೪೧
ತಬ್ಬಿಬ್ಬಾಗದಿರು ಮಾನವಿಕ ಯಾ ದೈವಿಕವೆಂದಿನ್ನು,
ಬಿಟ್ಟು ಬಿಡು ಗಾಳಿಗೆ ನಾಳೆಯ ಸಮಸ್ಯೆಗಳೆಲ್ಲವನ್ನು,
ಮತ್ತು ಸುರೆಯ ತಂದ ಬಳುಕುವ ಆ ಸಖಿಯ
ಕೇಶರಾಶಿಯಲಿ ಕಳೆದು ಕೋ ನಿನ್ನೆ ಬೆರಳುಗಳನ್ನು.
೪೨
ಮತ್ತೆ ನೀ ಕುಡಿದಾ ಸುರೆ, ನೀ ಒತ್ತಿದಾ ಅವುಡು,
ಅಂತ್ಯವಾದರೆ, ಎಲ್ಲವೂ ಶುರು ಹಾಗೂ ಕೊನೆಯಾಗುವಲ್ಲೇ - ಹೌದು;
ಅಂದು ಕೋ ಆಗ ನಿನ್ನೆ ಏನಾಗಿದ್ದಿಯೋ ಅದೇ
ಇಂದು- ಇದಕ್ಕಿಂತ ಏನೂ ಕಡಿಮೆಯಿಲ್ಲ ನಾಳೆ ನೀನು.
೪೩
ಅದ್ದರಿಂದ ಕಡು ಬಣ್ಣದ ಮದ್ಯದ ದೇವದೂತ
ಕೊನೆಗೂ ನದಿ ತೀರದಲ್ಲಿ ನಿನಗೆ ಸಿಕ್ಕಿದಾಗ,
ಆತನ ಲೋಟವ ಕೊಟ್ಟು, ನಿನ್ನಾತ್ಮವ ತುಟಿಗಳಲ್ಲಿರಿಸಿ
ಬರಿದುಮಾಡಲು ಕರೆದಲ್ಲಿ – ಪಡ ಬೇಡ ಏನೂ ಸಂಕೋಚ.
೪೪
ಯಾಕೆ, ಆತ್ಮವೇ ಧೂಳನ್ನ ಬದಿಗೆ ಕೊಡವಿ,
ಮತ್ತೆ ಬೆತ್ತಲೆಯಾಗಿ ತೇಲಲು ಸ್ವರ್ಗದ ಗಾಳಿಯಲಿ,
ಅಪಮಾನವಲ್ಲವೆ- ಆತನಿಗೆ ಅಪಮಾನವಲ್ಲವೆ
ಬದ್ಧವಾಗುವುದು ಈ ಮಣ್ಣ ಕಳೇಬರದ ಊನದಿ?
೪೫
ಅದು ಬರೇ ವಿಶ್ರಾಂತಿಗೆ ಡೇರೆ ಅತನ ಒಂದು ದಿನಕ್ಕೆ
ಕಳುಹುವ ಮುನ್ನ ಸುಲ್ತಾನನೊಬ್ಬನನ್ನ ಸಾವಿನ ಸಾಮ್ರಾಜ್ಯಕ್ಕೆ;
ಸುಲ್ತಾನ ಹುಟ್ಟುವ, ಮತ್ತು ತದಕುವ ಕತ್ತಲಿನ ಕೆಲಸದವ,
ಮತ್ತೆ ಅಣಿಗೊಳಿಸುವ ಇನ್ನೊಬ್ಬ ಅಥಿತಿಯ ವಾಸಕ್ಕೆ.
೪೬
ಹೆದರದಿರು, ನಿನ್ನ ನನ್ನ ಲೆಖ್ಖವನೆಲ್ಲಾ ಮುಗಿಸುವುದು
ನಮ್ಮೀ ಇರತ್ವ ಇಲ್ಲದಿರೆ, ಗೊತ್ತಿರದು ಮುಂದೆಂದೂ ಅದು;
ಸುರಿದಿಹಳು ಅನಂತ ಸಖಿ ತನ್ನಾ ಪಾತ್ರೆಯಿಂದ ಮಿಲಿಯಗಟ್ಟಲೆ
ನಮ್ಮಂತಹ ಗುಳ್ಳೆಗಳ, ಹಾಗೂ ಸುರಿಯುವಳು ಇನ್ನೂ ಮುಂದು.
೪೭
ನಾನೂ ನೀನೂ ಈ ಪರದೆಯ ಹಿಂದೆ ಮಾಯವಾದಾಗ,
ಓ, ಈ ಲೋಕವು ಮುಂದುವರಿಯುವುದು ಬಹು ದೀರ್ಘ ಕಾಲ,
ಲಕ್ಷಿಸುವುದದು ನಮ್ಮ ಬರ ಹೋಗುಗಳ
ಲಕ್ಷಿಸುವಷ್ಟೆ ಸಾಗರ ತನಗೆ ಕಲ್ಲನೊಂದೆಸೆದಾಗ.
೪೮
ಒಂದು ಗಳಿಗೆಯ ನಿಲ್ದಾಣ - ನಾನೆಂಬ ಕ್ಷಣಿಕವ ಸವಿ
ನಿರರ್ಥಕದ ನಡುವೆಯ ಈ ಕೂಪದಲ್ಲಿ –
ಇಲ್ನೋಡು - ಈ ಮಾಯೆಯ ಯಾತ್ರಿಕರ ತಂಡ ಮತ್ತೆ ತಲಪಿಹುದು
ಅದು ಹೊರಟ ಶೂನ್ಯವನ್ನೇ-ಓ, ಮಾಡು ಅವಸರದಲಿ!
೪೯
ನೀ ಕಳೆಯುವಿಯಾ ನಿನ್ನ ಚಮಕಿಸುವ ಇರುವಿಕೆಯ
ಆ ರಹಸ್ಯವ ಅರಿಯುಲೆಂದೇ- ಬೇಗ ಹೇಳು, ಗೆಳೆಯ!
ಸುಳ್ಳಿಂದ ಸತ್ಯವ ಬೇರ್ಪಡಿಸಬಹುದು ಬರೇ ಕೂದಲೊಂದು -
ದಯವಿಟ್ಟು ಹೇಳು-ಯಾವುದರ ಮೇಲೆ ಆಧರಿಸಿದೀ ಜೀವ?
೫೦
ವಿಭಜಿಸಬಹುದು ಬಹುಶಃ ಕೂದಲೊಂದು ಸುಳ್ಳನ್ನು ಸತ್ಯದಿಂದ;
ಹೌದು; ಮತ್ತು ಸುಳಿಹು ಕೊಡುವುದಾದರೆ ಬರೇ ಒಂದಕ್ಷರ-
ಕಂಡು ಹಿಡಿಯಲೂ ಬಹುದು ನೀ ಸುಳಿವ- ಅಮೂಲ್ಯ ಭಂಡಾರಕ್ಕೆ,
ಮತ್ತೆ ಪ್ರಾಯಶಃ ಆ ಕಾರಣ ಪುರುಷನಿಗೆ ಕೂಡ;
<< ಹಿಂದೆ -------------------------------------------------- ಮುಂದೆ >>
ಇಂಗ್ಲಿಷ್: ಎಡ್ವರ್ಡ್ ಫಿಟ್ಜೆರಾಲ್ಡ್
ಕನ್ನಡಕ್ಕೆ: ಭಾರತಿ ದೇವಿ ಮತ್ತು ಮಧುರ್ ಆತ್ರೇಯ
© Bharathi Devi
