೩೧
ಭೂಕೇಂದ್ರದಿ ಜನಿಸಿ ಏಳನೇ ದ್ವಾರದಿಂದ
ಮೇಲೆದ್ದು, ಹತ್ತಿ ಕುಳಿತೆ ನಾ ಶನಿಯ ಗುದ್ದುಗೆಯ,
ಬಿಚ್ಚಿಹುದು ಏಷ್ಟೊ ಗಂಟುಗಳ ಈ ಹಾದಿ;
ಆದರೆ ಬಿಡಿಸಲಿಲ್ಲ ಮಾತ್ರ ಮಾನವ ವಿಧಿಯ ಮಹಾ ಕಗ್ಗಂಟ.
೩೨
ಅಲ್ಲಿದ್ದ ಆ ಬಾಗಿಲಿಗೆ ನನಗೆ ಕೀಲಿಕೈ ಸಿಗಲಿಲ್ಲ;
ಬಹುಶಃ ಅಲ್ಲಿದ್ದ ಆ ಪರದೆಯಿಂದಾಗಿ ನನಗೇನೂ ತೋರಲಿಲ್ಲ:
ತುಸುಹೊತ್ತು ಹಲ ಸಣ್ಣ ಮಾತುಗಳಿದ್ದುವು ಅಲ್ಲಿ
ನನ್ನ ಮತ್ತು ನಿನ್ನ ಬಗ್ಯೆ– ಆ ಮೇಲೆ ನಮ್ಮ ಬಗ್ಯೆ ಮಾತೇ ಇರಲಿಲ್ಲ.
೩೩
ಉತ್ತರಿಸಲಾಗಲಿಲ್ಲ ಇಳೆಗೆ; ಹರಿಯುವ ನೇರಳೆಯಲಿ ಶೋಕಿಸುವ
ಅಂಬುಧಿಗೆ, ಅವರ ದಿಕ್ಕಿಲ್ಲದ ದೊರೆಯ ವಿಚಾರ;
ಆಗಲಿಲ್ಲ ಉರುಳುವ ಸ್ವರ್ಗಕ್ಕೂ, ಆತನೆಲ್ಲಾ ಸನ್ನೆಗಳ
ಬಿಡಿಸಿ ಮುಚ್ಚಿಡುತಿದ್ದರೂ ತೋಳುಗಳು ನಿಶೆ ಉಷೆಯಂಗಿಯ.
೩೪
ಆಗ ಪರದೆಯ ಹಿಂದೆ ಕೆಲಸ ಮಾಡುವ ನನ್ನೊಳಗಿನ
ನಿನ್ನಿಂದಾಗಿ, ಎತ್ತಿರೆ ಕೈಯ್ಯ ನಾ
ಕಂಡಿತೊಂದು ದೀಪ ಕತ್ತಲ ಮಧ್ಯದಲ್ಲಿ; ಕೇಳಿತಾಗ
ಎಲ್ಲಿಂದಲೋ-“ ನಿನ್ನೊಳಗಿನ ನಾನು ಕುರುಡ!”
೩೫
ಆ ಮೇಲೆ ನಾ ವಾಲಿರೆ ಈ ಬಡ ಮಣ್ಣ ಮಡಕೆಯ
ತುಟಿಗೆ, ಗುಟ್ಟನ್ನರಿಯೆ ನನ್ನೀ ಜೀವದ:
ತುಟಿಯಿಂದ ತುಟಿಗೆ ಪಿಸುಗುಟ್ಟಿತದು-“ಜೀವವಿರುವವರೆಗೂ,
“ಕುಡಿ!-ಯಾಕಂದರೆ ಒಮ್ಮೆ ಸತ್ತರೆ, ಬಾರೆ ನೀ ಮರಳಿ ಪುನಹ.”
೩೬
ನನಗನಿಸುತ್ತೆ, ಅಂತಹ ಭ್ರಷ್ಟರ ಸ್ಪಷ್ಟೊಚ್ಚಾರಕ್ಕೆ
ಉತ್ತರಿಸುವ ಪಾತ್ರೆಯೊಂದಿದ್ದಿರಬೇಕು ಒಂದು ಕಾಲಕ್ಕೆ,
ಮತ್ತದು ಕುಡಿದಿರಬೇಕು; ಆಹಾ! ನಾ ಮುತ್ತಿಟ್ಟ ಆ ಜಡ ತುಟಿ,
ಇನ್ನೆಷ್ಟಿವೆಯೋ ಮುತ್ತುಗಳು ಸ್ವೀಕರಿಸಲಿಕ್ಕೆ -ಹಾಗೂ ಕೊಡಲಿಕ್ಕೆ!
೩೭
ಯಾಕಂದರೆ ನನಗಿನ್ನೂ ನೆನಪಿದೆ ಹಾದಿಯಲಿ ನಿಂತದ್ದು
ಕುಂಬಾರ ಆವೆ ಮಣ್ಣನ್ನ ಗುಮ್ಮುವುದನ್ನ ವೀಕ್ಷಿಸಲು:
ಮತ್ತೆ ತನ್ನೆಲ್ಲಾ ನಿರ್ನಾಮ ಗೊಂಡ ನಾಲಿಗೆಯಿಂದ
“ಮೆತ್ತಗೆ, ತಮ್ಮಾ, ಮೆತ್ತಗೆ, ಪ್ರಾರ್ಥಿಸುವೆ !” ಎಂದದು ಗೊಣಗಿದ್ದು.
೩೮
ಉರುಳಲಿಲ್ಲವೇ ತಲೆತಲಾಂತರಗಳಿಂದ
ಅಂತಹ ಕಥೆಗಳು ಇಳಿ ವಯಸ್ಸಿನ ವೃದ್ಧರಿಂದ
ಅಂತಹ ನೆನೆದ ಮುದ್ದೆ ಮಣ್ಣಿಂದಲೇ
ಸೃಷ್ಟಿಕರ್ತ ಮನುಷ್ಯನ ಎರಕ ಹೊಯ್ದ ಎನ್ನುವುದ?
೩೯
ಒಂದು ಹನಿಯನ್ನೂ ಬೀಳಿಸೆವು ನಾವು ನಮ್ಮ ಲೋಟಗಳಿಂದ
ಭೂಮಿಗೆ ಕುಡಿಯಲು, ಮತ್ತಾಕೆ ಅಪಹರಿಸಿ ಕೆಳಗೆ ಅದರ
ಪರಿಹರಿಸಬಹುದು ಬಹಳ ಕೆಳಗೆ ಅಲ್ಲಡಗಿಹ
ಪ್ರಾಚೀನ ಕಾಲದ, ಯಾವುದೋ ಕಣ್ಣ ತಲ್ಲಣಗಳ ಬೆಂಕಿಯ.
೪೦
ಮತ್ತೆ ಟ್ಯೂಲಿಪ್ ಹೂವು ಬೆಳಗಿನ ಆಹಾರಕ್ಕೆ
ದಿವಿಜ ದ್ರಾಕ್ಷಾರಸವ ಮಣ್ಣಲ್ಲಿ ಹುಡುಕುವಂತೆ,
ನೀನೂ ಮಾಡುವಿಯೋ ಅಷ್ಟೇ ಭಕ್ತಿಪೂರ್ವಕ, ನಿನ್ನ ಸ್ವರ್ಗದಿಂದ ಇಳೆಗೆ
ಬೋರಲು ಹಾಕುವ ವರೆಗೂ - ಖಾಲಿ ಲೋಟದಂತೆ.
<< ಹಿಂದೆ -------------------------------------------------- ಮುಂದೆ >>
ಇಂಗ್ಲಿಷ್: ಎಡ್ವರ್ಡ್ ಫಿಟ್ಜೆರಾಲ್ಡ್
ಕನ್ನಡಕ್ಕೆ: ಭಾರತಿ ದೇವಿ
© Bharathi Devi
