Tuesday, October 13, 2009

ಓಮಾರ್ ಕಯ್ಯಾಮನ ರುಬಾಯಿಯತ್ (೩)

೨೧
ಹಾ ಪ್ರಿಯೆ, ತುಂಬು ನನ್ನ ಲೋಟವ ಮರೆಸಲು
ಹಳೆಯ ದುಃಖಗಳ ಮತ್ತು ಮುಂದಿನ ಭಯಗಳ ಇಂದು:
ನಾಳೆ-- ಯಾಕೆ, ಕಳೆದೆಲ್ಲ ಏಳು ಸಾವಿರ ವರ್ಷಗಳೊಂದಿಗೆ,
ನಾಳೆ ಮೊದಲಿನಂತೆ ನಾನು ನಾನೇ ಆಗಿರಬಹುದು.

೨೨
ನಾವು ಪ್ರೇಮಿಸಿದ ಹಲರು, ಅತ್ಯಂತ ಸುಂದರ ಹಾಗೂ ಉತ್ತಮರು,
ತಮ್ಮ ಲೋಟದಿ ಒಂದೆರಡು ಬಾರಿ ಶೀಘ್ರದಿಂದ ಕುಡಿದರು
ಆತನ ಉರುಳುವ ಕಾಲದ ದ್ರಾಕ್ಷಾರಸವ,
ಒಬೊಬ್ಬರಾಗಿಯೇ ಮೌನವಾಗಿ ವಿಶ್ರಮಿಸಲು ಹರಿಯುವ ಮೊದಲು.

೨೩
ಇಂದಿಲ್ಲಿ ಅವರು ಬಿಟ್ಟು ತೆರಳಿದ ಈ ಕೋಣೆಯಲಿ
ಮಜಾ ಮಾಡುತ್ತಿಹ ನಾವು, ಈ ಹೊಸ ಹೂಗಳ ಧರಿಸಿಹ ವೈಶಾಖದಲಿ,
ನಾವೂ ಒಮ್ಮೆ ಈ ಭುವಿಯ ಒರಗು ಮಂಚದ ಕೆಳಗಿಳಿಯ ಬೇಕೆ-
ಯಾರಿಗೋಸುಗ ನಾವೇ ಒರಗು ಮಂಚವಾಗುತಲಿ?

೨೪
ಹಾ, ಅನುಭವಿಸು ಆದಷ್ಟು ನಾವು ಮಾಡಬಹುದಾದ ಖರ್ಚಿನಲಿ,
ಧೂಳಡಿಗೆ ನಾವೂ ಇಳಿಯುವ ಮೊದಲಿನಲಿ;
ಧೂಳಿಗೆ ಧೂಳು, ಧೂಳಡಿಯೆ ಮಲಗಲು,
ಮಧಿರೆಯಿಲ್ಲದಲಿ, ಸಂಗೀತವಿಲ್ಲದಲಿ, ಸಂಗೀತಗಾರನಿಲ್ಲದಲಿ, ಮತ್ತೆ – ಕೊನೆಯೇ ಇಲ್ಲದಲಿ!

೨೫
ಇದು ಒಂದೇ, ಇಂದಿನದಕ್ಕೆ ಮಾತ್ರ ಅಣಿಗೊಳಿಸುವವರಿಗೆ,
ಹಾಗೂ ನಾಳೆಯ ನಂತರವ ದಿಟ್ಟಿಸುವವರಿಗೆ,
ಕತ್ತಲಿನ ಬುರುಜಿಂದ ಕರೆಯುವ ಮ್ಯೂಝ್ಝಿನ್,
“ ಮೂರ್ಖರೇ! ಇಲ್ಲ ಇಲ್ಲಾಗಲೀ ಅಲ್ಲಾಗಲೀ ಪ್ರತಿಫಲ ನಿಮಗೆ.”

೨೬
ಯಾಕೆ, ಎರಡು ಲೋಕಗಳ ಬಗ್ಯೆ ಧೀಮಂತಿಕೆಯಿಂದೆ
ಚರ್ಚಿಸಿದ ಸಾಧು ಸಂತರೆಲ್ಲ- ತಳ್ಳಲ್ಪಟ್ಟಿದ್ದಾರೆ ಬದಿಗೆ
ಮೂರ್ಖ ಪ್ರವಾದಿಗಳಂತೆ; ಅವರ ನಿಂದಾತ್ಮಕ ಮಾತುಗಳು
ತೂರಾಡಿವೆ, ಹಾಗೂ ಅವರ ಬಾಯಿಗಳು ಧೂಳಿಂದ ಮುಚ್ಚಿದೆ.

೨೭
ಅಡಿಗಡಿಗೆ ಸಂದರ್ಶಿಸಿಹೆ ಕೌತುಕದಿ ನಾ ಎಳೆಯನಾಗಿರೆ,
ಪಂಡಿತರ ಹಾಗೂ ಸಾಧುಗಳ – ಮತ್ತು ಕೇಳಿಹೆ ಉದ್ಧಾಮ ಚರ್ಚೆ
ಅದರ ಮತ್ತು ಅದರ ಬಗ್ಯೆಯ: ಆದರೆ ಬಂದಿಹೆ
ಸರ್ವದಾ ನಾ ಹೋದ ಬಾಗಿಲಿಂದಲೇ ಹೊರಗೆ.

೨೮
ಅವರ ಜೊತೆ ವಿವೇಕದ ಬೀಜ ನಾ ಬಿತ್ತಿದೆ,
ಮತ್ತು ನನ್ನೆರಡು ಕೈಗಳಿಂದಲೇ ರೂಪಿಸಿ ಬೆಳೆಸಿದೆ;
ಮತ್ತೆ ಇಷ್ಟೇ ನನಗೆ ಫಲಿಸಿದ ಪೈರು –
“ ನೀರಿನಂತೆ ಬಂದೆ, ಹಾಗೂ ಗಾಳಿಯಂತೆ ಹೋಗುವೆ”

೨೯
ಬಂದಿಹೆ ಈ ವಿಶ್ವಕ್ಕೆ, ಗೊತ್ತಿಲ್ಲದೆ ಯಾಕೆ
ಯಾವಾಗ ಎಂದು, ಬೇಕಾಬಿಟ್ಟಿ ಹರಿಯುವ ನೀರ ಪ್ರವಾಹದಂತೆ;
ಹೋಗುವೆ ಇಲ್ಲಿಂದ, ಗಾಳಿಯು ಕಸದ ಜೊತೆ,
ಗೊತ್ತಿಲ್ಲದೆ ಎಲ್ಲಿಗೆಂದು, ಬೇಕಾಬಿಟ್ಟಿ ಬೀಸಿದಂತೆ.

೩೦
ಕೇಳದೇ, ಏನು, ಬಂದೆ ಎಲ್ಲಿಂದ ಅವಸರದಿ ಇಲ್ಲಿಗೆ?
ಮತ್ತು ಕೇಳದೇ, ಹೋಗುವುದು ಎಲ್ಲಿಗೆ ಅವಸರದಿ ಮುಂದೆ!
ಓ, ನಿಷಿದ್ಧ ಮಧಿರೆಯ ತುಂಬಿದ ಹಲ ಲೋಟಗಳು
ಮುಳುಗಿಸ ಬೇಕು ಇಂತಹ ಪೊಗರಿನ ನೆನಪನ್ನೇ!

<< ಹಿಂದೆ -------------------------------------------------- ಮುಂದೆ >>

ಇಂಗ್ಲಿಷ್: ಎಡ್ವರ್ಡ್ ಫಿಟ್ಜೆರಾಲ್ಡ್
ಕನ್ನಡಕ್ಕೆ: ಭಾರತಿ ದೇವಿ
© Bharathi Devi