Thursday, October 22, 2009

ಓಮಾರ್ ಕಯ್ಯಾಮನ ರುಬಾಯಿಯತ್ (೭)

೫೬
ಯಾಕಂದರೆ “ಇದೆ” ಹಾಗೂ “ಇಲ್ಲ” ಎಂಬುದ ಸೂತ್ರ ಮತ್ತು ಗೆರೆಗಳಿಂದ
ಮತ್ತು “ಮೇಲೆ ಮತ್ತು ಕೆಳಗೆ” ಎಂಬುದ ನಾ ನಿರೂಪಿಸುವೆ ತರ್ಕಗಳಿಂದ,
ಶೋಧಿಸಬಹುದಾದ ಯಾವುದರಲ್ಲೂ
ಇಳಿದಿರಲಿಲ್ಲ ಅಷ್ಟು ನಾ ಆಳ, ಬಿಟ್ಟು ದ್ರಾಕ್ಷಾರಸವೊಂದ .

೫೭
ಹಾ, ಜನರನ್ನುವರು, ನನ್ನೆಲ್ಲಾ ಲೆಕ್ಕಾಚಾರಗಳಿಂದ
ಕಡಿಮೆ ಮಾಡುವೆ ವರುಷವ ಎಣಿಕೆಗೆ ಸುಲಭವಾಗಲೆಂದು? – ಇಲ್ಲ,
ಅದು ಬರೇ ಹೊಡೆದುಹಾಕುವುದು ಪಂಚಾಂಗದಿಂದ
ಹುಟ್ಟದ ನಾಳೆಯ ಮತ್ತು ಸತ್ತ ನಿನ್ನೆಯ.

೫೮
ಇತ್ತೀಚಿಗೆ, ಈ ಪಥಿಕಾಶ್ರಮದ ಬಾಗಿಲ ಸಂಧಿಯಿಂದ ಬಂತು
ಬೆಳಗುತ್ತಾ ಕತ್ತಲ ಬೇಧಿಸಿ ದೇವದೂತನ ಆಕಾರವೊಂದು
ಪಾತ್ರೆಯೊಂದ ಹೆಗಲಮೇಲೇರಿಸಿ; ಮತ್ತೆ
ಆದೇಶಿಸಿದನಾತ ನನ್ನ ಅದರ ರುಚಿ ನೋಡೆ- ನೋಡಿದರೆ ದ್ರಾಕ್ಷಿಯಾಗಿತ್ತದು!

೫೯
ಆ ದ್ರಾಕ್ಷಿ ತರ್ಕ ಶಾಸ್ತ್ರದ ಜೊತೆ ಪರಿಪೂರ್ಣವಾಗುವಂತಾದ್ದು
ಜಗಳಾಡುವ ಎಪ್ಪತ್ತೆರಡು ಪಂಥಗಳೂ ಖಂಡಿಸುವಂತಾದ್ದು:
ಆ ಮಹಾ ರಸಸಿದ್ಧಾಂತಿ ಸ್ವಲ್ಪವೇ ಸಮಯದೊಳು
ಜೀವನದ ಸೀಸವ ಚಿನ್ನವಾಗಿ ಪರಿವರ್ತಿಸುವಂತಾದ್ದು;

೬೦
ಆ ಪ್ರಬಲ ಮಹಮದನು, ಅಲ್ಲಾಃ ನ ಉಸಿರಾಡುವ ಅಧೀಶ,
ಎಲ್ಲಾ ಅಪನಂಬಿಕೆಗಳ ಹಾಗೂ ಆತ್ಮವ ಪೀಡಿಸುವ
ಭಯ ಮತ್ತು ದುಗುಡಗಳ ಕಪ್ಪು ರಾಶಿಯ
ತೂರಾಡುವನು ತನ್ನ ಮುಂದು ಸುಂಟರಗಾಳಿಯಂತ ತನ್ನ ಖಡ್ಗದಿಂದ.

೬೧
ಯಾಕೆ, ಈ ರಸವು ದೇವರ ಬೆಳೆಯಾದರೆ, ಯಾರಿಗಿದೆ ಧೈರ್ಯ
ದೂಶಿಸಲು ಪಾಶವೆಂದು ಹೊಸೆದ ಈ ಬಳ್ಳಿಯ ಕೊಡಿಯ?
ಇದೊಂದು ವರ, ಉಪಯೋಗಿಸಬೇಕು ನಾವದನ, ಅಲ್ಲವೇನು?
ಶಾಪವಿದಾದರೆ- ಯಾಕೆ, ಹಾಗಾದರೆ, ಯಾರಿಲ್ಲಿಟ್ಟಿಹರಿದನ್ನ?

೬೨
ನಾನೀ ಜೀವದ ಮುಲಾಮನ್ನ ಪರಿತ್ಯಾಗ ಮಾಡಬೇಕು, ಖಂಡಿತ,
ಕೆಲ ಅನಂತರದ ಎಣಿಕೆಯ ನಂಬಿ ಭಯದಿಂದ
ಇಲ್ಲಾ, ಕಣಿಗಾರನ ಪಾನದ ನಿರೀಕ್ಷೆಗೆ ಮರುಳುಹೋಗಿ,
ಲೋಟವ ತುಂಬುವನೆಂದು-ಧೂಳಲ್ಲಿ ಚೂರುಚೂರಾದಾಗ!

೬೩
ನರಕದ ಬೆದರಿಕೆಗಳಲ್ಲಿ ಮತ್ತು ಸ್ವರ್ಗದ ನಿರೀಕ್ಷೆಗಳಲ್ಲಿ
ಒಂದು ಮಾತ್ರ ನಿಜ –ಸಾಗುವುದು ಈ ಜೀವನ ತ್ವರೆಯಲ್ಲಿ;
ಈ ಒಂದು ವಿಚಾರ ಸತ್ಯ ಮತ್ತೆ ಉಳಿದದ್ದೆಲ್ಲಾ ಸುಳ್ಳು;
ಸಾಯುವುದು ಅನವರತ ಒಮ್ಮೆ ಅರಳಿದ ಹೂವಿಲ್ಲಿ.

೬೪
ವಿಚಿತ್ರ, ಅಲ್ಲವೇ? ಹಾದು ಹೋಗಿಹರು ಅಸಂಖ್ಯಾತ ಜನರು
ಆ ಕತ್ತಲ ಬಾಗಿಲಿನೊಳು ನಮ್ಮ ಮೊದಲು,
ಒಬ್ಬರಾದರೂ ಬಂದಿಲ್ಲ ವಾಪಾಸು ನಮಗೆ ಹಾದಿಯ ಬಗ್ಯೆ ಹೇಳಲು,
ನಾವೂ ಪಯಣಿಸಬೇಕು ಅದನ್ನ ಕಂಡು ಹಿಡಿಯಲು.

೬೫
ನಮ್ಮ ಮೊದಲು ಹುಟ್ಟಿ ಭವಿಷ್ಯವಾದಿಗಳಾಗಿ ದಹಿಸಿದ
ಧಾರ್ಮಿಕರ ಮತ್ತು ವಿದ್ವಾಂಸರ ಜ್ನಾನೋದಯ,
ಎಲ್ಲಾ ಬರೇ ಕಥೆಗಳು, ಅದನ್ನವರು ನಿದ್ದೆಯಿಂದೆದ್ದು
ಹೇಳಿದರು ತಮ್ಮಸಂಗಾತಿಗಳಿಗೆ, ತೆರಳಿದರು ನಿದ್ರೆಗೆ ಅನಂತರ.


<< ಹಿಂದೆ -------------------------------------------------- ಮುಂದೆ >>



ಇಂಗ್ಲಿಷ್: ಎಡ್ವರ್ಡ್ ಫಿಟ್ಜೆರಾಲ್ಡ್
ಕನ್ನಡಕ್ಕೆ: ಭಾರತಿ ದೇವಿ ಮತ್ತು ಮಧುರ್ ಆತ್ರೇಯ
© Bharathi Devi