Monday, November 15, 2010

ಆತ ಬರುವ

ಆತ ಬರುವ, ಆಗಸ ಹಿಂದೆಂದೂ ಎಚ್ಚರದಲ್ಲಿ ಯಾ ಕನಸಲ್ಲಿ ನೋಡದ ಚಂದ್ರನಂತೆ,
ಯಾವ ಪ್ರವಾಹವೂ ಆರಿಸಲಾಗದ ಅಚಲಜ್ವಾಲೆಯ ಕಿರೀಟ ಧರಿಸಿ.
ಓ ಸ್ವಾಮಿಯೇ, ನಿನ್ನ ಪ್ರೇಮದ ಸುರಾಪಾತ್ರೆಯಲಿ ನನ್ನೀ ಆತ್ಮ ಈಜುತಿದೆ,

ಹಾಗೂ ಹಾಕಿದೆ ನನ್ನ ದೇಹದ ಮಣ್ಣಿನ ಮನೆಯ ಮುಳುಗಿಸಿ!

ಆ ದ್ರಾಕ್ಷೆಯ ವಿಧಾತನ ನನ್ನ ಒಂಟಿ ಹೃದಯ ಸ್ನೇಹ ಬೆಳೆಸಿದ ಶುರುವಿನಲಿ,
ದಿಗ್ಗೆಂದು ಹತ್ತಿ ಉರಿಯಿತು ಮದಿರೆಯು ನನ್ನೊಳು, ತುಂಬಿ ಹರಿಯಿತು ನರನಾಡಿಗಳು;
ಆದರೆ ಧ್ವನಿಯೊಂದು ಧರೆಗಿಳಿಯಿತು, ತುಂಬಿದಾಗ ಆತನ ಮೂರ್ತಿ ನನ್ನ ಕಂಗಳಲಿ:
’ಓ ಸುರಾ ಪ್ರಭುವೆ ಮತ್ತು ಅಪ್ರತಿಮ ಲೋಟವೆ, ಬಲು ಭೇಶ್ ನೀವುಗಳು!’

ಬಲವಾದ ಒಲವಿನ ತೋಳು ಪ್ರತಿ ಕತ್ತಲ ಮನೆಯ ಸವರಿದಾಗ ನೆಲದಿಂದ ಸೂರಿನ ವರೆಗೆ,
ಬಂಗಾರದ ಕಿರಣಗಳ ಸೆರೆ ಹಿಡಿದಿಹುವು ಒಲ್ಲದ ಕಂಡಿಗಳು.
ಈ ಒಲವಿನ ಸಾಗರದ ಅಚಾನಕ ಆಸ್ಪೋಟನೆಯ ಕಂಡ ನನ್ನೆದೆ,
ನೆಗೆಯಿತು ತಡೆಯಿಲ್ಲದೆ, ಹೇಳುತ್ತಾ, ’ ಹಿಡಿಯಿರಿ ನನ್ನ ಈಗ ಯಾರಾದರು!’

ಚಲಿಸುತಿಹ ಸೂರ್ಯನ ಹಿಂದೆ ಹೀಗೆ ಮೋಡಗಳು ಓಡುತಿರಲು,
ಓ ಟಾಬ್ರಿಜ಼ಿನ ಸೂರ್ಯನೆ, ಹೃದಯಗಳೆಲ್ಲವೂ ನಿನ್ನ ಗಮನಿಸುತಿಹುವು!

ಕನ್ನಡಕ್ಕೆ - ಭಾರತಿ ದೇವಿ
From the English Translation by R. A. Nicholson

'Persian Poems', an Anthology of verse translations
edited by A.J.Arberry, Everyman's Library, 1972.