃ ಅಗೆದು ತೆಗೆಯ ಬಯಸುವರು.
೧೬
ಬೂದಿಯಾಗಿವೆ ಮಾನವರ ಎದೆಯಾಳದ ಲೌಕಿಕ
ಬಯಕೆಗಳೆಲ್ಲ –
ಇಲ್ಲಾ ಚಿಗುರಿ ಮತ್ತೆ ತಕ್ಷಣ,
ಮರುಭೂಮಿಯ ಧೂಳಿನ ಮುಖದ ಮೇಲಿನ ಹಿಮದಂತೆ,
ಕಾಣೆಯಾಗುತದೆ ಒಂದೆರಡು ಗಂಟೆ ಮಾತ್ರ ಬೆಳಗುತ.
೧೭
ಯೋಚಿಸು, ರಾತ್ರಿ ಹಗಲಿನ ಸರತಿಯ ತಲೆಬಾಗಿಲಿನ
ಈ ಜರ್ಜರಿತ ಧರ್ಮಶಾಲೆಯಲಿ, ಹೇಗೆ ಸುಲ್ತಾನನ
ನಂತರ ಸುಲ್ತಾನನು ಅಟ್ಟಹಾಸದಲಿ ನೆಲೆಸಿದ ಪ್ರಾರಬ್ಧಿತ ಗಂಟೆಗಳ,
ಮತ್ತೆ ತೆರಳಿದ ಹಾದಿಯಲಿ ತನ್ನ.
೧೮
ಹೇಳಿಕೆಯಿದೆ ಸಿಂಹ ಮತ್ತೆ ಹಲ್ಲಿಗಳ ಆಸ್ತಾನವಿದೆಯಲ್ಲಿ
ಜಮ್ಶಿದನು ಕೀರ್ತಿಪತಾಕೆ ಹಾರಿಸಿದಲ್ಲಿ, ಮತ್ತು ಕುಡಿದು ಮತ್ತನಾದಲ್ಲಿ:
ಹಾಗೂ ನಿದ್ರಾಭಂಗವಾಗದು ಆ ಮಹಾ ಬೇಡ ಬಾಹ್ರಾಮನಿಗೆ,
ಇಂದು ಕಾಡು ಕತ್ತೆ ಆತನ ತಲೆಯ ತುಳಿಯುತಿದ್ದಲ್ಲಿ.
೧೯
ಯೋಚಿಸುವೆ ನಾ ಕೆಲವು ಸಲ, ಬಿರಿಯದು ರೋಜಾ ಸಹ ಅಷ್ಟು
ಕೆಂಪಗೆ ರಕ್ತಸ್ರಾವಿಸುವ ಸೀಜ಼ರನ ಹೂಳಿಟ್ಟೆಡೆ ಇರುವಷ್ಟು;
ತೋಟವು ಧರಿಸಿಹ ಪ್ರತಿಯೊಂದು ಹಾಯಾಸಿಂತ್ ಹೂವೂ
ಬಿದ್ದಿರಬೇಕು
ಆಕೆಯ ತೊಡೆಗೆ ಒಮ್ಮೆ ಸುಂದರವಾಗಿದ್ದ ತಲೆಗಳಿಂದಷ್ಟು.
೨೦
ನದಿಯ ಸಂಗಮದಿಂದ ನವಿರಾದ ಹಸಿರ ಗರಿಕೆದರಿರುವ
ಈ ಉಜ್ಜೀವಿಸುವ ಮೂಲಿಕೆಯು ನಾವು ಒರಗಿಹ -
ಹಾ, ಜಾಗ್ರತೆಯಾಗಿ ಒರಗದರ ಮೇಲೆ!
ಯಾರಿಗೆ ಗೊತ್ತು
ಚಿಮ್ಮಿದೆಯೊ ಅದು ಯಾವ ಸುಂದರ ತುಟಿಗಳಿಂದ!
<< ಹಿಂದೆ ---------------------------------------------- -------------------------------------------------- ಮುಂದೆ >>
ಇಂಗ್ಲಿಷ್: ಎಡ್ವರ್ಡ್ ಫಿಟ್ಜೆರಾಲ್ಡ್
ಕನ್ನಡಕ್ಕೆ: ಭಾರತಿ ದೇವಿ
© Bharathi Devi
