Wednesday, November 24, 2010

ಈ ಆಧ್ಯಾತ್ಮಿಕ ಕಂಡಿ-ಗಿರಾಕಿಗಳು

ಸುಮ್ಮ ಸುಮ್ಮನೆ ’ಅದಕ್ಕೆಷ್ಟು?’ ಓ ನಾ ಸುಮ್ಮನೆ ನೋಡುವುದಷ್ಟೆ
ಅನ್ನುವರು ಈ ಆಧ್ಯಾತ್ಮಿಕ ಕಂಡಿ-ಗಿರಾಕಿಗಳು.
ನೂರಾರು ವಸ್ತುಗಳ ಎತ್ತಿ ನೋಡುವರು ಮತ್ತು ಕೆಳಗಿಡುವರು,
ಅಸಲಿಲ್ಲದ ಛಾಯೆಗಳು.

ಖರ್ಚಾಗಿದ್ದು ಅಕ್ಕರೆ, ಉಳಿದದ್ದು ಅತ್ತು ಒದ್ದೆಯಾದ ಎರಡು ಕಂಗಳು.
ಆದರೂ ಇವರು ಅಂಗಡಿಗೆ ಹೋಗುವರು,
ಮತ್ತೆ ಅವರ ಇಡೀ ಜೀವನ ಕಳೆದು ಹೋಗುವುದು ಒಮ್ಮೆಲೇ
ಆ ಒಂದು ಕ್ಷಣದಲಿ ಆ ಅಂಗಡಿಯಲಿ.

ಎಲ್ಲಿ ಹೋಗಿದ್ದೆ?  "ಎಲ್ಲೂ ಇಲ್ಲಾ."
ಏನು ತಿಂದೆ? "ಹೆಚ್ಚಿನದೇನಿಲ್ಲ."

ಖರೀದಿಸು ಏನಾದರೂ ನಿನಗೇನು ಬೇಕೆಂದು ತಿಳಿಯದಿದ್ದರೂ,
ವಿನಿಮಯ ವ್ಯವಹಾರದ ಪ್ರವಾಹದಲಿ ಭಾಗಿಯಾಗಲು.

ಶುರುಮಾಡು ದೊಡ್ದದೊಂದು ಮೂರ್ಖ ಯೋಜನೆ
ನೋಹಾನಂತೆ.

ಜನರೇನಂದುಕೊಳ್ಳುವರು ನಿನ್ನ ಬಗ್ಯೆ ಎಂಬುದರಿಂದ
ಖಂಡಿತವಾಗಿಯೂ ಏನೂ ಬದಲಾಗುವುದಿಲ್ಲ.


ಕನ್ನಡಕ್ಕೆ - ಭಾರತಿ ದೇವಿ
ಮೂಲ - Rumi, 'We Are Three', Mathnawi VI, 831-845